ಲೈಂಗಿಕ ಕಿರುಕುಳ ನೀಡಿದ್ದು ಗೊತ್ತೇ ಇಲ್ಲ ಎಂದ 35 ಸಾಕ್ಷಿಗಳು!
ಮಂಗಳೂರು: ಎಸಿಪಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಎಎಸ್ಐ ಹೊರಿಸಿದ ಆರೋಪದ ತನಿಖೆ ವಿಚಾರಣೆ ವೇಳೆ 35 ಸಾಕ್ಷಿಗಳೂ ಕೂಡಾ ಲೈಂಗಿಕ ಕಿರುಕುಳ ನೀಡಿರುವುದು ಗೊತ್ತೇ ಇಲ್ಲ ಎಂದು ಹೇಳಿದ್ದಾರೆ!
ನಗರ ಎಸಿಪಿ ಕವಿತಾ ನೇತೃತ್ವದ ಲೈಂಗಿಕ ಕಿರುಕುಳ ದೂರು ನಿವಾರಣೆ ಸಮಿತಿ ಒಂದು ತಿಂಗಳ ಕಾಲ ವಿಚಾರಣೆ ನಡೆಸಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಯಾವುದೇ ಸಾಕ್ಷಿ, ಪುರಾವೆ ಇಲ್ಲ ಎಂದು ಪೊಲೀಸ್ ಕಮಿಷನರ್ಗೆ ವರದಿ ಸಲ್ಲಿಸಿದೆ.
ಎಎಸ್ಐ ಶ್ರೀಕಲಾ ಅವರು ದಕ್ಷಿಣ ಎಸಿಪಿ ಜಗನ್ನಾಥ ಟಿ. ಆರ್. ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಮೇ 22ರಂದು ಕಮಿಷನರ್ಗೆ ದೂರು ನೀಡಿದ್ದರು. ಆರಂಭದಲ್ಲಿ ಕಿರುಕುಳ ನೀಡಿದ ಬಗ್ಗೆ ಮಾತ್ರ ಉಲ್ಲೇಖಿಸಿದ್ದ ಎಎಸ್ಐ, ಬಳಿಕ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಹೆಚ್ಚುವರಿಯಾಗಿ ಹೇಳಿದ್ದರು. ಬಳಿಕ ಎಸಿಪಿ ಜಗನ್ನಾಥ್ ಅವರಿಗೆ ರಜೆಯಲ್ಲಿ ತೆರಳುವಂತೆ ಸೂಚಿಸಲಾಗಿತ್ತು. ಕೆಲ ಸಂಘಟನೆಗಳು ಪ್ರತಿಭಟನೆ ಕೂಡಾ ನಡೆಸಿದ್ದವು.
ಸುಪ್ರೀಂ ಕೋರ್ಟ್ ಆದೇಶದಂತೆ ಮಹಿಳಾ ಪೊಲೀಸರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಗಟ್ಟಲು ಪ್ರತಿ ಕಮಿಷನರ್, ಎಸ್ಪಿ ಕಚೇರಿ ವ್ಯಾಪ್ತಿಯಲ್ಲಿ ಲೈಂಗಿಕ ಕಿರುಕುಳ ದೂರು ನಿವಾರಣೆ ಸಮಿತಿ ರಚಿಸಬೇಕು. ಈ ದೂರಿನ ಬಳಿಕ ತಡವಾಗಿ ಎಚ್ಚೆತ್ತುಕೊಂಡು ಮಂಗಳೂರು ಕಮಿಷನರೇಟ್ ಕಚೇರಿ ವ್ಯಾಪ್ತಿಯಲ್ಲಿ ದೂರು ವಿಚಾರಣೆಗೆ ಎಸಿಪಿ ಕವಿತಾ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು. 9 ಮಂದಿಯ ಸಮಿತಿಯಲ್ಲಿ 7 ಮಹಿಳೆಯರಿದ್ದರು.
ಶ್ರೀಕಲಾ ಅವರು ನೀಡಿದ ದೂರಿನ ಅಂಶಗಳಿಗೆ ಸಂಬಂಧಿಸಿ 35 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಪಾಂಡೇಶ್ವರ ಪೊಲೀಸ್ ಠಾಣೆ ಸೆಂಟ್ರಿ, ಮಹಿಳಾ ಎಎಸ್ಐ ಜತೆ ನೈಟ್ ಡ್ಯೂಟಿ ಮಾಡಿದ ಪೊಲೀಸರು, ರಜೆ ಅರ್ಜಿ ನೀಡುವ ವೇಳೆ ಎಸಿಪಿ ಕಚೇರಿಯಲ್ಲಿ ಇದ್ದ ಪೊಲೀಸರು, ಶ್ರೀಕಲಾ ಅವರ ಗೆಳತಿ ಸಹಿತ 35 ಮಂದಿಯ ಹೇಳಿಕೆ ಪಡೆಯಲಾಗಿದೆ.
ಹೇಳಿಕೆ ನೀಡಿಲ್ಲ. ಹೆಚ್ಚಿನವರು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಗೆಳತಿಗೂ ಗೊತ್ತಿಲ್ಲ, ಅರ್ಜಿಯಲ್ಲಿ ಹೇಳಿದ್ದೇ ಗೊತ್ತು...
'ನನ್ನ ಗೆಳತಿಗೆ ಈ ವಿಚಾರವೆಲ್ಲ ಗೊತ್ತಿದೆ ಅವರನ್ನು ಕೇಳಿ' ಎಂದು ಶ್ರೀಕಲಾ ಹೇಳಿದ್ದರು, ಅದರಂತೆ ಅವರ ಗೆಳತಿ ಸಂಧ್ಯಾ ಅವರನ್ನು ಸಾಕ್ಷಿಯಾಗಿ ಪರಿಗಣಿಸಿ ವಿಚಾರಣೆ ನಡೆಸಲಾಗಿತ್ತು. ಸಂಧ್ಯಾ ತಮ್ಮ ಹೇಳಿಕೆಯಲ್ಲಿ ಲೈಂಗಿಕ ಕಿರುಕುಳ ನೀಡಿರುವ ಮಾಹಿತಿ ಇಲ್ಲ ಎಂದೇ ಹೇಳಿದ್ದಾರೆ. 'ಹೆವಿ ಡ್ಯೂಟಿ ಹಾಕುತ್ತಿದ್ದಾರೆ ಎಂದು ಶ್ರೀಕಲಾ ಹೇಳುತ್ತಿದ್ದರು, ಲೈಂಗಿಕ ಕಿರುಕುಳ ಬಗ್ಗೆ ಹೇಳಿಲ್ಲ, ದೂರು ಅರ್ಜಿಯಲ್ಲಿ ಹೇಳಿದ್ದೇ ಗೊತ್ತು' ಎಂದು ಸಮಿತಿ ಮುಂದೆ ಹೇಳಿದ್ದಾರೆ.
'35 ಸಾಕ್ಷಿಗಳ ವಿಚಾರಣೆ ನಡೆಸಿ ಸಲ್ಲಿಸಿದ ವರದಿ ನೂರಾರು ಪುಟಗಳಲ್ಲಿದೆ. ಮಹಿಳಾ ಎಎಸ್ಐ ಆರೋಪಿಸಿದಂತೆ ಲೈಂಗಿಕ ಕಿರುಕುಳ ನೀಡಲಾಗಿಲ್ಲ ಎಂದು ತನಿಖಾಧಿಕಾರಿ ಎಸಿಪಿ ವಿಚಾರಣೆ ವರದಿ ಸಲ್ಲಿಸುವ ಸಂದರ್ಭ ಮೌಖಿಕವಾಗಿ ಹೇಳಿದ್ದಾರೆ. ಮೇಲುನೋಟಕ್ಕೆ ಲೈಂಗಿಕ ಕಿರುಕುಳ ನೀಡಿಲ್ಲ ಎಂದು ಕಾಣುತ್ತದೆ. ವರದಿಯನ್ನು ಸಂಪೂರ್ಣವಾಗಿ ಓದಿದ ಬಳಿಕ ಸಂಪೂರ್ಣ ಮಾಹಿತಿ ನೀಡುತ್ತೇನೆ' ಎಂದು ಕಮಿಷನರ್ ಮನೀಷ್ ಕರ್ಬಿಕರ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

