ಮತ್ತೆ ರೈತರ ಕೃಷಿ ಭೂಮಿಗೆ ಸಹಸ್ರಲಿಂಗೇಶ್ವರ ಕಂಪನಿ ಕನ್ನ!
ಪುತ್ತೂರು: ಈಗಾಗಲೇ ರೈತರಿಂದ ಎಕರೆಗಟ್ಟಲೆ ಭೂಮಿ ವಶಪಡಿಸಿಕೊಂಡು ಉಪ್ಪಿನಂಗಡಿಯ ನೆಕ್ಕಿಲಾಡಿ ಹಾಗೂ ಹಿರೆಬಂಡಾಡಿ ಪರಿಸರದ ಕುಮಾರಧಾರ ನದಿಯಲ್ಲಿ ನಿರ್ಮಾಣವಾಗುತ್ತಿರುವ ಸಹಸ್ರಲಿಂಗೇಶ್ವರ ಪವರ್ ಪ್ರಾಜೆಕ್ಟ್ಗೆ ರೈತರ ವಿರೋಧದ ನಡುವೆ ಇದೀಗ 2ನೇ ಹಂತದಲ್ಲಿ ಇನ್ನಷ್ಟು ರೈತರ ಜಮೀನು ವಶಪಡಿಸಿಕೊಳ್ಳಲು ಪ್ರಯತ್ನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಜಲ ವಿದ್ಯುತ್ ಯೋಜನೆಗಾಗಿ ಈಗಾಗಲೇ ಸುಮಾರು 46 ಎಕರೆ ಜಮೀನನ್ನು ರೈತರಿಂದ ಪಡೆದಿರುವ ನೆಕ್ಕಿಲಾಡಿ ಸಹಸ್ರಲಿಂಗೇಶ್ವರ ಪವರ್ ಪ್ರಾಜೆಕ್ಟ್ ಕಂಪನಿ ಇದೀಗ 8.5 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡು ತಮಗೆ ನೀಡುವಂತೆ ಸರ್ಕಾರವನ್ನು ವಿನಂತಿಸಿದೆ. ಉದ್ದೇಶಿತ ಜಮೀನು ರೈತರ ಕೃಷಿ ಭೂಮಿಯಾಗಿದ್ದು, ಕಂಪನಿಯಿಂದ ಮತ್ತೆ ರೈತರ ಕೃಷಿ ಭೂಮಿ ಕಸಿದುಕೊಳ್ಳುವ ಪ್ರಯತ್ನ ಮುಂದುವರಿದಿದೆ. ಭೂಮಿ ಸ್ವಾಧೀನ ಪಡಿಸಿಕೊಡುವಂತೆ ಸರ್ಕಾರವನ್ನು ವಿನಂತಿಸಿರುವ ಕಂಪನಿಯ ಕಡತ ಇದೀಗ ಸಂಬಂಧಿಸಿದ ಇಲಾಖೆಯಲ್ಲಿದ್ದು, ಈ ಬಗ್ಗೆ ರೈತರಿಂದ ಒಪ್ಪಿಗೆ ಪತ್ರ ತರಿಸುವಂತೆ ಇಲಾಖೆ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಈ ಪ್ರದೇಶದ ಬಹುತೇಕ ರೈತರು ಹಾಗೂ ಸ್ಥಳೀಯ ರೈತ ಸಂಘದವರು ಭೂಸ್ವಾಧೀನ ವಿರೋಧಿಸುತ್ತಿದ್ದು, ಹೋರಾಟವನ್ನೂ ನಡೆಸಿದ್ದಾರೆ. ಆದರೆ, ಕೆಲವೊಂದು ರೈತರಿಂದ ಈಗಾಗಲೇ ಜಮೀನು ಪಡೆದಿರುವ ಕಂಪನಿಯು ಅಧಿಕಾರಿಗಳ ಮೂಲಕ ತಮ್ಮ ಪ್ರಯತ್ನವನ್ನು ಮುಂದುವರಿಸುತ್ತಿರುವುದಾಗಿ ಇಲ್ಲಿನ ರೈತರು ಆರೋಪಿಸುತ್ತಿದ್ದಾರೆ. ಸಹಸ್ರಲಿಂಗೇಶ್ವರ ಪವರ್ ಪ್ರಾಜೆಕ್ಟ್ 2011ರಿಂದ ಕಾರ್ಯ ಯೋಜನೆ ಆರಂಭಿಸಿದ್ದು, ಈಗಾಗಲೇ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳಿಗೆ ಸೇರಿದ ಭೂಮಿ ವಶಪಡಿಸಿಕೊಂಡಿದೆ ಎಂಬುದು ರೈತರ ಆರೋಪ.
ಸರ್ಕಾರದ ಮಟ್ಟದಲ್ಲಿ ಅನುಮತಿ ಲಾಬಿ: ಸಹಸ್ರಲಿಂಗೇಶ್ವರ ಪವರ್ ಪ್ರಾಜೆಕ್ಟ್ ಕಾರ್ಯಾಚರಣೆ ನಡೆಸುತ್ತಿರುವ ಉಪ್ಪಿನಂಗಡಿ, ನೆಕ್ಕಿಲಾಡಿ ಹಾಗೂ ಹಿರೆಬಂಡಾಡಿ ಗ್ರಾಮ ಪಂಚಾಯಿತಿಗಳು ಯೋಜನೆಯನ್ನು ವಿರೋಧಿಸಿ ನಿರ್ಣಯ ಕೈಗೊಂಡಿವೆ. ಯೋಜನೆಗೆ ಸ್ಥಳೀಯಾಡಳಿತಗಳು ಅನುಮತಿ ನೀಡದಿದ್ದರೂ ಸರ್ಕಾರದ ಮಟ್ಟದಲ್ಲಿ ಅನುಮತಿ ಪಡೆಯುವ ಪ್ರಯತ್ನ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಪಶ್ಚಿಮಘಟ್ಟ ಕಾರ್ಯಪಡೆ ವಿರೋಧ: ಪಶ್ಚಿಮಘಟ್ಟ ಕಾರ್ಯಪಡೆಯೂ ಜಿಲ್ಲೆಯ ಜೀವನದಿಗಳಾದ ಕುಮಾರಧಾರ ಮತ್ತು ನೇತ್ರಾವತಿ ನದಿಗಳಲ್ಲಿ ಜಲವಿದ್ಯುತ್ ಯೋಜನೆಗಳನ್ನು ಆರಂಭಿಸುವುದನ್ನು ಬಲವಾಗಿ ವಿರೋಧಿಸುತ್ತಿದೆ. ಆದರೆ, ಈ ನಡುವೆ ಜಲಾನಯನ ಇಲಾಖೆ ಈ ಕಂಪನಿಗೆ 52 ನಿರ್ಬಂಧಗಳನ್ನು ಹಾಕಿ ಅನುಮತಿ ನೀಡಿದೆ. ಉಳಿದಂತೆ ಇವರಿಗೆ ಬೇರೆ ಯಾವುದೇ ಇಲಾಖೆಗಳ ಅನುಮತಿ ಸಿಕ್ಕಿಲ್ಲ. ಪವರ್ ಪ್ರಾಜೆಕ್ಟ್ ವಿರುದ್ಧ ಹೈಕೋರ್ಟ್ನಲ್ಲಿ ಕೇಸ್ ದಾಖಲಾಗಿದ್ದು, ವಿಚಾರಣೆಯಲ್ಲಿದೆ ಎಂದು ಹಸಿರು ಸೇನೆ ಸಂಘಟನೆ ಕಾರ್ಯಕರ್ತರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

