ಹೆಚ್ಚು ಬೆಲೆಗೆ ಕಡಿಮೆ ಅಕ್ಕಿ ಮಾರಾಟ: ಗುಹ್ಯ ಗ್ರಾಮಸ್ಥರ ಆರೋಪ
ಸಿದ್ದಾಪುರ: ಇಲ್ಲಿನ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಸಾಮಗ್ರಿ ವಿತರಣೆಯಲ್ಲಿ ಲೋಪವಾಗಿದ್ದು, ಹೆಚ್ಚು ಬೆಲೆಗೆ ಕಡಿಮೆ ಅಕ್ಕಿ ಮಾರಾಟವಾಗುತ್ತಿದೆ ಎಂದು ಗುಹ್ಯ ಗ್ರಾಮಸ್ಥರು ಆರೋಪಿಸಿದ್ದಾರೆ.
ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ, ಗುಹ್ಯ ಗ್ರಾಮದಲ್ಲಿ ಆಹಾರ ಪದಾರ್ಥ ವಿತರಣೆಯಲ್ಲಾಗುತ್ತಿರುವ ಲೋಪಗಳ ಬಗ್ಗೆ ಪ್ರಸ್ತಾಪವಾಗಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗೆ ಆಹಾರ ಇಲಾಖೆ ಅಧಿಕಾರಿ ರಮಣಿ ಗುರುವಾರ ಭೇಟಿ ನೀಡಿದ್ದರು.
ತುರ್ತು ಸಭೆ: ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಣಿ ನಾರಾಯಣ ಅವರ ಸಮ್ಮುಖದಲ್ಲಿ ಇಲ್ಲಿನ ನ್ಯಾಯಬೆಲೆ ಅಂಗಡಿಯ ಸಮಸ್ಯೆ ಬಗೆಹರಿಸಲು ತುರ್ತು ಸಭೆ ಕರೆಯಲಾಗಿತ್ತು. ಆದರೆ, ಸಭೆಯಲ್ಲಿ ನ್ಯಾಯಬೆಲೆ ಅಂಗಡಿ ವಿರುದ್ಧ ಹಾಗೂ ಪರವಾಗಿ ಬಂದ ಎರಡು ಗುಂಪುಗಳ ನಡುವೆ ತೀವ್ರ ಚರ್ಚೆ ನಡೆದು ಮಾತಿನ ಚಕಮಕಿ ಉಂಟಾಯಿತು.
ಲೋಪವಾಗಿಲ್ಲ: ಸಭೆಗೆ ಆಗಮಿಸಿದ ಗುತ್ತಿಗೆದಾರರೊಬ್ಬರು ಮಾತನಾಡಿ, ಕಾಳಸಂತೆಯಲ್ಲಿ ಅಕ್ಕಿ ಮಾರಾಟವಾಗಿಲ್ಲ. ಎಲ್ಲವೂ ಗೋದಾಮಿನಲ್ಲಿದ್ದು, ಅಧಿಕಾರಿಗಳು ಪರಿಶೀಲಿಸಿದ್ದಾರೆ. ಯಾವುದೇ ಲೋಪವಾಗಿಲ್ಲ, ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ವಿತರಣೆ ಮಾಡುವುದಾಗಿ ತಿಳಿಸಿದರು.
ಆಹಾರ ಇಲಾಖೆ ಅಧಿಕಾರಿ ರಮಣಿ ಮಾತನಾಡಿ, ಸಾರ್ವಜನಿಕರ ಅಹವಾಲು ಸ್ವೀಕರಿಸಲಾಗಿದ್ದು, ಅಧಿಕಾರಿಗಳಿಗೆ ವರದಿ ನೀಡಲಾಗುತ್ತದೆ. ಆಹಾರ ಪದಾರ್ಥಗಳನ್ನು ಪಡಿತರ ಚೀಟಿದಾರರಿಗೆ ಸರಿಯಾಗಿ ವಿತರಣೆ ಮಾಡಬೇಕು ಎಂದು ಸೂಚಿಸಿದರು.
ರಾಜಕೀಯ ಪ್ರೇರಿತ ಸಭೆ: ಸ್ಥಳೀಯ ಡಿವೈಎಫ್ಐನ ಮುಖಂಡ ಅನಿಲ್ ಮಾತನಾಡಿ, ಈ ಭಾಗದಲ್ಲಿರುವ ನ್ಯಾಯಬೆಲೆ ಅಂಗಡಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕೆಲವರು ನ್ಯಾಯಬೆಲೆ ಅಂಗಡಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಬೇರೆಯವರಿಗೆ ವಹಿಸಿಕೊಡುವ ಹುನ್ನಾರ ನಡೆಯುತ್ತಿದೆ. ಗ್ರಾಮಕ್ಕೆ ಸಂಬಂಧವಿಲ್ಲದ ವ್ಯಕ್ತಿಗಳು ನ್ಯಾಯಬೆಲೆ ಅಂಗಡಿಯ ವಿರುದ್ಧವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಗ್ರಾಮದಲ್ಲಿ ನೂರಾರು ಮಂದಿ ಪಡಿತರ ಚೀಟಿದಾರರಿದ್ದು, ನ್ಯಾಯಬೆಲೆ ಅಂಗಡಿ ವಿರುದ್ಧವಾಗಿ ಕೆಲವರನ್ನು ಮಾತ್ರ ಸಭೆಗೆ ಕರೆಯಲಾಗಿದೆ. ಇದು ರಾಜಕೀಯ ಪ್ರೇರಿತವಾಗಿ ನಡೆದ ಸಭೆ ಎಂದು ಆಕ್ಷೇಪಿಸಿದರು.
50 ಪೈಸೆ ಹೆಚ್ಚಳ: ವಾರ್ಡ್ ಸದಸ್ಯೆ ದೇವಯಾನಿ ಮಾತನಾಡಿ, ಸ್ಥಳೀಯರಿಗೆ ಕಳೆದ ತಿಂಗಳ ಅಕ್ಕಿ ಸರಿಯಾಗಿ ವಿತರಣೆ ಮಾಡದೆ 50 ಪೈಸೆ ಹೆಚ್ಚಳ ಮಾಡಲಾಗಿದೆ ಎಂದು ಸ್ಥಳೀಯರು ಗ್ರಾಮಸಭೆಯಲ್ಲಿ ದೂರಿದ ಹಿನ್ನೆಲೆ ನ್ಯಾಯಬೆಲೆ ಅಂಗಡಿಯ ಗುತ್ತಿಗೆದಾರ ಲೋಪವಾಗಿರುವುದನ್ನು ಸರಿಪಡಿಸುವುದಾಗಿ ಸಭೆಯಲ್ಲಿ ತಿಳಿಸಿದ್ದಾರೆ ಎಂದರು.
ತಾಲೂಕು ಪಂಚಾಯಿತಿ ಸದಸ್ಯರಾದ ಜಾನ್ಸನ್, ರಜನಿ ಗ್ರಾ.ಪಂ. ಸದಸ್ಯರಾದ ಮೂಸಾ, ಮಣಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

