ದಕ್ಷಿಣ ಕನ್ನಡ

ಎಂಡೋ ಸಂತ್ರಸ್ತರಿಗೂ ಸೂಕ್ತ ಪರಿಹಾರ ಬಜೆಟ್‌ನಲ್ಲಿ ಪ್ರಕಟಿಸಲು ಆಗ್ರಹ

Published On :




ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ ಮತ್ತು ಬಂಟ್ವಾಳ ತಾಲೂಕುಗಳ ಹಲವಾರು ಗ್ರಾಮಗಳಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಸಿಂಪಡಿಸಿದ ಎಂಡೋ ಸಲ್ಫಾನಿನ ದುಷ್ಪರಿಣಾಮಗಳಿಂದ ಪೀಡಿತರಾದ ಎಲ್ಲ ಸಂತ್ರಸ್ತರಿಗೆ ಸೂಕ್ತ ಪರಿಹಾರ, ಪುನರ್ವಸತಿ ಮತ್ತು ಚಿಕಿತ್ಸಾ ಸೌಲಭ್ಯವನ್ನು ಪ್ರಸ್ತುತ ಬಜೆಟ್‌ನಲ್ಲಿ ಪ್ರಕಟಿಸಬೇಕೆಂದು ಕೊಕ್ಕಡ ಎಂಡೋ ವೀರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಮತ್ತು ಸಂಪುಟದ ಕೆಲ ಸದಸ್ಯರು ಎಂಡೋ ಪೀಡಿತರು ಮತ್ತು ಮಾಧ್ಯಮಗಳಲ್ಲಿ ಈ ಸಂತ್ರಸ್ತರಿಗೆ ಸೂಕ್ತ ಪರಿಹಾರ, ಪುನರ್ವಸತಿ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ನೀಡುವಲ್ಲಿ ಮಾದರಿ ಪ್ಯಾಕೇಜ್ ಪ್ರಕಟಿಸಿದ್ದಾರೆ. ಇದನ್ನು ಈ ಬಜೆಟ್‌ನಲ್ಲಿ ಕಡ್ಡಾಯವಾಗಿ ಮಂಜೂರುಗೊಳಿಸುವಂತೆ ಗೌಡ ಆಗ್ರಹಿಸಿದ್ದಾರೆ.
ದಾರಿ ತಪ್ಪಿಸುವ ಅಧಿಕಾರಿಗಳು-ಆತಂಕ: ನ್ಯಾಯಾಲಯವು ಎಂಡೋ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ದಿಟ್ಟ ಹೆಜ್ಜೆ ಇಡುತ್ತಿದೆ. ಆದರೆ ಅಧಿಕಾರಿಗಳು ಸೂಕ್ತ ರೀತಿ ಸ್ಪಂದಿಸದೆ ನ್ಯಾಯಾಲಯದ ದಾರಿ ತಪ್ಪಿಸುತಿದ್ದಾರೆ ಎಂಬ ಸಂಶಯ ಮೂಡುತ್ತಿದೆ. ಯಾಕೆಂದರೆ ಕಳೆದ ಡಿಸೆಂಬರ್‌ನಲ್ಲಿ ಎಂಡೋ ಸಂತ್ರಸ್ತರನ್ನು ಗುರುತಿಸಲು ಆರೋಗ್ಯ ಇಲಾಖೆಗೆ ಸೂಚನೆ ನಿಡಿದಾಗ ನಡೆಸಿದ ವೈದ್ಯಕೀಯ ಶಿಬಿರದಲ್ಲಿ ಸಂತ್ರಸ್ತ ಕುರಿತು ತೆಗೆದುಕೊಂಡ ಮಾನದಂಡಗಳು ಏನೆಂಬುದನ್ನು ಇನ್ನು ಪ್ರಕಟಿಸಿಲ್ಲ ಎಂದು ಅವರು ನೆನಪಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಬೇಡಿಕೆಗಳು: 1. ಪ್ರತಿ ಸಂತ್ರಸ್ತರಿಗೆ ತಲಾ ರು. 5 ಲಕ್ಷ ಪರಿಹಾರ ಮತ್ತು ಪ್ರತಿ ತಿಂಗಳು ರು. 3 ಸಾವಿರ ಮಾಸಾಶನ ನೀಡಬೇಕು.
2. ತಾಲೂಕಿಗೊಂದು ಶಾಶ್ವತ ಪುನರ್ವಸತಿ ಕೇಂದ್ರ ಮತ್ತು 3 ಗ್ರಾಮಗಳಿಗೊಂದು ಪಾಲನ ಕೇಂದ್ರ ನೀಡಬೇಕು. ಈ ಕೇಂದ್ರಗಳ ನಿರ್ವಹಣೆಯನ್ನು ಸರ್ಕಾರವೇ ಮಾಡಬೇಕು.
3. ಎಂಡೋ ಪೀಡಿತ ಪ್ರದೇಶಗಳಲ್ಲಿ ಅವಿವಾಹಿತರ ವಂಶವಾಹಿನಿ ಪರೀಕ್ಷೆ ಮತ್ತು ಗರ್ಭಿಣಿಯರಿಗೆ ಸ್ಕಾನಿಂಗ್ ನಡೆಸಬೇಕು.
4. ಈ ಪ್ರದೇಶಗಳಲ್ಲಿ ಸಂಚಾರಿ ಆಸ್ಪತ್ರೆಗಳನ್ನು ಆರಂಭಿಸಬೇಕು ಮತ್ತು ಪಾಲನ ಕೇಂದ್ರಗಳಿಗೆ ಪ್ರತೀ ತಿಂಗಳು ತಜ್ಞ ವೈದ್ಯರು ಭೇಟಿ ನೀಡಬೇಕು.
5. ಪ್ರತಿ ಸಂತ್ರಸ್ತರಿಗೆ ಅಂತ್ಯೋದಯ ಪಡೀತರ ಚೀಟಿ, ಸ್ಮಾರ್ಟ್ ಕಾರ್ಡ್ ರಾಜ್ಯಾದ್ಯಂತ ಸಂಚರಿಸಲು ಉಚಿತ ಬಸ್‌ಪಾಸ್ ನೀಡಬೇಕು.
6. ಈ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸುಸಜ್ಜಿತ ಸಮುದಾಯ ಆಸ್ಪತ್ರೆಗಳಾಗಿ ಮೇಲ್ದರ್ಜೆಗೆ ಏರಿಸಬೇಕು.
7. ಅಂಗವಿಕಲರಿಗೆ ಸಲಕರಣೆ ಮತ್ತು ಕೌಶಲ್ಯ ವೃದ್ಧಿಗೆ ವ್ಯವಸ್ಥೆ ಮಾಡಬೇಕು.
8. ಪೀಡಿತರ ಕುಟುಂಬಕೊಂದು ಉದ್ಯೋಗ ಮತ್ತು ಬಡ್ಡಿ ರಹಿತ ಸಾಲ ನೀಡಬೇಕು.
9. ಜಿಲ್ಲಾ ಕೇಂದ್ರಗಳ ಎಲ್ಲಾ ಸುಸಜ್ಜಿತ ಖಾಸಗಿ ಆಸ್ಪತ್ರೆಗಳಲ್ಲಿ  ಸಂತ್ರಸ್ತರಿಗೆ ಉಚಿತ ಚಿಕಿತ್ಸಾ ಸೌಲಭ್ಯ ನೀಡಬೇಕು.
10. ಈ ಪ್ರದೇಶಗಳನ್ನು ಎಂಡೋ ಪೀಡಿತ ಎಂದು ಘೋಷಿಸಿ ವಿಶೇಷ ಅನುದಾನ ಬಿಡುಗಡೆಗೊಳಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.