ಯಕ್ಷ ಪಠ್ಯ: ಕುಂಟುತ್ತಾ ಸಾಗಿದೆ ಕುಣಿತ ಅಧ್ಯಾಯ!
ಮಂಗಳೂರು: ಭರತನಾಟ್ಯ, ಸಂಗೀತ ಕಲೆಯಂತೆ ಯಕ್ಷಗಾನವನ್ನು ಲಲಿತ ಕಲೆ ವಿಭಾಗಕ್ಕೆ ಸೇರಿಸಿ ಪದವಿ ನೀಡುವ ಕಾರ್ಯ ಕುಂಟುತ್ತಾ ಸಾಗಿದೆ. ಜೂನಿಯರ್ (ಪ್ರಾಥಮಿಕ) ಮತ್ತು ಸೀನಿಯರ್ (ಮಾಧ್ಯಮಿಕ) ವಿಭಾಗಕ್ಕೆ ಪಠ್ಯ ತಯಾರಾಗುತ್ತಿದೆ. ಪಠ್ಯದ ಥಿಯರಿ ವಿಭಾಗದ ಶೇ.80 ಕಾರ್ಯ ಮುಗಿದು ವರ್ಷ ಕಳೆಯುತ್ತಿದೆ. ಆದರೆ ಕುಣಿತದ ಶೇ.20 ಭಾಗ ಮುಗಿಸಲು ಪಠ್ಯ ಪುಸ್ತಕ ಸಮಿತಿ ಹರ ಸಾಹಸ ನಡೆಸುತ್ತಿದೆ.
ಕಲಾವಿದರಲ್ಲಿ ಕುಣಿತ ವಿಚಾರದಲ್ಲಿ ಸರ್ವ ಸಮ್ಮತ ಶೈಲಿ ಮೂಡದೇ ಇರುವುದು ಮತ್ತು ಪಠ್ಯ ಪುಸ್ತಕ ಸಮಿತಿಯಲ್ಲಿರುವವರಿಗೆ ಇತರೆ ಕೆಲಸಗಳ ಒತ್ತಡ ವಿಳಂಬಕ್ಕೆ ಕಾರಣ. ಸಮಿತಿ ಪರಿಶೀಲಕ ಜಿ.ಎಸ್.ಭಟ್ ಅಪಘಾತದಲ್ಲಿ ಸಾಗರದಲ್ಲಿ ಆಸ್ಪತ್ರೆ ಸೇರಿದ್ದಾರೆ. ಶಿಕ್ಷಣ ಇಲಾಖೆ ಪರವಾಗಿ ಸಮಿತಿಯಲ್ಲಿರುವ ಸುಳ್ಯ ಪ್ರಕಾಶ್ ಮೂಡಿತ್ತಾಯ ತಮ್ಮ ಕೆಲಸ ಮಧ್ಯೆ ಬಿಡುವು ಮಾಡಿಕೊಂಡು ಪಠ್ಯ ಪುಸ್ತಕ ಕಾರ್ಯ ಗಮನ ಹರಿಸಬೇಕಿದೆ. ಚುನಾವಣೆ ಹಿನ್ನೆಲೆಯಲ್ಲಿ ಎರಡು ತಿಂಗಳು ಮತ್ತೆ ವಿಳಂಬವಾಯಿತು. ಹೀಗಾಗಿ ಶೇ.80 ಕಾರ್ಯ ಮುಗಿದರು ಉಳಿದ 20 ಕೆಲಸ ಸ್ಥಗಿತವಾಗಿದೆ.
ಯಕ್ಷಗಾನ ಪಾರಂಪರಿಕ ಕಲೆಯಾದ್ದರಿಂದ ಶೈಲಿ, ಲಕ್ಷಣಗಳು ಸಿದ್ಧರೂಪದಲ್ಲಿ ಇಲ್ಲ. ಕಾಲು ಎತ್ತಿ ಕುಣಿಯುವಾಗ ಎಷ್ಟು ಎತ್ತರ ಕುಣಿಯಬೇಕು, ಎಷ್ಟು ಸುತ್ತು ಹೇಗೆ ಬರಬೇಕು ಎಂಬುದ ಇಲ್ಲ. ಗುರುಮುಖೇನ ಕಲಿತದ್ದನ್ನು ಶಿಷ್ಯರಿಗೆ ಬೋಧಿಸಲಾಗುತ್ತಿದೆ. ಆದರೆ ಕಲಾವಿದರ ಜತೆ ಸೇರಿ ಚರ್ಚಿಸಿ ಸರ್ವ ಸಮ್ಮತವಾದ ಶೈಲಿಯನ್ನು ಕ್ರಮಬದ್ಧವಾಗಿ ರೂಪಿಸಬೇಕಾಗಿದೆ. ಮೇಳದ ಕಲಾವಿದರು ಸೀಸನ್ ತುಂಬಾ ಬ್ಯುಸಿಯಾಗಿದ್ದರು, ಆಗ ಕರೆದರೂ ಬರುವುದಿಲ್ಲ. ಮಳೆಗಾಲದಲ್ಲಿ ಮಾತ್ರ ಸಿಗುತ್ತಾರೆ. ಒಬ್ಬ ಕಲಾವಿದರಿಗೆ ಇನ್ನೊಬ್ಬರ ಶೈಲಿ ಸರಿ ಕಾಣುವುದಿಲ್ಲ. ಹೀಗಾಗಿ ಪಠ್ಯ ರೂಪಿಸಲು ಸಮಿತಿಯಿಂದಲೇ ತಡವಾಗುತ್ತಿದೆ.
'ಪಠ್ಯ ಪುಸ್ತಕ ರಚಿಸುವುದು ಹಿಂದಿನ ಅಕಾಡೆಮಿಯಲ್ಲಿ ರೂಪುಗೊಂಡಿತ್ತು. ಪಠ್ಯಪುಸ್ತಕ ರಚಿಸಿ ಪರೀಕ್ಷೆ ನಡೆಸುವಂತೆ ಮಾಡುವುದು ಯಕ್ಷಗಾನ ಅಕಾಡೆಮಿ ನೈತಿಕ ಹೊಣೆ, ಅಕಾಡೆಮಿಯ ಹತ್ತು ಹಲವು ಕೆಲಸಗಳ ಮಧ್ಯೆ ಇದನ್ನು ಮುಗಿಸುವ ಹೊಣೆಗಾರಿಕೆ ಇದೆ. ಇನ್ನು ಒಂದುವರೆ ವರ್ಷದೊಳಗೆ ಮುಗಿಸಲೇಬೇಕು. ಕುಣಿತದ ಅಧ್ಯಾಯ ಮಾತ್ರ ಬಾಕಿ ಇದೆ. ಛಾಯಾ ಚಿತ್ರಗಳ ಮೂಲಕ ವಿವರಣೆ ನೀಡಬೇಕಿದೆ' ಎನ್ನುತ್ತಾರೆ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ.
ಬೇರೆ ಯಾವುದೇ ಪಠ್ಯ ಪುಸ್ತಕ ರಚಿಸಲು, 3,4 ಸಭೆ ಸಾಕು ಎಂಬುದು ಶಿಕ್ಷಣ ಇಲಾಖೆ ನಿಯಮ. ಆದರೆ ಯಕ್ಷಗಾನ ಸರ್ವಸಮ್ಮತ ಶೈಲಿ ಮೂಡಿ ಬರಲು ಇಷ್ಟು ಸಭೆ ಸಾಲದು. ಚರ್ಚೆ, ಚಿಂತನ, ಮಂಥನ ನಡೆದೇ ಸಮಾನ ಅಭಿಪ್ರಾಯಯಕ್ಕೆ ಬರಬೇಕು. ಆದಷ್ಟು ಶೀಘ್ರದಲ್ಲಿ ಪಠ್ಯಪುಸ್ತಕ ರಚಿಸಬೇಕು, ವಿದ್ಯಾ ಇಲಾಖೆ ಬಳಿಕ ಪರೀಕ್ಷೆ ನಡೆಸಬೇಕು ಎನ್ನುತ್ತಾರೆ ಅಧ್ಯಕ್ಷ ಪ್ರೊ. ಸಾಮಗ.
-ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

