ದಕ್ಷಿಣ ಕನ್ನಡ

ಬೀದಿಗೆ ಬಂತು ರೈತ ಸಂಘ ಹಸಿರುಸೇನೆ ಜಿಲ್ಲಾ ಸಂಘಟನೆ ಭಿನ್ನಮತ

Published On :

ಪುತ್ತೂರು: ರಾಜ್ಯ ರೈತಸಂಘ ಹಸಿರು ಸೇನೆ ಜಿಲ್ಲಾ ಸಂಘಟನೆ ವಿಭಜನೆಗೊಂಡಿದೆ.
ಬುಧವಾರ ಪುತ್ತೂರಿನ ಕಲ್ಲಾರೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ರೋಹಿತಾಕ್ಷ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭೆ ನಡೆದು ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು ಅವರನ್ನು ಬದಲಾವಣೆ ಮಾಡುವುದರೊಂದಿಗೆ ವಿವಾದ ಬೀದಿಗೆ ಬಂದಿದೆ.
ಯಾರೋ ಬೀದಿಯಲ್ಲಿ ಹೋಗುವವರು ಸೇರಿಕೊಂಡು ಸಂಘಟನೆಯ ಹೆಸರಿನಲ್ಲಿ ಸಭೆ ನಡೆಸಿದರೆ ಅದು ಅಧಿಕೃತ ಸಭೆಯಾಗುವುದಿಲ್ಲ. ಅದಕ್ಕೆ ಮಾನ್ಯತೆಯಿಲ್ಲ ಎಂದು ಶ್ರೀಧರ್ ಶೆಟ್ಟಿ ಬೈಲುಗುತ್ತು ಪ್ರತಿಕ್ರಿಯೆ ನೀಡಿದ್ದಾರೆ.
ನಡೆದಿದ್ದೇನು?: ಪುತ್ತೂರಿನ ಕಲ್ಲಾರೆಯಲ್ಲಿ ರಾಜ್ಯ ರೈತಸಂಘ ಹಸಿರುಸೇನೆ ಜಿಲ್ಲಾಧ್ಯಕ್ಷ ರೋಹಿತಾಕ್ಷ ಶೆಟ್ಟಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯ ವೇಳೆ ರಾಜಕೀಯ ಪಕ್ಷವೊಂದಕ್ಕೆ ಬೆಂಬಲ ವ್ಯಕ್ತಪಡಿಸಿದ ಆರೋಪದಲ್ಲಿ ಸಂಘಟನೆಯ ಕಾರ್ಯಾಧ್ಯಕ್ಷರಾಗಿದ್ದ ಶ್ರೀಧರ್ ಶೆಟ್ಟಿಯನ್ನು  ಉಚ್ಚಾಟನೆಗೊಳಿಸಿ ನೂತನ ಕಾರ್ಯಾಧ್ಯಕ್ಷರಾಗಿ ರವಿಕಿರಣ್ ಪುಣಚ ಅವರನ್ನು ಆಯ್ಕೆ ಮಾಡಲಾಗಿದೆ.
ಅನಧಿಕೃತ ಸಭೆ: ಈ ವಿದ್ಯಮಾನದ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಬುಧವಾರ ಸಭೆ ನಡೆಸಿದ ಸಮಿತಿ ಊರ್ಜಿತದಲ್ಲೇ ಇಲ್ಲ. ಆರ್ಥಿಕ ಶಿಸ್ತು ಪಾಲಿಸದ ಹಿನ್ನೆಲೆಯಲ್ಲಿ ಸಂಘಟನೆಯಿಂದ ಹೊರಗಿಟ್ಟಿರುವ ಏಳೆಂಟು ಮಂದಿಯ ಅಕ್ರಮ ಕೂಟ ಸೇರಿಕೊಂಡು ಗುಟ್ಕಾ ನಿಷೇಧದ ಬಗ್ಗೆ ಮತ್ತು ಗೋರಖ್ ಸಿಂಗ್ ವರದಿಯ ಬಗ್ಗೆ ಚರ್ಚಿಸಲೆಂದು ಸಭೆ ಕರೆಯುತ್ತಿರುವುದಾಗಿ ಸಂಘಟನೆಯ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ತಪ್ಪು ಮಾಹಿತಿ ನೀಡಿ ಬುಧವಾರ ಸಭೆ ನಡೆಸಿದೆ. ಇದು ಅನಧಿಕೃತ ಸಭೆ ಎಂದು ಹೇಳಿದ್ದಾರೆ.
ರಾಜ್ಯ ರೈತ ಸಂಘ ಹಸಿರುಸೇನೆಯ ರಾಜ್ಯ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಡಿಲ ಈಶ್ವರ ಭಟ್, ಮುಖಂಡರಾದ ಧರ್ಣಪ್ಪ ಗೌಡ ಇಡ್ಯಾಡಿ, ಚೆನ್ನಪ್ಪ ಗೌಡ ಮೊದಲಾದವರ ಗಮನಕ್ಕೆ ತಾರದೆ ನಡೆಸಿದ ಸಭೆ ಅಧಿಕೃತವಾಗುವುದಿಲ್ಲ. ಆ ಸಭೆಗೆ ಯಾವ ಮಾನ್ಯತೆಯೂ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಪಕ್ಷಕ್ಕೆ ಬೆಂಬಲ ನೀಡಿಲ್ಲ: ನಾವು ಯಾವುದೇ ಪಕ್ಷಕ್ಕೆ ಬೆಂಬಲ ನೀಡಿಲ್ಲ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಶಕುಂತಳಾ ಶೆಟ್ಟಿ ಅವರಿಗೆ ವೈಯಕ್ತಿಕ ನೆಲೆಯಲ್ಲಿ ಸಂಘಟನೆಯವರು ಬೆಂಬಲ ನೀಡಿದ್ದೇವೆ ಎಂದ ಅವರು ಅನಧಿಕೃತರ ಹೇಳಿಕೆಗೆ ತಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಬುಧವಾರ ನಡೆದ ವಿದ್ಯಮಾನಗಳ ಬಗ್ಗೆ ತಾನು ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಗಮನಕ್ಕೆ ತಂದಿದ್ದೇನೆ. ಆರ್ಥಿಕ ಶಿಸ್ತು ಸ್ಥಿತಿ ಅನುಸರಿಸದಿದ್ದ ಯಾರನ್ನೇ ಆಗಲಿ ಸಂಘಟನೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಧ್ಯಕ್ಷರೇ ತಿಳಿಸಿದ್ದಾರೆ ಎಂದು ಶ್ರೀಧರ್ ಶೆಟ್ಟಿ ಮಾಹಿತಿ ನೀಡಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.