ಚಿಣ್ಣರ ಸಮವಸ್ತ್ರ ಈಗ ಬಣ್ಣ ಬಣ್ಣ
ಮಂಗಳೂರು: ಈ ವರ್ಷದಿಂದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೂ ಬಣ್ಣ ಬಣ್ಣದ ಸಮವಸ್ತ್ರ ಧರಿಸುವ ಭಾಗ್ಯ! ಕೇಂದ್ರ ಸರ್ಕಾರ ಸರ್ವ ಶಿಕ್ಷಾ ಅಭಿಯಾನದಡಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಮೊದಲ ಬಾರಿಗೆ ಸಮವಸ್ತ್ರ ನೀಡಿದೆ. ಈ ಸಮವಸ್ತ್ರಕ್ಕೆ ನಾಲ್ಕು ಬಣ್ಣಗಳ ಆಯ್ಕೆ ಇದೆ. ಬಣ್ಣಗಳ ಆಯ್ಕೆ ಆಯಾ ಜಿಲ್ಲಾ ಪಂಚಾಯ್ತಿ ಮತ್ತು ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ. ಹೀಗಾಗಿ ರಾಜ್ಯದಲ್ಲಿ ಮಕ್ಕಳು ಧರಿಸುವ ಸಮವಸ್ತ್ರದ ಬಣ್ಣಗಳು ಈ ಬಾರಿ ಬದಲಾಗಿದೆ. ರಾಜ್ಯ ಸರ್ಕಾರ ನೀಡುವ ಸಮವಸ್ತ್ರದಲ್ಲಿ ಒಂದೇ ಆಯ್ಕೆ, ತಿಳಿ ನೀಲಿ ಬಣ್ಣ ಅಂಗಿ ಮತ್ತು ಕಡು ನೀಲಿ ಬಣ್ಣದ, ಚಡ್ಡಿ, ಪ್ಯಾಂಟ್ ಅಥವಾ ಲಂಗ.
ಹಲವು ಶಾಲೆಗಳಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಕೂಡಾ ಸಮವಸ್ತ್ರದ ಬಣ್ಣ ನಿರ್ಧರಿಸುತ್ತದೆ. ಹೆಚ್ಚಿನ ಶಾಲೆಗಳಲ್ಲಿ ಸಾಂಪ್ರದಾಯಿಕ ನೀಲಿ, ಬಿಳಿ ಸಮವಸ್ತ್ರ ಮಕ್ಕಳು ಹೊಲಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆ ಮಕ್ಕಳು ಮೂರು ಬಣ್ಣದ ಸಮವಸ್ತ್ರದಲ್ಲಿ ಮಿಂಚುತ್ತಿದ್ದಾರೆ.
ವಿದ್ಯಾ ವಿಕಾಸ ಯೋಜನೆಯಲ್ಲಿ ರಾಜ್ಯ ಸರ್ಕಾರ ಮಕ್ಕಳಿಗೆ ವಿತರಿಸುವ ಸಮವಸ್ತ್ರ ಬಣ್ಣ ಬದಲಾಗಿಲ್ಲ. ಸರ್ವ ಶಿಕ್ಷಣ ಅಭಿಯಾನದಡಿ ಎಲ್ಲ ಸರ್ಕಾರಿ ಶಾಲೆಗಳಿಗೆ ಸಮವಸ್ತ್ರ ನೀಡಲಾಗಿದೆ. ನಾಲ್ಕು ಬಣ್ಣಗಳಲ್ಲಿ ಒಂದನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿತ್ತು. ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ ರಾಜ್ಯ ಸರ್ಕಾರ ನೀಡಿದ ಸಮವಸ್ತ್ರ ಹಾಕಿಕೊಳ್ಳಬೇಕು, ಸರ್ವ ಶಿಕ್ಷಣ ಅಭಿಯಾನದಿಂದ ನೀಡಲಾಗುವ ಸಮವಸ್ತ್ರವನ್ನು ಬುಧವಾರ ಮತ್ತು ಶನಿವಾರ ಹಾಕಬಹುದು ಎಂಬ ಸಲಹೆ ಮಾಡಲಾಗಿದೆ ಎಂದು ಸರ್ವ ಶಿಕ್ಷಣ ಅಭಿಯಾನ (ಸಮವಸ್ತ್ರ ವಿಭಾಗ) ರಾಜ್ಯ ಸಮನ್ವಯಾಧಿಕಾರಿ ನರಸಿಂಹರಾಜು ವಿವರಿಸುತ್ತಾರೆ.
ಒಂದೇ ಬಣ್ಣದ ಸಮವಸ್ತ್ರ ಧರಿಸಿ ಸರ್ಕಾರಿ ಶಾಲೆ ಮಕ್ಕಳೆಂದೇ 'ಬ್ರಾಂಡ್' ಆಗಿದ್ದ ಮಕ್ಕಳು ಕಾನ್ವೆಂಟ್ ಮಕ್ಕಳಂತೆ ಬಣ್ಣ, ಬಣ್ಣದ ಸಮವಸ್ತ್ರಗಳಿಂದ ಮಿಂಚುತ್ತಿದ್ದಾರೆ. ಶಾಲೆಗಳಲ್ಲಿ ಮಕ್ಕಳು ಒಂದೇ ದಿನ ಬೇರೆ ಬೇರೆ ಬಣ್ಣದ ಸಮವಸ್ತ್ರ ಧರಿಸಲುತೊಡಗಿ ಗೊಂದಲವಾದರೂ ವಾರದಲ್ಲಿ ಎಷ್ಟು ದಿನ ಯಾವ ಸಮವಸ್ತ್ರ ಧರಿಸಬೇಕು ಎನ್ನುವುದನ್ನು ಮಕ್ಕಳಿಗೆ ಸ್ಪಷ್ಟವಾಗಿ ಹೇಳುವಂತೆ ಮುಖ್ಯೋಪಾಧ್ಯಾಯರಿಗೆ ಸೂಚಿಸಲಾಗಿದೆ.
'ಮಫತ್ಲಾಲ್ ಮೊದಲಾದ ದೊಡ್ಡ ಕಂಪೆನಿಗಳು ಟೆಂಡರ್ ಪಡೆದು ಅತ್ಯುತ್ತಮ ಗುಣಮಟ್ಟದ ಸಮವಸ್ತ್ರ ನೀಡಿವೆ. ಕ್ರೀಮ್ ಕಲರ್ ಶರ್ಟ್, ಮೆರೂನ್ ಕಲರ್ ಪ್ಯಾಂಟ್, ಚಡ್ಡಿ, ಲಂಗ ಆಯ್ಕೆ ಮಾಡಿದೆವು. ಕಳೆದ ಮಾರ್ಚ್ನಲ್ಲಿ ಸರಬರಾಜು ಆಯಿತು. ಹೀಗಾಗಿ ಅದನ್ನು ಈ ಶೈಕ್ಷಣಿಕ ವರ್ಷದಿಂದ ಮಕ್ಕಳು ಧರಿಸುತ್ತಿದ್ದಾರೆ. ಮಳೆಗಾಲವಾದ್ದರಿಂದ ಮಕ್ಕಳಿಗೆ ಬಟ್ಟೆ ಒಣಗಿಸಲು ಸಾಧ್ಯವಾಗುವ ಹಾಗೆ ಸಮವಸ್ತ್ರ ಧರಿಸಲು ದಿನ ನಿಗದಿಪಡಿಸಲಾಗಿದೆ' ಎಂದು ಸರ್ವ ಶಿಕ್ಷಣ ಅಭಿಯಾನ ಜಿಲ್ಲಾ ಉಪಯೋಜನ ಸಮನ್ವಯ ಅಧಿಕಾರಿ ಶಿವಪ್ರಕಾಶ್ ಹೇಳುತ್ತಾರೆ.
'ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಸಿಇಒ ಮತ್ತು ನಾವು ಸೇರಿ ಸಮವಸ್ತ್ರ ಬಣ್ಣ ನಿರ್ಧರಿಸಿದೆವು. ಗುಣಮಟ್ಟ, ಕಲರ್ ಕಾನ್ವೆಂಟ್ ಶೈಲಿಯಲ್ಲಿದೆ' ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಮೊಸೆಸ್ ಜಯಶೇಖರ್ ತಿಳಿಸಿದ್ದಾರೆ.
ಮೊದಲ 4 ವರ್ಷ ತಿಳಿ ನೀಲಿ ಅಂಗಿ, ಕಡು ನೀಲಿ ಲಂಗ, ಚಡ್ಡಿ ಸಮವಸ್ತ್ರ ನೀಡುತ್ತಿದ್ದರು. ಇದರೊಂದಿಗೆ ಕಳೆದ ಮಾರ್ಚ್ ತಿಂಗಳಲ್ಲಿ ಬೇರೆ ಬಣ್ಣದ ಒಳ್ಳೆಯ ಸಮವಸ್ತ್ರ ನೀಡಿದ್ದಾರೆ. ಎಸ್ಡಿಎಂಸಿ ಸೂಚಿಸಿರುವ ನೀಲಿ-ಬಿಳಿ ಸಮವಸ್ತ್ರ ಧರಿಸಲು ವಾರದಲ್ಲಿ ದಿನ ನಿಗದಿಪಡಿಸಲಾಗಿದೆ ಎಂದು ಸರ್ಕಾರಿ ಶಾಲೆ ಮುಖ್ಯೋಪಾಧ್ಯಾಯಿನಿ ಹೇಳುತ್ತಾರೆ.
-ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

