ಮಂಗಳೂರು: ನಾಳೆ ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆ
ಮಂಗಳೂರು: ಕಾರ್ಮಿಕ ಇಲಾಖೆ ವತಿಯಿಂದ ಜೂ. 12 ರಂದು ಪುರಭವನದಲ್ಲಿ ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆ ನಡೆಯಲಿದೆ. ಜಿಲ್ಲೆಯಲ್ಲಿ 2012-13ನೇ ಸಾಲಿನಲ್ಲಿ ಒಟ್ಟು 5070 ದಾಳಿಗಳನ್ನು ಹಾಗೂ ತನಿಖೆಗಳನ್ನು ನಡೆಸಲಾಗಿದೆ. ಮೂರು ಬಾಲಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆ. ಇವರಲ್ಲಿ ಇಬ್ಬರು ಅಪಾಯಕಾರಿ ಹಾಗೂ ಒಂದು ಮಗು ಅಪಾಯಕಾರಿಯಲ್ಲದ ಉದ್ದಿಮೆಯಲ್ಲಿ ದುಡಿಯುತ್ತಿದ್ದರು. ಇದರಲ್ಲಿ ಒಂದು ಮಗುವನ್ನು ಪೋಷಕರಿಗೆ ಒಪ್ಪಿಸಲಾಗಿದೆ. ಇನ್ನೊಂದು ಮಗುವನ್ನು ಬಿಜೈ ಚಿಣ್ಣರ ತಂಗುಧಾಮಕ್ಕೆ ಸೇರಿಸಲಾಗಿದೆ ಎಂದು ಪ್ರಜ್ಞಾ ಸಂಸ್ಥೆಯ ಮುಖ್ಯಸ್ಥ ಹಿಲ್ಡಾ ರಾಯಪ್ಪನ್ ಹೇಳಿದರು. ಕಾರ್ಯಕ್ರಮದಂದು ಜ್ಯೋತಿ ವೃತ್ತದಿಂದ ಪುರಭವನದವರೆಗೆ ಜನಜಾಗೃತಿ ಮೂಡಿಸುವ ಬೀದಿ ನಾಟಕ, ಮೈಮ್ ಶೋ, ಜಾಥಾ ನಡೆಯಲಿದೆ.
ಸರ್ಕಾರಿ ಹುದ್ದೆಗೆ ತರಬೇತಿ
ಮಂಗಳೂರು: ಮಹಾತ್ಮ ಗಾಂಧಿ ವಿದ್ಯಾಪೀಠ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿ ಮುಗಿಸಿದ, ಓದುತ್ತಿರುವ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ. ಹೆಚ್ಚಿನ ಮಾಹಿತಿಗಾಗಿ ದೂಮಪ್ಪ ಕೌಂಪೌಂಡ್ ಪಾಂಡೇಶ್ವರ- 9449451328.
ಮನುಷ್ಯನ ತಲೆಬುರುಡೆ ಪತ್ತೆ
ಮೂಲ್ಕಿ: ಇಲ್ಲಿನ ಸಮೀಪದ ಕೆರೆಕಾಡು ಬಳಿ ರಸ್ತೆ ಬದಿಯಲ್ಲಿ ಮನುಷ್ಯನ ತಲೆಬುರುಡೆ ಪತ್ತೆಯಾಗಿದ್ದು, ವಾಮಾಚಾರ ಪ್ರಯೋಗಕ್ಕೆ ಉಪಯೋಗಿಸಲು ತಂದಿರಬಹದು. ಇಲ್ಲಿ ಜಾಗದ ವ್ಯವಹಾರ ಜೋರಾಗಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ವಾಮಾಚಾರ ನಡೆದಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.
ಸ್ವರುಣ್ರಾಜ್ ಅಂತ್ಯಕ್ರಿಯೆ
ಮಂಗಳೂರು: ಬೈಕ್ ಅಪಘಾತದಲ್ಲಿ ಭಾನುವಾರ ಮೃತಪಟ್ಟ ಪಿವಿಎಸ್ ಸಂಸ್ಥೆಯ ಸಿಇಒ ಸ್ವರುಣ್ರಾಜ್ (28) ಅಂತಿಮ ದರ್ಶನಕ್ಕೆ ಬಂಟ್ಸ್ ಹಾಸ್ಟೆಲ್ ಮನೆಯಲ್ಲಿ ಸೋಮವಾರ ಅವಕಾಶ ಮಾಡಲಾಗಿತ್ತು. ನೂರಾರು ಮಂದಿ ಅಂತಿಮ ದರ್ಶನ ಪಡೆದರು. ಬಳಿಕ ಬೋಳೂರಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಎಂಜಿನಿಯರ್ ಆಗಿದ್ದ ಸ್ವರುಣ್ರಾಜ್, ಸಂಸ್ಕಾರ ಭಾರತಿ ಕಾರ್ಯದರ್ಶಿ ಮತ್ತು ಅಖಿಲಭಾರತೀಯ ವಿದ್ಯಾರ್ಥಿ ಪರಿಷತ್ ಭ್ರಷ್ಟಾಚಾರ ವಿರುದ್ಧ ಯುವಜನತೆ ಸಂಘಟನೆ ಸಹ ಸಂಚಾಲಕರಾಗಿದ್ದರು. ನಿಧನಕ್ಕೆ ಎಬಿವಿಪಿ ರಾಜ್ಯ ಕಾರ್ಯದರ್ಶಿ ರಮೇಶ್ ಕೆ. ಸಂತಾಪ ವ್ಯಕ್ತಪಡಿಸಿದ್ದಾರೆ. ಭಾನುವಾರ ಸಂಜೆ ಬಿಜೈಬಳಿ ಬೈಕ್ನಲ್ಲಿ ತೆರಳುತ್ತಿದ್ದಾಗ ಕಾರಿಗೆ ಡಿಕ್ಕಿಯಾಗಿ ಮೃತಪಟ್ಟಿದ್ದರು.
ಯಕ್ಷಗಾನ ಕಮ್ಮಟ ಸಮಾರೋಪ
ಮೂಲ್ಕಿ: ಯಕ್ಷಗಾನದ ಬೆಳವಣಿಗೆಗೆ ಕಮ್ಮಟಗಳು ಪೂರಕವಾಗಿದ್ದು, ಯುವ ಕಲಾವಿದರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಕಟೀಲು ದೇವಳ ಶಾಲಾ ಸರಸ್ವತಿ ಸದನದಲ್ಲಿ ಜರುಗಿದ ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ (ಪರಂಪರೆ-ಪ್ರಯೋಗ)ದ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು. ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ, ರಿಜಿಸ್ಟ್ರಾರ್ ಡಿ.ಆರ್. ಮೈಥಿಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

