ಉಪ್ಪಿನಂಗಡಿ: ಯಾವ ಸಮಸ್ಯೆಗೂ ಪರಿಹಾರ ಕಂಡುಕೊಳ್ಳದ ನರೆ ಮುಂಜಾಗ್ರತಾ ಸಭೆ
ಉಪ್ಪಿನಂಗಡಿ: ನೇತ್ರಾವತಿ ಮತ್ತು ಕುಮಾರಾಧಾರ ನದಿಗಳ ದಂಡೆಯಲ್ಲಿರುವ ಉಪ್ಪಿನಂಗಡಿಯಲ್ಲಿ ಶುಕ್ರವಾರ ಪ್ರವಾಹ ಮುಂಜಾಗ್ರತಾ ಸಭೆ ಪುತ್ತೂರು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದು ಇಲಾಖಾ ಜವಾಬ್ದಾರಿಗಳ ಬಗೆಗಿನ ಪಾರಮರ್ಶೆ ನಡೆಸಲಾಯಿತು.
ಉಪ್ಪಿನಂಗಡಿಯ ಸಂಗಮ ಕೃಪಾ ಸಭಾಭವನದಲ್ಲಿ ನಡೆದ ಈ ನೆರೆ ಮುಂಜಾಗ್ರತಾ ಸಭೆಯಲ್ಲಿ ಮೆಸ್ಕಾಂ ಇಲಾಖೆಯನ್ನೇ ಕೇಂದ್ರೀಕರಿಸಿ ಜನತೆ ವಾದ ಮಂಡನೆ ನಡೆಸಿದರಾದರೂ, ಅಂದು 30 ಪರಿವರ್ತಕಗಳು ಇದ್ದ ಕಾಲದಲ್ಲಿ 43 ಸಿಬ್ಬಂದಿ ಇದ್ದಿದ್ದರೆ, ಇಂದು 350 ಪರಿವರ್ತಕಗಳು ಇದ್ದರೂ ಸಿಬ್ಬಂದಿ ಸಂಖ್ಯೆ ಕೇವಲ ಹತ್ತು ಮಾತ್ರ. ಈ ಕನಿಷ್ಠ ಸಿಬ್ಬಂದಿಯಿಂದ ಎಲ್ಲರಿಗೂ ತೃಪ್ತಿ ಪಡಿಸುವ ಕಾರ್ಯ ನಿರ್ವಹಿಸಲು ತಾವು ಅಸಮರ್ಥರೆಂದು ಮೆಸ್ಕಾಂ ಅಭಿಯಂತರರು ಸಭೆಯಲ್ಲಿ ಹೇಳಿದರು.
ಸಿಬ್ಬಂದಿ ಕೊರತೆ ನೀಗಿಸುವುದು ಸರ್ಕಾರದ ಕೆಲಸವಾಗಿರುವುದರಿಂದ ಅದನ್ನು ಮೇಲ್ಮಟ್ಟದಲ್ಲಿ ಚರ್ಚಿಸಿ ಬಗೆ ಹರಿಸಬೇಕಾಗಿದೆ ಎಂದು ತಹಸೀಲ್ದಾರ್ ಕುಳ್ಳೆಗೌಡ ತಿಳಿಸಿದರು. ಮೇಲ್ಮಟ್ಟ ಕೆಳಮಟ್ಟ ಎಂದು ವಿಶ್ಲೇಷಿಸಿ ಸಮಸ್ಯೆಗೆ ಪರಿಹಾರ ಲಭಿಸದಿದ್ದರೆ ಕಾಟಾಚಾರಕ್ಕೆ ಈ ಸಭೆಯನ್ನು ನಡೆಸುವುದೇಕೆಂದು ಪಂಚಾಯತ್ ಸದಸ್ಯ ಯು.ಕೆ ಇಬ್ರಾಹಿಂ ಬಲವಾದ ಆಕ್ಷೇಪ ವ್ಯಕ್ತಪಡಿಸಿದರು.
ಹೆದ್ದಾರಿಯ ಬದಿಗಳಲ್ಲಿ ತಗ್ಗು ಪ್ರದೇಶಕ್ಕೆ ಮಣ್ಣು ಹಾಕಿ ಎತ್ತರಿಸುವ ಪ್ರಕ್ರಿಯೆಯಲ್ಲಿ ಹೆದ್ದಾರಿ ಬದಿಯ ಚರಂಡಿಗಳನ್ನು ಕಬಳಿಸಲಾಗುತ್ತಿದೆ. ಮಳೆಯ ನೀರು ಸರಾಗವಾಗಿ ಹರಿದು ಹೋಗುವ ಚರಂಡಿಗಳನ್ನು ಅಕ್ರಮವಾಗಿ ಮುಚ್ಚಿ ಹಾಕುತ್ತಿದ್ದರೂ ಯಾರೂ ಈ ಬಗ್ಗೆ ತಡೆಯುತ್ತಿಲ್ಲ. ಇದರಿಂದಾಗಿ ಜನ ಸಾಮಾನ್ಯರು ಸಮಸ್ಯೆಗೆ ತುತ್ತಾಗುತ್ತಿದ್ದಾರೆ ಎಂದು ಪ್ರಸ್ತಾಪಿಸಿದಾಗ, ಅಧಿಕಾರಿಗಳಿಂದ ಸಮರ್ಪಕ ಸ್ಪಂದನೆ ವ್ಯಕ್ತವಾಗಲಿಲ್ಲ. ಹೆದ್ದಾರಿ ಬದಿಯ ಚರಂಡಿ ನಮ್ಮ ವ್ಯಾಪ್ತಿಗೆ ಬರುತ್ತಿಲ್ಲ. ಅದು ಹೆದ್ದಾರಿ ಇಲಾಖೆಯವರು ನೋಡಬೇಕು ಎಂದು ಪಿಡಿಒ ಹೇಳಿದರು.
ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಬಗ್ಗೆಯೂ ಚರ್ಚಿಸಲಾಗಿ, ಅರಣ್ಯ ಇಲಾಖೆ ಲಿಖಿತವಾಗಿ ಬಂದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದೆ ಎಂದು ಘೋಷಿಸಿತು.
ಗಂಭೀರತೆ ಇಲ್ಲದ... ಅರ್ಥಹೀನ ಸಭೆ: ನೆರೆಯಂತಹ ಅಪಾಯಕಾರಿ ಸನ್ನಿವೇಶವನ್ನು ನಿಭಾಯಿಸುವ ಕುರಿತು ಚರ್ಚಿಸಲು ಕರೆಯಲಾಗಿದ್ದ ಈ ಸಭೆಯಲ್ಲಿ ತಹಸೀಲ್ದಾರ್ ಕುಳ್ಳೇಗೌಡರ ಗಂಭೀರ ನಿರ್ವಹಣೆ ಇಲ್ಲದ, ಹೊಣೆಗಾರಿಕೆ ತೋರದ ಅರ್ಥಹೀನ ಸಭೆಯಾಗಿ ಮೂಡಿಬಂತು.
ಸಭೆಯಲ್ಲಿ ಮಂಡಿಸಲಾದ ಎಲ್ಲಾ ಸಮಸ್ಯೆಗಳನ್ನು ಶಾಂತ ಚಿತ್ತದಿಂದ ಆಲಿಸಿದ ತಹಸೀಲ್ದಾರರ, ಸಮಸ್ಯೆಯ ಗಂಭೀರತೆಯನ್ನಾಗಲಿ, ಸಮಸ್ಯೆಯ ಮೂಲದಲ್ಲಿರುವ ಕಾನೂನಿನ ಉಲ್ಲಂಘನೆಯ ನೆಲೆಯನ್ನಾಗಲಿ ಅರ್ಥೈಸಿಕೊಳ್ಳದೆ ಪ್ರಕರಣಗಳನ್ನು ಕೇವಲವಾಗಿ ತೆಗೆದುಕೊಂಡರು. ಕೃಷಿ ಭೂಮಿ ಇರುವ ಪ್ರದೇಶದಲ್ಲಿ ಮಣ್ಣು ಹಾಕಿ ಚರಂಡಿಗಳನ್ನು ಮುಚ್ಚುತ್ತಿರುವ ಕೃತ್ಯವನ್ನೂ ಗಂಭೀರವಾಗಿ ತೆಗೆದುಕೊಳ್ಳದೆ ಮುಂದಿನ ಸಮಸ್ಯೆಯತ್ತ ತೆರಳಿದ್ದು ಅಚ್ಚರಿಗೆ ಕಾರಣವಾಯಿತು.
ಒಟ್ಟಾರೆ ಸಮಸ್ಯೆಗಳನ್ನು ಅನುಭವಿಸುವುದು ನಿಮ್ಮ ಕರ್ಮ ಎಂಬಂತಿತ್ತು ಸಭಾಧ್ಯಕ್ಷರು ಸಭೆಯನ್ನು ನಿರ್ವಹಿಸಿದ ರೀತಿ. ಅಪಾಯಕಾರಿ ಸಂದರ್ಭದಲ್ಲಿ ಸಹಾಯಕ್ಕೆಂದು ದೋಣಿ ಬೇಕೆಂಬ ಪ್ರತಿ ವರ್ಷದ ಬೇಡಿಕೆಯನ್ನೂ ಈ ಬಾರಿಯೂ ಮಂಡಿಸಿದಾಗ, ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸುವ ಬದಲು ಈ ಹಿಂದೆ ದೋಣಿ ಬಳಸುವ ಸನ್ನಿವೇಶ ಬಾರದಿದಿದ್ದುದಕ್ಕೆ ಸಂತಸಪಡುವ ಎಂಬ ಉತ್ತರ ಬಂತು.
ಒಟ್ಟಾರೆ ನೆರೆ ಮುಂಜಾಗ್ರತಾ ಸಭೆ ಕಡತದಲ್ಲಿ ದಾಖಲೆಗಾಗಿ ನಡೆಯಿತೇ ವಿನಾ ಯಾವುದೇ ಸಮಸ್ಯೆಗಳಿಗೆ ಪರಿಹಾರ ಮಾತ್ರ ಕಂಡಕೊಳ್ಳಲಾಗಲಿಲ್ಲ.
ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷೆ ನಳಿನಾಕ್ಷಿ, ಜಿಪಂ ಸದಸ್ಯ ಕೇಶವ ಗೌಡ ಬಜತ್ತೂರು, ತಾಪಂ ಸದಸ್ಯ ಉಮೇಶ್ ಶೆಣೈ, ಪೊಲೀಸ್ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

