ದಕ್ಷಿಣ ಕನ್ನಡ

ಗಾಳಿ, ಮಳೆಗೆ ಬಿದ್ದ ಮರಗಳು, ವಿವಿಧೆಡೆ ರಸ್ತೆ ಸಂಪರ್ಕ ಕಡಿತ

Published On :

ಸುಳ್ಯ: ಸುಳ್ಯ ಹಾಗೂ ಆಸುಪಾಸಿನಲ್ಲಿ ಭಾನುವಾರ ವರ್ಷಧಾರೆ ಮುಂದುವರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಸಂಪರ್ಕ ಕಡಿತದ ಭೀತಿ ಎದುರಾಗಿದೆ.
ಮರಬಿದ್ದು ರಸ್ತೆ ಬಂದ್: ಐವರ್ನಾಡು ಗ್ರಾಮದ ನಾಟಿಕೇರಿ ರಸ್ತೆಗೆ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಐವರ್ನಾಡು ಹೈಸ್ಕೂಲ್ ಬಳಿ ನಾಟಿಕೇರಿಯಿಂದ ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆ ಇದಾಗಿದ್ದು, ಹತ್ತಿರದ ಮನೆಯವರು ಮರ ಕಡಿದು ರಸ್ತೆಯಿಂದ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು. ನಾಟಿಕೇರಿ ಎಂಬಲ್ಲಿ ಪುಟ್ಟಣ್ಣ ಎಂಬವರ ಅಂಗಡಿಯ ಒಂದು ಬದಿಗೆ ಮರ ಬಿದ್ದಿದ್ದು ಸ್ವಲ್ಪ ಹಾನಿಯಾಗಿದೆ. ಹತ್ತಿರದ ಮನೆಯವರ ರಬ್ಬರ್ ಗಿಡಗಳಿಗೆ ಹಾನಿಯಾಗಿದೆ.
ಕೆಸರು ಗದ್ದೆಯಾದ ರಸ್ತೆ: ಐವರ್ನಾಡು ಮುಖ್ಯ ಪೇಟೆಯಿಂದ ಸಿ. ಕೂಪ್ ಕಾಲೋನಿ ಕಣಿಲೆಗುಂಡಿ, ಕತ್ಲಡ್ಕ, ಮಿತ್ತಮೂಲೆ, ದೇವರಕಾನ, ಮೊಗಪ್ಪೆ, ಪೆರ್ಲಂಪಾಡಿ ಸಂಪರ್ಕಿಸುವ ರಸ್ತೆ ಕಣಿಲೆಗುಂಡಿ ಎಂಬಲ್ಲಿ ಕೆಸರುಮಯವಾಗಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ. ದ್ವಿಚಕ್ರ ವಾಹನಕ್ಕೂ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಶಾಲಾ ಮಕ್ಕಳಿಗೆ ನಡೆದು ಹೋಗಲು ಸಾಧ್ಯವಿಲ್ಲದಂತಾಗಿದೆ.
ಜಳಕದ ಹೊಳೆ- ಕೋಟೆಗುಡ್ಡೆ ರಸ್ತೆಯ ಕಂಬ್ರ ಎಂಬಲ್ಲಿ ಸೇತುವೆ ತಡೆಗೋಡೆ ಇಲ್ಲದಿರುವುದರಿಂದ ಸೇತುವೆಯ ಎರಡೂ ಬದಿ ಕುಸಿದಿದೆ. ಇನ್ನಷ್ಟು ಕುಸಿದಲ್ಲಿ ಕೋಟೆಗುಡ್ಡೆಗೆ ಹೋಗಲು ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗುವ ಭೀತಿ ಎದುರಾಗಿದೆ. ಸೇತುವೆಯಾಚೆಗೆ ಕಂಬ್ರ, ನೆಕ್ರಜೆ, ಮುಕ್ಕುಡ, ಪಂಬೆತ್ತಾಡಿ ಮೊದಲಾದ ಪ್ರದೇಶಗಳಿವೆ. ಎರಡು ವರ್ಷಗಳ ಹಿಂದೆ ಸೇತುವೆ ನಿರ್ಮಾಣವಾಗಿದ್ದು, ಇನ್ನೂ ತಡೆಗೋಡೆ ನಿರ್ಮಿಸಿಲ್ಲ.
ಸೇತುವೆ ಬಳಿ ರಸ್ತೆಯ ಇಕ್ಕೆಲಗಳಲ್ಲಿ ಕುಸಿತವು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಈ ಸೇತುವೆಯ ಸಮೀಪ ಕೆಸರು ಮಯವಾಗಿದ್ದು ವಾಹನ ಸಂಚಾರರೂ ಪರದಾಡುವಂತಾಗಿದೆ.
ನೂತನ ಸೇತುವೆ ಕಾಮಗಾರಿ ಮಂದಗತಿ: ಮಾಣಿ- ಮೈಸೂರು ರಾಜ್ಯ ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ಅರಂತೋಡು ಬಳಿಯ ಕುಲ್ಚಾರುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಈಗಾಗಲೇ ಮೂರು ಪಿಲ್ಲರ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ನಾಲ್ಕನೇ ಪಿಲ್ಲರ್ ನಿರ್ಮಾಣಕ್ಕಾಗಿ ಅಡಿಪಾಯ ತೆಗೆಯುತ್ತಿದ್ದಾಗ ಮಳೆಗಾಲ ಆರಂಭಗೊಂಡ ಕಾರಣ ಪಿಲ್ಲರ್ ನಿರ್ಮಾಣವಾಗುತ್ತಿದ್ದ ಜಾಗದಲ್ಲಿದ್ದ ಬೃಹದಾಕಾರದ ಮರವೊಂದು ಬುಡ ಸಮೇತ ಹೊಳೆಗೆ ಜರಿದು ಬಿದ್ದಿದೆ. ಮುಖ್ಯ ರಸ್ತೆಯ ಬಹುತೇಕ ಗೋಡೆಯು ಜರಿಯುತ್ತಿದ್ದು ರಾಜ್ಯ ಹೆದ್ದಾರಿಯ ಅಂಚಿನ ವರೆಗೂ ತಲುಪಿದ್ದು ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಸಮೀಪದ ಅಡಕೆ ತೋಟದ ಹೆಚ್ಚಿನ ಗಿಡಗಳು ಈಗಾಗಲೇ ನದಿ ಪಾಲಾಗಿವೆ.

ಉಡುಪಿಯಲ್ಲಿ ಬಿಸಿಲು
ಉಡುಪಿ: ಜಿಲ್ಲೆಯಲ್ಲಿ ಮಳೆ ಸ್ವಲ್ಪ ಹಿಮ್ಮುಖವಾದಂತಿದೆ. ಶನಿವಾರ ರಾತ್ರಿ ಸಾಧಾರಣ ಮಳೆಯಾಗಿರುವುದು ಹೊರತುಪಡಿಸಿದರೆ ಭಾನುವಾರ ಬಿಸಿಲಿನ ವಾತಾವರಣ ಇತ್ತು. ಕಾರ್ಕಳ ತಾಲೂಕಿನ ದುರ್ಗಾ ಗ್ರಾಮ ನಿವಾಸಿ ಪ್ರೇಮಲತಾ ಅವರ ದನದ ಹಟ್ಟಿಯ ಮೇಲೆ ಶನಿವಾರ ರಾತ್ರಿ ಬಿದಿರಿನ ಮೆಳೆ ಉರುಳಿ ಬಿದ್ದು 10 ಸಾವಿರ ನಷ್ಟವಾಗಿದ್ದು ಬಿಟ್ಟರೆ ಜಿಲ್ಲೆಯಲ್ಲಿ ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಭಾನುವಾರ ಮುಂಜಾನೆವರೆಗೆ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 21.40 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 10 ಮಿ.ಮೀ, ಕಾರ್ಕಳ ತಾಲೂಕಿನಲ್ಲಿ 31.40 ಮಿ.ಮೀ ಮತ್ತು ಕುಂದಾಪುರ ತಾಲೂಕಿನಲ್ಲಿ 22.80 ಮಿ.ಮೀ ಮಳೆ ದಾಖಲಾಗಿದೆ.

ಮಳೆ-ಬಿಸಿಲು ಕಣ್ಣಾಮುಚ್ಚಾಲೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಹಗಲು ಮಳೆ ಬಿರುಸು ಕಡಿಮೆಯಾಗಿದ್ದು, ಜಿಲ್ಲಾದ್ಯಂತ ಮಳೆ-ಬಿಸಿಲು ಚೆಲ್ಲಾಟ ನಡೆದಿತ್ತು. ಭಾನುವಾರ ಬೆಳಗ್ಗಿನ ವರೆಗೆ ಬೆಳ್ತಂಗಡಿಯಲ್ಲಿ 68.6 ಮಿ.ಮೀ. ಗರಿಷ್ಠ ಮಳೆ ಸುರಿದಿದೆ.
ಮಳೆ ವಿವರ: ಸುಳ್ಯ- 54.4 ಮಿ.ಮೀ., ಪುತ್ತೂರು- 47.48 ಮಿ.ಮೀ., ಬಂಟ್ವಾಳ- 45.77 ಮಿ.ಮೀ., ಮೂಡುಬಿದಿರೆ- 45.2 ಮಿ.ಮೀ., ಬಜ್ಪೆ- 45.4 ಮಿ.ಮೀ., ಕಡಬ- 38.0 ಮಿ.ಮೀ., ಮಂಗಳೂರು- 35.5 ಮಿ.ಮೀ. ಮಳೆ ದಾಖಲಾಗಿದೆ.
ವ್ಯಕ್ತಿ ನೀರುಪಾಲು: ಮೂಡುಬಿದಿರೆ ಪುತ್ತಿಗೆ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ತೋಡು ದಾಟುತ್ತಿದ್ದ ವೇಳೆ ಜಾರಿ ಬಿದ್ದು ನೆರೆ ನೀರಿನಲ್ಲಿ ಕೊಚ್ಚಿ ಹೋಗಿ ಪ್ರಕಾಶ್ (23) ಎಂಬವರು ಮೃತಪಟ್ಟಿದ್ದಾರೆ. ತೋಟದ ಪಂಪು ರಿಪೇರಿಗಾಗಿ ಎಲೆಕ್ಟ್ರಿಶನ್‌ನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಕಾಲು ಜಾರಿ ತೋಡಿಗೆ ಬಿದ್ದಿದ್ದಾರೆ. ತೋಡು ಆಳವಾಗಿದ್ದು, ನೆರೆ ನೀರಿಗೆ ಕೊಚ್ಚಿ ಹೋಗಿದ್ದಾರೆ. ಸಂಜೆ ವೇಳೆ ಮೃತದೇಹ ಸಿಕ್ಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.