ದಕ್ಷಿಣ ಕನ್ನಡ

ಮಾನಸಿಕ ಅಸ್ವಸ್ಥರಾದ ಒಂದೇ ಕುಟುಂಬದ ಐವರ ಚಿಕಿತ್ಸೆಗೆ ಸಚಿವ ಖಾದರ್ ಸೂಚನೆ

Published On :

ಉಪ್ಪಿನಂಗಡಿ: ಕಳೆದ ಕೆಲವು ವರ್ಷಗಳಿಂದ ಕಡಬ ಸಮೀಪದ ಕುಟ್ರುಪ್ಪಾಡಿ ಗ್ರಾಮದ ಕೇಪು ಎಂಬಲ್ಲಿ ಶಾಪಗ್ರಸ್ತವೇನೋ ಎಂಬಂತಿದ್ದ ಒಂದೇ ಕುಟುಂಬದ ಐವರು ಮಾನಸಿಕ ಅಸ್ವಸ್ಥರನ್ನು ಸೂಕ್ತ ಚಿಕಿತ್ಸೆಗೆ ಒಳಪಡಿಸುವಂತೆ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾಜ ಸೇವಾ ಸಂಸ್ಥೆಯೊಂದು ಅವರನ್ನು ಶುಕ್ರವಾರ ಮಂಗಳೂರಿನ ಕಂಕನಾಡಿ ಆಸ್ಪತ್ರೆಗೆ ಸೇರಿಸಿದ್ದು ಶೀಘ್ರ ಗುಣಮುಖರಾಗುವ ಭರವಸೆಯನ್ನು ಹೊಂದಲಾಗಿದೆ.
ಕುಟ್ರುಪಾಡಿ ಗ್ರಾಮದ ಕೇಪು ಎಂಬಲ್ಲಿ ಬಡ ಕುಟುಂಬವೊಂದರ ಐದು ಮಂದಿ ಮಾನಸಿಕ ಅಸ್ವಸ್ಥರಾಗಿದ್ದಾರೆ. ಈ ಕುಟುಂಬದ ಶೇಕ್ ಇಬ್ರಾಹಿಂ ಎಂಬವರ ಎರಡನೇ ಪತ್ನಿ ಖತೀಜಾಬಿ(58) ಹಾಗೂ ಅವರ ನಾಲ್ವರು ಮಕ್ಕಳಾದ ಸುಮಾರು 30 ವರ್ಷದ ಖುಲ್ಸುಂಬಿ, 28 ವರ್ಷದ ಆಯಿಷಾಬಿ, 26 ವರ್ಷದ ಅಬ್ದುಲ್ಲಾ ಹಾಗೂ 24 ವರ್ಷದ ಜುಬೇದಾ ಮಾನಸಿಕ ಕಾಯಿಲೆಗೆ ತುತ್ತಾಗಿ ದಯನೀಯ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದರು.
ಮೂರು ವರ್ಷಗಳ ಹಿಂದೆ ವಿವಿಧ ಮಾಧ್ಯಮಗಳಲ್ಲಿ ಬಂದ ವರದಿಯನ್ನಾಧರಿಸಿ ಮೂಡಿಗೆರೆಯ ಸಮಾಜ ಸೇವಕರ ತಂಡವೊಂದು ಇಲ್ಲಿಗೆ ಬಂದು ಕಡಬದ ಮುತ್ತುರ್ರಸೂಲ್ ಸಂಘಟನೆಯ ಸದಸ್ಯರೊಂದಿಗೆ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ 2 ವರ್ಷ ಕಳೆಯುವಷ್ಟರಲ್ಲಿ ಮತ್ತೆ ಮಾನಸಿಕ ವ್ಯಾಧಿಗೆ ಒಳಗಾದರು. ಮೂಡಿಗೆರೆಯ ಸಮಾಜ ಸೇವಕರ ತಂಡದ ಸದಸ್ಯರು ಸಚಿವ ಯು.ಟಿ. ಖಾದರ್ ಗಮನಕ್ಕೆ ತಂದಿದ್ದರು. ಈ ಬಗ್ಗೆ ಕ್ರಮ ಕೈಗೊಂಡ ಸಚಿವ ಖಾದರ್, ಮಾನಸಿಕ ಅಸ್ವಸ್ಥರನ್ನು ಮಂಗಳೂರಿನ ಕಂಕನಾಡಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ಗುರುವಾಯನಕೆರೆ ಅಳದಂಗಡಿಯ ಗುಜರಿ ವ್ಯಾಪಾರಿ ಅಯ್ಯೂಬ್ ಶಾಫಿ ಹಾಗೂ ಮಂಗಳೂರಿನ ಮಹಮ್ಮದ್ ಶೇಖ್ ಎಂಬವರು ಕಡಬದ ಮುತ್ತುರ್ರಸೂಲ್ ಸಂಘಟನೆ ಸದಸ್ಯರೊಂದಿಗೆ ಕಂಕನಾಡಿ ಆಸ್ಪತ್ರೆಗೆ ಸೇರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.