ಜೈನಬಸದಿಯ 12 ಅಮೂಲ್ಯ ವಿಗ್ರಹ ಕಳವು
ಮಂಗಳೂರು: ಮೂಡುಬಿದರೆಯ ಸಿದ್ಧಾಂತ ಪ್ರತಿಮಾ ದರ್ಶನ ಬಸದಿಗೆ ನುಗ್ಗಿ ಕೋಟ್ಯಂತರ ಮೌಲ್ಯದ ನೀಲ, ಬಂಗಾರ, ಹಸಿರು, ವಜ್ರದ 12 ಪ್ರಾಚೀನ ವಿಗ್ರಹಗಳನ್ನು ಅಪಹರಿಸಲಾಗಿದೆ.
ಮೂಡುಬಿದರೆಯಲ್ಲಿ 18 ಜೈನ ಬಸದಿಗಳಿದ್ದು, ಸಿದ್ಧಾಂತ ಮಂದಿರವೂ ಒಂದು. ಗುರು ಬಸದಿ ಪಕ್ಕದಲ್ಲಿರುವ ಈ ಬಸದಿಯಲ್ಲಿ ಶುಕ್ರವಾರ ರಾತ್ರಿ ಅಥವಾ ಶನಿವಾರ ಬೆಳಗ್ಗಿನ ಜಾವದ ನಡುವೆ ಕಳ್ಳತನ ನಡೆದಿದೆ. ರಾತ್ರಿ 1.10ರ ವೇಳೆಗೆ ಮಂದಿರದ ಬಲ ಬದಿಯ ಕಿಟಕಿಯನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸಿ ಒಳ ಪ್ರವೇಶಿಸಿದ್ದಾನೆ. ಅಲ್ಲಿ ಶೂ ಧರಿಸಿದ ಕಳ್ಳನೊಬ್ಬ ಇತ್ತೀಚೆಗಷ್ಟೆ ಅಳವಡಿಸಿದ ಎರಡು ಸಿಸಿ. ಕ್ಯಾಮೆರಾಗಳ ಸಂಪರ್ಕ ಕಡಿತಗೊಳಿಸಿದ್ದಾನೆ. ದೇಹವನ್ನು ಸಂಪೂರ್ಣ ಬಟ್ಟೆ ಮೂಲಕ ಮುಚ್ಚಿಕೊಂಡಿದ್ದಾನೆ. ಖಜಾನೆ ಕೋಣೆಯ ಶಟರ್ ಅನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸುವುದು ಸಿ.ಸಿ. ಕ್ಯಾಮೆರಾದಲ್ಲಿ ದಾಖಲಾಗಿದೆ. ಮಂದಿರದಲ್ಲಿ ಸೈರನ್ ಆಳವಡಿಸಲಾಗಿದ್ದರೂ ತಾಂತ್ರಿಕ ವೈಫಲ್ಯದಿಂದ ಅದು ಸದ್ದು ಮಾಡಿಲ್ಲ.
ಬಸದಿ ಕಾಯಲು ಕಾವಲುಗಾರನಿದ್ದು, ಬಸದಿ ಮುಂಭಾಗದಲ್ಲಿ ಬುಲೆಟ್ ಪ್ರೂಫ್ ಗಾಜು ಅಳವಡಿಸಲಾಗಿದೆ. ಆದರೂ ಈ ಕಳ್ಳತನವಾಗಿದೆ.
5 ತಂಡ ರಚನೆ: ಸಿದ್ಧಾಂತ ಮಂದಿರದಲ್ಲಿ ಸಣ್ಣ, ದೊಡ್ಡ ವಿಗ್ರಹ ಸೇರಿ 64 ವಿಗ್ರಹಗಳಿದ್ದವು. 12 ವಿಗ್ರಹಗಳು ಕಳವಾಗಿವೆ ಎಂದು ದೂರು ನೀಡಿದ್ದಾರೆ. ಪ್ರಾಚೀನ ವಿಗ್ರಹಗಳಾಗಿದ್ದರಿಂದ ಮೌಲ್ಯ ಅಂದಾಜಿಸಲು ಸದ್ಯಕ್ಕೆ ಸಾಧ್ಯವಾಗಿಲ್ಲ.
ಕದೀಮನ ಪತ್ತೆಗೆ 5 ತಂಡ ಕಾರ್ಯಾಚರಣೆ ನಡೆಸುತ್ತಿದೆ. ಬೇರೆ, ಬೇರೆ ಆಯಾಮದಲ್ಲಿ ತನಿಖೆ ಮಾಡುತ್ತಿದ್ದಾರೆ ಎಂದು ಪೊಲೀಸ್ ಕಮಿಷನರ್ ಮನೀಶ್ ಕರ್ಬಿಕರ್ ತಿಳಿಸಿದ್ದಾರೆ.
ಹೆಗ್ಗಡೆ ಭೇಟಿ: ಸ್ಥಳಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಮೀನುಗಾರಿಕೆ ಮತ್ತು ಯುವಜನ ಸೇವೆ ಸಚಿವ ಅಭಯಚಂದ್ರ ಜೈನ್, ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ, ಮಾಜಿ ಸಚಿವ ಅಮರನಾಥ ಶೆಟ್ಟಿ ಭೇಟಿ ನೀಡಿದ್ದಾರೆ.
ಸ್ವಾಮೀಜಿ ಅಮೆರಿಕದಲ್ಲಿ: ಜೈನಮಠದ ಶ್ರೀ ಸ್ವಸ್ತಿ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ಅಮೆರಿಕ ಪ್ರವಾಸದಲ್ಲಿದ್ದಾರೆ. ನ್ಯೂಜೆರ್ಸಿಯಲ್ಲಿ ಭಗವಾನ್ ಮಹಾವೀರ ಬಸದಿ ಉದ್ಘಾಟನೆಗೆ ತೆರಳಿದ್ದಾರೆ. ನ್ಯೂಯಾರ್ಕ್ನಲ್ಲಿ ಜು.8ರಿಂದ 10ರವರೆಗೆ ಜೈನ ಸಮುದಾಯದವರ ಜತೆ ಸಭೆ ಇದ್ದು, ಜು.13ಕ್ಕೆ ಸ್ವದೇಶಕ್ಕೆ ಆಗಮಿಸಲು ನಿರ್ಧರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

