ದಕ್ಷಿಣ ಕನ್ನಡ

ಉಪ್ಪಿನಂಗಡಿ: ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಘರ್ಷಣೆ

Published On :

ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಕೀಟಲೆ ಮಾಡಲಾಗಿದೆ ಎಂಬ ಸುದ್ದಿ ಹರಡಿ, ವಿದ್ಯಾರ್ಥಿಗಳ ನಡುವೆ ಮಾರಾಮಾರಿಯಾಗಿ, ಕಲ್ಲು ತೂರಾಟ, ಲಾಠಿ ಚಾರ್ಜ್ ವರೆಗೆ ತಲುಪಿದ ಘಟನೆ ಗುರುವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.
ನಡೆದದ್ದೇನು?: ಬುಧವಾರ ಕಾಲೇಜಿನ ವಿದ್ಯಾರ್ಥಿನಿಯ ಜಡೆಯನ್ನು ಭಿನ್ನ ಕೋಮಿನ ವಿದ್ಯಾರ್ಥಿ ಎಳೆದಿದ್ದಾನೆಂಬ ಸುದ್ದಿ ಚಲಾವಣೆಯಾಗಿತ್ತು. ಈ ಬಗ್ಗೆ ವಿಚಾರಿಸಲು ಹೋದ ವಿದ್ಯಾರ್ಥಿನಿಯ ಸಮುದಾಯಕ್ಕೆ ಸೇರಿದವರು, ಆಪಾದಿತ ವಿದ್ಯಾರ್ಥಿ ಮೇಲೆ ದೈಹಿಕ ಹಲ್ಲೆ ನಡೆಸಿದರೆಂದೂ, ಬಿಡಿಸಲು ಹೋದ ಸಹ ವಿದ್ಯಾರ್ಥಿಗಳ ನಡುವೆ ಪರಸ್ಪರ ಹೊಡೆದಾಟವಾಗಿದೆ.
ಪೊಲೀಸರೆದುರೇ ಹೊಡೆದಾಟ: ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರ ಸಮಕ್ಷಮದಲ್ಲೂ ಹೊಡೆದಾಟ ನಡೆದಿದೆ. ಈ ಬಗ್ಗೆ ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿ ಒಂದು ಸಮುದಾಯದ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಜೀಪಿನಲ್ಲಿ ಕುಳ್ಳಿರಿಸಿದ್ದಾರೆಂಬ ಸುದ್ದಿ ಹರಡಿ, ಎಬಿವಿಪಿ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ಕೆರಳುವಂತೆ ಮಾಡಿತ್ತು. ಪೊಲೀಸರ ಕ್ರಮ ಖಂಡಿಸಿ, ಘೋಷಣೆಗಳನ್ನು ಹಾಕಿಕೊಂಡು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪ್ಪಿನಂಗಡಿ ಪೊಲೀಸ್ ಠಾಣೆ ಬಳಿ ಜಮಾಯಿಸಿದರು.
 ನ್ಯಾಯ ದೊರಕಿಸಿಕೊಡಬೇಕೆಂಬ ಬೇಡಿಕೆ ಮುಂದಿರಿಸಿ, ಘೋಷಣೆಗಳನ್ನು ಕೂಗುತ್ತಿದ್ದ ವಿದ್ಯಾರ್ಥಿಗಳ ಎದುರು ಭಾಗದಲ್ಲಿ ಭಿನ್ನ ಕೋಮಿನ, ಸಾರ್ವಜನಿಕರು ಜಮಾಯಿಸಿ, ಪ್ರತಿ ಘೋಷಣೆಗಳನ್ನು ಹಾಕುವುದರ ಮೂಲಕ ಪ್ರಕರಣ ಕೋಮು ಸಂಘರ್ಷ ಸ್ವರೂಪ ಪಡೆಯಿತು.
ಗುಂಪಿಗೆ ಕಲ್ಲು: ಸುದ್ದಿ ತಿಳಿದು ಬಂದ ವೃತ್ತ ನಿರೀಕ್ಷಕ ಸುರೇಶ್ ಕುಮಾರ್, ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಸಮಾಧಾನಿಸುವ ಮಾತುಕತೆ ನಡೆಯುತ್ತಿದ್ದಂತೆಯೇ ಗುಂಪಿನಿಂದ ಕಲ್ಲೊಂದು ಪ್ರತಿಭಟನಾನಿರತರ ಗುಂಪಿನತ್ತ ತೂರಿ ಬಂತು. ಪರಿಸ್ಥಿತಿ ಕೈಮೀರುವ ಸೂಚನೆ ದೊರೆತ ಕೂಡಲೇ ಮಿಂಚಿನ ಕಾರ್ಯಾಚರಣೆಗಿಳಿದ ಸಂಚಾರಿ ಪೊಲೀಸ್ ಸಿಬ್ಬಂದಿ ಉದ್ರಿಕ್ತರನ್ನು ಲಾಠಿ ಚಾರ್ಜ್ ಮಾಡಿ ಚದುರಿಸಿದರು. ಇತ್ತ ಲಾಠಿ ಚಾರ್ಜ್‌ಗೆ ಒಳಗಾದ ಗುಂಪು ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಚದುರಿಸಲು ಅಗ್ರಹಿಸುತ್ತಿದ್ದಂತೆಯೇ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಮುಂದಾದರು.
ಇಬ್ಬರು ವಶಕ್ಕೆ: ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ರಂಜಿತ್ ಮತ್ತು ಅಲ್ತಾಫ್ ಎಂಬಿಬ್ಬರನ್ನು ವಶಕ್ಕೆ ತೆಗೆದುಕೊಂಡು, ಘಟನಾವಳಿಗಳ ವಿಚಾರಣೆ ಕೈಗೊಂಡಿದ್ದಾರೆ. ವಿದ್ಯಾರ್ಥಿನಿ ತನ್ನ ಮೇಲೆ ಕೀಟಲೆ ನಡೆದಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.