ಉದಾಸೀನ ಬಿಡಿ, ಅಭಿವೃದ್ಧಿ ಕೆಲ್ಸ ಮಾಡಿ; ಪಿಡಿಒಗಳಿಗೆ ಜಿ.ಪಂ ಅಧ್ಯಕ್ಷ ನಿರ್ದೇಶನ
ಸುಳ್ಯ: ಘನತ್ಯಾಜ್ಯ ವಿಲೇವಾರಿ ಘಟಕ, ಉದ್ಯೋಗ ಖಾತ್ರಿ ಯೋಜನೆ ಮತ್ತು ವಸತಿ ಮನೆ ಅನುಷ್ಠಾನದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಉದಾಸೀನ ಪ್ರವೃತ್ತಿಯಿಂದ ಹಿನ್ನಡೆಯಾಗಿದೆ ಎಂದು ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ಸುಳ್ಯ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಸುಳ್ಯ ತಾಲೂಕಿನ ಪಂಚಾಯತಿಗಳ ಪಿಡಿಒ ಮತ್ತು ಕಾರ್ಯದರ್ಶಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು
ಮಾತನಾಡಿದರು.
ಈ ಸಂದರ್ಭ ಪಿಡಿಒಗಳಿಂದ ಕರಾರುವಕ್ಕಾದ ಮಾಹಿತಿ ಅಪೇಕ್ಷೆಪಟ್ಟರಲ್ಲದೆ ಅವರ ಉದಾಸೀನ ಪ್ರವೃತ್ತಿಯನ್ನು ಸಭೆಯುದ್ದಕ್ಕೂ ಬೊಟ್ಟು ಮಾಡಿ ತರಾಟೆಗೆತ್ತಿಕೊಂಡರು.
ದುಡಿದರೂ ದುಡಿಯದಿದ್ದರೂ ಸಂಬಳ ಬರುತ್ತದೆ ಎಂಬ ಭಾವನೆ ಬೇಡ. ನಿಮ್ಮ ಕರ್ತವ್ಯಲೋಪದಿಂದ ಆಡಳಿತಕ್ಕೆ ತೊಂದರೆಯಾದರೆ ನಾನು ಸುಮ್ಮನಿರುವುದಿಲ್ಲ ಎಂದು ಪಿಡಿಒಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಜಿ.ಪಂ. ಉಪಾಧ್ಯಕ್ಷ ರೀತೇಶ್ ಶೆಟ್ಟಿ, ಜಿ.ಪಂ. ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ, ಉಪ ಕಾರ್ಯದರ್ಶಿ ಶಶಿಧರ್, ಜಿಲ್ಲಾ ಪಂಚಾಯಿತಿ ನೆರವು ಘಟಕದ ಸಂಯೋಜಕಿ ಮಂಜುಳಾ, ಸುಳ್ಯ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಲ್ಲೇಸ್ವಾಮಿ ಮೊದಲಾದವರು ಭಾಗವಹಿಸಿದ್ದರು.
ಘನ ತ್ಯಾಜ್ಯ ಘಟಕ: ಪ್ರತಿ ಪಂಚಾಯಿತಿಗಳು ಕೂಡ ಘನತ್ಯಾಜ್ಯ ಘಟಕಗಳಿಗೆ ಜಾಗ ಮೀಸಲು ಇರಿಸಬೇಕೆಂದು ಹೇಳಿದ ಅಧ್ಯಕ್ಷರು ಪ್ರತಿ ಪಿಡಿಒಗಳಿಂದ ಈ ಕುರಿತಂತೆ ಮಾಹಿತಿ ಪಡೆದರು. ಇವತ್ತಿನ ಸಭೆಯಲ್ಲಿ ನಾನು ಕೇವಲ ಸೂಚನೆಗಳನ್ನಷ್ಟೇ ನೀಡುತ್ತೇನೆ. ಆರು ತಿಂಗಳ ಬಳಿಕ ಮತ್ತೆ ಸಭೆ ನಡೆಸಿ ಪ್ರಗತಿ ಕಂಡು ಬರದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ತಾಲೂಕಿನ 27 ಗ್ರಾಮ ಪಂಚಾಯತಿಗಳ ಪೈಕಿ ಎರಡು ಪಂಚಾಯತಿಗಳಲ್ಲಿ ಮಾತ್ರ ತ್ಯಾಜ್ಯ ಘಟಕಕ್ಕೆ ಜಾಗ ಸಿದ್ಧವಾಗಿದೆ. ಉಳಿದ 25 ಪಂಚಾಯತ್ಗಳು ತಮ್ಮ ಗ್ರಾಮ ಕರಣಿಕರ ಮೂಲಕ ಜಾಗ ಗುರುತಿಸಿ ಪಹಣಿ ಪತ್ರದೊಂದಿಗೆ ಶನಿವಾರದೊಳಗೆ ತಾಲೂಕು ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಸಿಇಒ ತುಳಸಿ ಮದ್ದಿನೇನಿ ಸೂಚಿಸಿದರು.
ಉದ್ಯೋಗ ಖಾತ್ರಿ ಯೋಜನೆ ಕುರಿತು ಪಿಡಿಒಗಳಿಂದ ಮಾಹಿತಿ ಪಡೆದ ಅಧ್ಯಕ್ಷರು, ಪಿಡಿಒಗಳ ಉದಾಸೀನ ಬಿಡುತ್ತಿದ್ದರೆ ಈ ಯೋಜನೆಯಲ್ಲಿ ಶಾಲೆಗಳ ಆವರಣ ಗೋಡೆ ಕಾಮಗಾರಿ ಕೈಗೆತ್ತಿಕೊಂಡು ಮುಗಿಸಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಆನೆ ಕಂದಕ: ಸುಳ್ಯ ತಾಲೂಕಿನ ಹಲವೆಡೆ ಆನೆ ಹಾವಳಿ ಇದ್ದರೂ ಆನೆ ಕಂದಕ ನಿರ್ಮಾಣಕ್ಕೆ ಹಣ ಮೀಸಲಿಡದ ಪಿಡಿಒಗಳನ್ನು ಅವರು ಪ್ರಶ್ನಿಸಿದರು. ಯುವಕ ಮತ್ತು ಯುವತಿ ಮಂಡಲಗಳಿಗೆ ಪಂಚಾಯಿತಿಗಳು ಜಾಗ ಕಾದಿರಿಸಲು ಕ್ರಮ ಕೈಗೊಳ್ಳಬೇಕು. ಆ ಮೂಲಕ ಯುವ ಸಂಸ್ಥೆಗಳನ್ನು ಮೇಲೆತ್ತಬೇಕು ಎಂದರು.
ಡೆಂಘೀ ಭೀತಿಯ ಹಿನ್ನೆಲೆಯಲ್ಲಿ ಪ್ರತಿ ಪಂಚಾಯಿತಿಗಳಲ್ಲೂ ಕೋಳಿ ಫಾರಂ ಮತ್ತು ಹಂದಿ ಫಾರಂಗಳಿಗೆ ಲೈಸೆನ್ಸ್ ನೀಡುವಾಗ ಮತ್ತು ಲೈಸೆನ್ಸ್ ನವೀಕರಿಸುವಾಗ ಪಿಡಿಒ ಮತ್ತು ಕಾರ್ಯದರ್ಶಿಗಳು ಎಚ್ಚರಿಕೆ ವಹಿಸಬೇಕು. ಮಾತ್ರವಲ್ಲದೆ ತಿಂಗಳಿಗೊಮ್ಮೆ ಅಂಗಡಿಗಳಿಗೆ ಭೇಟಿ ನೀಡಬೇಕು ಎಂದು ಸೂಚಿಸಿದರು.
ಜಿ.ಪಂ. ಸದಸ್ಯರಾದ ಆಶಾ ತಿಮ್ಮಪ್ಪ, ನವೀನ್ ಕುಮಾರ್ ಮೇನಾಲ, ತಾ.ಪಂ. ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ಉಪಾಧ್ಯಕ್ಷ ಹರೀಶ್ ರೈ ದೇರಂಪಾಲು ಭಾಗವಹಿಸಿದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

