ಕಡಲ ಕಲರವ ಭೀಕರ; ಮನೆ, ಮರ ಆಹುತಿ
ಪಡುಬಿದ್ರಿ: ಇಲ್ಲಿನ ತೆಂಕ ಎರ್ಮಾಳು ಮತ್ತು ಬಡ ಎರ್ಮಾಳು ಗ್ರಾಮದಲ್ಲಿ ಕಡಲು ಜನವಸತಿ ಪ್ರದೇಶ ಆಕ್ರಮಿಸಿಕೊಳ್ಳುವುದು ಇನ್ನೂ ಮುಂದುವರಿದಿದ್ದು, 10ಕ್ಕೂ ಅಧಿಕ ತೆಂಗಿನ ಮರಗಳನ್ನು ಸಮುದ್ರ ಪಾಲಾಗಿವೆ.
ಸಮುದ್ರದ ಭಾರಿ ಅಲೆಗಳಂತೂ ಆರ್ಭಟಿಸುತ್ತಾ, ಮೊದಲೇ ಅಪಾಯದ ಅಂಚಿನಲ್ಲಿರುವ ಮನೆಗಳ ಮುನ್ನುಗ್ಗುತ್ತಿವೆ.
ಮೀನುಗಾರಿಕೆ ರಸ್ತೆ ಬಲಿ: ತೆಂಕ-ಬಡಾ ನಡುವಿನ ಮೀನುಗಾರಿಕಾ ರಸ್ತೆ ಗುರುವಾರ ಸಮುದ್ರದ ಆಕ್ರೋಶಕ್ಕೆ ಬಲಿಯಾಗಿದೆ. ಅಲ್ಲಿ ಬಂಡೆಕಲ್ಲುಗಳನ್ನು ತಂದು ಹಾಕಿ ಸಮುದ್ರದ ಅಬ್ಬರ ಹಿಮ್ಮೆಟ್ಟಿಸುವ ಪ್ರಯತ್ನ ನಡೆಯುತ್ತಿದೆಯಾದರೂ, ಸಮುದ್ರದ ಅಲೆಗಳು ಈ ಕಲ್ಲಿನ ಅಡಿಯ ಮರಳನ್ನು ಜಾರಿಸುತ್ತ ಕಲ್ಲನ್ನೂ ಒಡಲೊಳಗೆ ಎಳೆದುಕೊಂಡು ಅಟ್ಟಹಾಸಗೈಯುತ್ತಿವೆ. ಅದರ ರಾಕ್ಷಸ ಶಕ್ತಿಗೆ ಸ್ಥಳೀಯ ಜನರು ಭಯದಿಂದ ಅಸಹಾಯಕರಾಗಿ ನಿಂತು ನೋಡುವುದು ಬಿಟ್ಟರೆ ಬೇರೆನೂ ಮಾಡಲಾಗುತ್ತಿಲ್ಲ.
ಅಪಾಯದಂಚಿನಲ್ಲಿ ಮನೆಗಳು: ಎರ್ಮಾಳು ಅಮೀನ್ ಮೂಲಸ್ಥಾನ ಬಳಿಯೂ ಲಿಂಗಪ್ಪ ಪುತ್ರನ್, ಸುಂದರ ಸುವರ್ಣ, ಸುಶೀಲ ಕರ್ಕರ ಅವರ 3 ಮನೆಗಳು ತೀರಾ ಅಪಾಯದ ಅಂಚಿಗೆ ಬಂದಿವೆ. ಇನ್ನೊಂದೆರಡು ದಿನ ಮಳೆಯಾದರೆ ಈ ಮನೆಗಳೇ ಇಲ್ಲವಾಗುವ ಪೂರ್ತಿ ಸಾಧ್ಯತೆಗಳಿವೆ.
ತೆಂಗಿನ ಮರಗಳ ಆಹುತಿ: ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಉಕ್ಕೇರಿದ ಸಮುದ್ರಕ್ಕೆ ಪುತ್ರನ್ ಅವರ 6, ಮೋಹನ ಸುವರ್ಣ ಅವರ 2, ಸರಸ್ವತಿ ತಿಂಗಳಾಯ ಅವರ 4 ಹಾಗೂ ಭಾಸ್ಕರ ತಿಂಗಳಾಯ ಅವರಿಗೆ ಸೇರಿದ 2 ತೆಂಗಿನ ಮರಗಳು ಉರುಳಿ ಬಿದ್ದು ನೋಡುನೋಡುತ್ತಿದ್ದಂತೆ ಸಮುದ್ರದ ಹೊಟ್ಟೆ ಸೇರಿಬಿಟ್ಟವು. ಇನ್ನೂ ಹತ್ತಾರು ತೆಂಗಿನ ಮರಗಳು ನಿಧಾನವಾಗಿ ಇಂಚಿಂಚೆ ಸಮುದ್ರದತ್ತ ವಾಲುತ್ತಿವೆ. ಲಿಂಗಪ್ಪ ಪುತ್ರನ್ ಮತ್ತು ಸರಸ್ವತಿ ತಿಂಗಳಾಯ ಅವರ ಮನೆ ಬಳಿ ರಸ್ತೆ ಕುಸಿದು, ಕಲ್ಲು ಹಾಕುವ ಲಾರಿಗಳ ಓಡಾಟಕ್ಕೂ ತೊಂದರೆಯಾಗಿ ಈ ಕಾಮಗಾರಿಗೂ ತೊಡಕಾಗಿದೆ.
ಅಮೀನ್ ಮೂಲಸ್ಥಾನದ ವನಿತಾಶ್ರಯಧಾಮದ ದಕ್ಷಿಣ ಪಕ್ಕದಲ್ಲಿಯೂ ಶುಕ್ರವಾರ ಸಮುದ್ರ ತನ್ನ ನಾಲಗೆ ಚಾಚಲಾರಂಭಿಸಿದೆ.
ದೇವರಿಗೆ ಮೊರೆ: ಕಳೆದ ಒಂದು ತಿಂಗಳಿನಿಂದ ಸಮುದ್ರ ಉಗ್ರಗೊಂಡಿದ್ದು ಈಗಾಗಲೇ ಸಾಕಷ್ಟು ಅಪಾಯ ತಂದೊಡ್ಡಿದೆ. ಮಳೆ, ಸಮುದ್ರದಲ್ಲಿ ಗಾಳಿ ಕೂಡ ನಿಲ್ಲುವಂತೆ ಲಕ್ಷಣ ಕಾಡುತ್ತಿಲ್ಲ. ಆದ್ದರಿಂದ ಅಸಹಾಯಕರಾಗಿರುವ ತೀರದ ಜನರು ದೇವರ ಮೊರೆ ಹೋಗುತ್ತಿದ್ದಾರೆ. ಎರ್ಮಾಳು ಮೊಗವೀರ ಸಭಾ ಅಧ್ಯಕ್ಷ ಶ್ರೀಧರ ಬಂಗೇರ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಗ್ರಾಮದ ಶ್ರೀರಾಮ ಭಜನಾ ಮಂದಿರದಲ್ಲಿ ನೂರಾರು ಸಂಖ್ಯೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ತೀರಾ ಅಪಯಾಕಾರಿ ಕಡಲ್ಕೊರೆತ ಪ್ರದೇಶ ಕೂಡ ಇದೀಗ ಪ್ರವಾಸಿ ತಾಣವಾಗಿಬಿಟ್ಟಿದೆ. ಇಲ್ಲಿನ ಆಸುಪಾಸಿನ ಶಾಲಾ ವಿದ್ಯಾರ್ಥಿಗಳ ಸಹಿತ ದೂರದೂರಗಳಿಂದಲೂ ಸಾರ್ವಜನಿಕರು ಆಗಮಿಸಿ ಸಮುದ್ರ ಕೊರೆತ ವೀಕ್ಷಿಸುತ್ತಿದ್ದಾರೆ.
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಧಾರಾಕಾರ ಮಳೆ ಸುರಿದಿದ್ದು, ಮಧ್ಯಾಹ್ನ ವೇಳೆಗೆ ಕಡಿಮೆಯಾಗಿತ್ತು. ಸಂಜೆ ವೇಳೆ ಮಳೆ ಬಿರುಸುಗೊಂಡಿತ್ತು. ಉಳ್ಳಾಲದಲ್ಲಿ ಶುಕ್ರವಾರ ಕೂಡ ಕಡಲ್ಕೊರೆತ ಮುಂದುವರಿದಿದ್ದು, ಮೊಗವೀರಪಟ್ಣದ ಲಕ್ಷ್ಮಿ ಎಂಬವರ ಮನೆ ಕುಸಿತಗೊಂಡಿದೆ.
ಗುರುವಾರ ಕುಸಿತಕ್ಕೆ ಒಳಗಾಗಿದ್ದ ಮುಕ್ಕಚೇರಿ ಇದಿನಬ್ಬ ಹಾಗೂ ಮೊಗವೀರ ಪಟ್ಣದ ಚಿತ್ರ ಎಂಬವರ ಮನೆ ಶುಕ್ರವಾರ ಸಮುದ್ರ ಪಾಲಾಗಿದೆ.
ಹಿಲರಿ ನಗರದಲ್ಲಿ ಮತ್ತೆರಡು ಮನೆಗಳು ಭಾಗಶಃ ಕುಸಿದು ಬಿದ್ದಿದ್ದು, ಅಪಾಯದಂಚಿನಲ್ಲಿದ್ದ ಐಸಮ್ಮ ಮತ್ತು ಅಬ್ದುಲ್ ರೆಹ್ಮಾನ್ ಅವರ ಮನೆಗಳು ಭಾಗಶಃ ಕುಸಿದು ಸಮುದ್ರ ಸೇರಿದೆ. ಕಡಲಿನ ಅಬ್ಬರ ಜೋರಾದಲ್ಲಿ ಸಂಪೂರ್ಣ ಸಮುದ್ರ ಪಾಲಾಗುವ ಸಾಧ್ಯತೆಗಳಿವೆ. ಎರಡು ದಿನಗಳ ಹಿಂದೆ ಸ್ವಲ್ಪ ಭಾಗ ಕುಸಿದಿದ್ದ ರಹೆನ ಮಹಮ್ಮದ್ ಮತ್ತು ಜಮೀಲ ಅವರ ಮನೆಗಳಿಗೆ ಸಮುದ್ರದ ಅಲೆಗಳು ಬಡಿಯುತ್ತಿದ್ದು, ಸಂಪೂರ್ಣ ಕಡಲು ಪಾಲಾಗುವ ನಿರೀಕ್ಷೆಯಲ್ಲಿದೆ.
ವಿಪರೀತ ಮಳೆ ಸುರಿದಲ್ಲಿ ಕಡಲಿನಬ್ಬರ ಇನ್ನಷ್ಟು ಜೋರಾಗಿ ಅಪಾಯದಂಚಿನಲ್ಲಿರುವ ಮನೆಗಳು ಸಮುದ್ರ ಪಾಲಾಗುವ ಭೀತಿಯಲ್ಲಿದೆ. ಅಪಾಯದಂಚಿನಲ್ಲಿರುವ ಪ್ರದೇಶಗಳಿಗೆ ಗ್ರಾಮ ಲೆಕ್ಕಿಗರು ಭೇಟಿ ನೀಡಿದ್ದು, ಜನರಿಗೆ ದಡಕ್ಕೆ ತೆರಳದಂತೆ ಸೂಚನೆ ನೀಡಿದ್ದಾರೆ.
ಶುಕ್ರವಾರ ಬೆಳಗ್ಗಿನವರೆಗೆ ಜಿಲ್ಲೆಯ ಬೆಳ್ತಂಗಡಿಯಲ್ಲಿ 82.4 ಮಿ.ಮೀ. ಗರಿಷ್ಠ ಮಳೆ ಸುರಿದಿದೆ.
ಮಳೆ ವಿವರ: ಮೂಡುಬಿದಿರೆ- 81.2 ಮಿ.ಮೀ., ಕಡಬ- 66.4 ಮಿ.ಮೀ., ಬಂಟ್ವಾಳ- 51.3 ಮಿ.ಮೀ., ಪುತ್ತೂರು- 50.1 ಮಿ.ಮೀ., ಮಂಗಳೂರು- 45.0 ಮಿ.ಮೀ., ಬಜ್ಪೆ- 42.6 ಮಿ.ಮೀ., ಸುಳ್ಯ- 30.6 ಮಿ.ಮೀ. ಮಳೆ ದಾಖಲಾಗಿದೆ.
ಅಕ್ರಮ ಮನೆ ನಿರ್ಮಾಣ: ಸಮುದ್ರ ಸಮೀಪದಲ್ಲಿ ವಾಸದ ಮನೆ ನಿರ್ಮಿಸಲು ಅವಕಾಶ ನೀಡಬೇಡಿ ಎಂದು ಕೆಲವು ವರ್ಷಗಳಿಂದ ಅಧಿಕಾರಿಗಳು ಜನರಿಗೆ ಸೂಚನೆ ನೀಡುತ್ತಾ ಬಂದಿದ್ದಾರೆ. ಆದರೂ ಕೂಡ ಇಲ್ಲಿ ಬಹುತೇಕ ಮನೆಗಳು ಸಮುದ್ರದ ಕಿನಾರೆಯಲ್ಲಿಯೇ ನಿರ್ಮಾಣಗೊಂಡಿದೆ. ಈಗಾಗಲೇ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ವರದಿ ಸಂಗ್ರಹಿಸಿ ಮೇಲಾಧಿಕಾರಿಗಳಿಗೆ ನೀಡಿದ್ದಾರೆ.
ಇಂದು ಸಚಿವ ಖಾದರ್ ಭೇಟಿ: ಹಿಲರಿ ನಗರ, ಕೈಕೊ, ಉಚ್ಚಿಲ, ಕೋಡಿ, ಮೊಗವೀರಪಟ್ಣ, ಮುಕ್ಕಚೇರಿ, ಕೋಟೆಪುರ ಪ್ರದೇಶಗಳು ಕಡಲ್ಕೊರೆತದಿಂದ ಅಪಾಯದಂಚಿನಲ್ಲಿದ್ದು, ಶನಿವಾರ ಬೆಳಗ್ಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಭೇಟಿ ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

