ದಕ್ಷಿಣ ಕನ್ನಡ

ಪದವಿ ಪಡೆದಿದ್ದರೆ ಸಾಕು ಉಪನ್ಯಾಸಕರಾಗುವ 'ಯೋಗ'!

Published On :

ಕ.ಪ್ರ. ವಾರ್ತೆ , ಮಂಗಳೂರು , ಜು.7
ಕೇವಲ ಪದವಿ ಸರ್ಟಿಫಿಕೇಟ್ ಹೊಂದಿದವರಿಗೆ ಪ್ರಾಧ್ಯಾಪಕ ಹುದ್ದೆಗೆ ನೇರವಾಗಿ ನೇಮಕಗೊಳ್ಳುವ 'ಯೋಗ' ಪ್ರಾಪ್ತವಾಗಿದೆ. ಇದು ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಭಾಗಕ್ಕೆ ನೇಮಕಾತಿಗೆ ಇರುವ ಅರ್ಹತೆ. ಇಲ್ಲಿ ಉನ್ನತ ವ್ಯಾಸಂಗ ಮಾಡಿದವರಿಗೆ ಬೆಲೆಯೇ ಇಲ್ಲ. ನೇಮಕಾತಿಯ ಈ ಅವಾಂತರ ಮಾಡಿರುವುದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ).
ರಾಜ್ಯದ ಮಹಾವಿದ್ಯಾಲಯಗಳಲ್ಲಿ ಖಾಲಿ ಇರುವ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಯುನಾನಿ ಮತ್ತು ಹೋಮಿಯೋಪತಿ ಹುದ್ದೆ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಜಿ ಸಲ್ಲಿಸಿದವರಿಗೆ ಶುಲ್ಕ ಪಾವತಿಗೆ ಜು.5 ಕಡೇ ದಿನವಾಗಿತ್ತು. ಇನ್ನು ಯಾವಾಗಬೇಕಾದರೂ ನೇರ ನೇಮಕಾತಿ ನಡೆಯಬಹುದು. ಜೂ.1ರಂದು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿಗೆ ಕೆಪಿಎಸ್‌ಸಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿತ್ತು. ಆಯುರ್ವೇದ 67, ಪ್ರಕೃತಿ ಚಿಕಿತ್ಸೆ ಮತ್ತು ಯೋಗ 10, ಯುನಾನಿ 13 ಹಾಗೂ ಹೋಮಿಯೋಪತಿ 5 ಹುದ್ದೆ ಸೇರಿ ಒಟ್ಟು 95 ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತಿದೆ.
ಪದವಿ ಪಡೆದರೆ ಸಾಕು!: ಉಪನ್ಯಾಸಕರಾಗಬೇಕಾದರೆ ಏನೆಲ್ಲ ಅರ್ಹತೆ ಬೇಕೋ ಅದೆಲ್ಲವನ್ನೂ ಗಾಳಿಗೆ ತೂರಿ ಈ ನೇಮಕಾತಿ ನಡೆಸಲಾಗುತ್ತಿದೆ. ಆಯುರ್ವೇದ, ಯುನಾನಿ, ಹೋಮಿಯೋಪಥಿ ವಿಭಾಗಗಳಲ್ಲಿ ನೇಮಕಾತಿಗೆ ತೊಡಕಿಲ್ಲ. ಆದರೆ ಪ್ರಕೃತಿ ಚಿಕಿತ್ಸೆ-ಯೋಗ ವಿಭಾಗದಲ್ಲಿ ಅರ್ಹತೆಯನ್ನು ಕಡೆಗಣಿಸಲಾಗಿದೆ. ಈ ವಿಭಾಗಕ್ಕೆ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ, ಉಪನ್ಯಾಸಕ ಆಗಬೇಕಾದರೆ ಕೇವಲ ಪದವಿ ಸರ್ಟಿಫಿಕೇಟ್ ಇದ್ದರೆ ಸಾಕು ಎಂಬ ಮಾನದಂಡವನ್ನು ಕೆಪಿಎಸ್‌ಸಿ ಅಧಿಸೂಚನೆಯಲ್ಲಿ ಹೇಳುತ್ತದೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಯುಜಿಸಿ/ಎಐಸಿಟಿಇ ನಿಯಮಾವಳಿ ಪ್ರಕಾರ 10 ವರ್ಷ ಅನುಭವ, ಪಿಎಚ್‌ಡಿ, ಶೇ.55 ಅಂಕ, ಸ್ನಾತಕೋತ್ತರ ಪದವಿಯನ್ನು ನಿಗದಿಪಡಿಸಲಾಗಿದೆ. ಆದರೆ ಕೆಪಿಎಸ್‌ಸಿ ಅಧಿಸೂಚನೆಯಲ್ಲಿ ಇದಲ್ಲದೆ ಪ್ರಕೃತಿ ಚಿಕಿತ್ಸೆ (ನ್ಯಾಚುರೋಪತಿ) ಪದವಿ (ಬಿಎನ್‌ವೈಎಸ್) ಅರ್ಹತೆ ನಮೂದಿಸಲಾಗಿದೆ. ಇವರಿಗೆ 5 ಅಥವಾ 3 ವರ್ಷ ಅನುಭವ ಇದ್ದರೆ ಸಾಕು ಎಂದಿದೆ. ಹಾಗಾದರೆ ಅರ್ಹ ಸ್ನಾತಕೋತ್ತರ ಪದವೀಧರು ಏನು ಮಾಡಬೇಕು? ಯಾವ ನಿಯಮಾವಳಿಯಲ್ಲಿ ಪದವೀಧರರನ್ನು ಸಹ ಪ್ರಾಧ್ಯಾಪಕರ, ಪ್ರಾಧ್ಯಾಪಕರ ನೇಮಕಾತಿಗೆ ಕೆಪಿಎಸ್‌ಸಿ ಮುಂದಾಗಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ಒಂದೇ ತಕ್ಕಡಿಯಲ್ಲಿ: ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಪ್ರತ್ಯೇಕ ವಿಭಾಗವಾಗಿದ್ದು, ನೇಮಕಾತಿ ವೇಳೆ ಎರಡನ್ನೂ ಒಂದೇ ಎಂದು ಪರಿಗಣಿಸಲಾಗಿದೆ. ಪ್ರಕೃತಿ ಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಇನ್ನೂ ಪರಿಪೂರ್ಣವಾಗಿಲ್ಲ. ಆದರೂ ಇದರ ಮಾನದಂಡವನ್ನು ಆಯ್ಕೆಗೆ ಪರಿಗಣಿಸಲಾಗಿದೆ. ಕೆಪಿಎಸ್‌ಸಿಗೆ ಇದರ ಅರಿವಿಲ್ಲದೆ ಮಾಡಿದೆಯೋ ಅಥವಾ ಉದ್ದೇಶಪೂರ್ವಕವಾಗಿಯೋ ಎಂಬುದು ಸ್ಪಷ್ಟವಾಗಿಲ್ಲ.
 ಯೋಗದಲ್ಲಿ ಸ್ನಾತಕೋತ್ತರ ಅರ್ಹ ಪದವೀಧರರು ಇದ್ದರೂ ಪದವೀಧರರಿಗೆ ಯುಜಿಸಿ ವೇತನ ಶ್ರೇಣಿ ನೀಡುವುದು ಕೆಪಿಎಸ್‌ಸಿ ಚೋದ್ಯವಲ್ಲದೆ ಮತ್ತೇನಲ್ಲ. ಇದರಿಂದ ಸ್ನಾತಕೋತ್ತರ ಯೋಗ ಪದವೀಧರರು ತಲೆ ಮೇಲೆ ಕೈ ಹೊತ್ತುಕೊಳ್ಳುವಂತಾಗಿದೆ.

-ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.