ರಸ್ತೆ ವಿಸ್ತರಣೆ ವೇಳೆ 'ಉಳಿದ' ಮರಗಳು ಮಳೆಗೆ ಉರುಳಿದವು!
ಸುಳ್ಯ: ದಕ್ಷಿಣ ಕನ್ನಡ-ಕೊಡಗಿನ ಗಡಿ ತಾಲೂಕು ಸುಳ್ಯ ಮತ್ತು ಆಸುಪಾಸಿನಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಪಾರ ನಷ್ಟ ಸಂಭವಿಸಿದೆ. ಅದರಲ್ಲೂ ಈ ಬಾರಿ ಹೆಚ್ಚಾಗಿ ಮರಗಳು ರಸ್ತೆಗೆ ಉರುಳಿ ಸಂಚಾರ ವ್ಯತ್ಯಯ ಉಂಟುಮಾಡಿದ್ದಲ್ಲದೆ ಜನಜೀವನವನ್ನೂ ಅಸ್ತವ್ಯಸ್ತಗೊಳಿಸಿದೆ.
ಹೀಗೆ ಉರುಳಿ ಬಿದ್ದ ಮರಗಳ ಪೈಕಿ ಅನೇಕ ಮರಗಳು ರಸ್ತೆ ವಿಸ್ತರಣೆ ಸಂದರ್ಭ ಅಡ್ಡಿಯಾದ ಮರಗಳು ಎನ್ನುವುದು ವಿಶೇಷ. ಲೋಕೋಪಯೋಗಿ ಮತ್ತು ಅರಣ್ಯ ಇಲಾಖೆ ಸಮನ್ವಯ ಕೊರತೆಯಿಂದ ರಸ್ತೆ ಸಂಚಾರಿಗಳು ಪರದಾಡುವಂತಾಗಿದೆ.
ಮರಗಳಿಂದ ಕಾಮಗಾರಿ ಬಾಕಿ: ಜಾಲ್ಸೂರು- ಸುಬ್ರಹ್ಮಣ್ಯ ರಸ್ತೆ ಅಭಿವೃದ್ಧಿ ಕಾಮಗಾರಿ ಈಗಾಗಲೇ ವಳಲಂಬೆ ವರೆಗೆ ಪೂರ್ಣಗೊಂಡಿದೆ. ಮಧ್ಯೆ ಮಧ್ಯೆ ಒಂದೆರಡು ಕಿ.ಮೀ. ಬಾಕಿ ಇರುವುದಕ್ಕೆ ರಸ್ತೆ ಬದಿ ಇರುವ ಮರಗಳೇ ಕಾರಣ ಎನ್ನಲಾಗುತ್ತಿದೆ. ವಳಲಂಬೆಯಿಂದ ಸುಬ್ರಹ್ಮಣ್ಯದವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಈಗಷ್ಟೇ ನಡೆಯುತ್ತಿದೆ.
ತೆರವು ಅನಿವಾರ್ಯವಾಗಿತ್ತು: ಈ ರಸ್ತೆ ಅಭಿವೃದ್ಧಿ ಸಂದರ್ಭ ರಸ್ತೆ ಬದಿ ಇರುವ ಮರಗಳ ತೆರವು ಅನಿವಾರ್ಯವಾಗಿತ್ತು. ನೂರಾರು ಮರಗಳಿಗೆ ಗುರುತು ಹಾಕಿ ಸೀಲ್ ಮಾಡಲಾಗಿತ್ತು. ಆದರೆ, ಮರಗಳ ತೆರವಿಗೆ ಅರಣ್ಯ ಇಲಾಖೆ ಸ್ಪಂದಿಸಿರಲಿಲ್ಲ.
ಹೀಗಾಗಿ ರಸ್ತೆ ಅಗಲೀಕರಣ ಮಾಡುವವರು ಬಹಳಷ್ಟು ಕಡೆ ಮರಗಳ ಬುಡದವರೆಗೆ ಮಣ್ಣು ಸವರಿ ತಮ್ಮ ಕೆಲಸ ಪೂರ್ಣಗೊಳಿಸಿದ್ದರು.
ಪರಿಣಾಮ ಈ ಬಾರಿ ಮಳೆಗೆ ಮಣ್ಣು ಸವೆದು ಮರಗಳು ಕಾಂಡ ಸಮೇತ ರಸ್ತೆಗಡ್ಡವಾಗಿ ಉರುಳುತ್ತಿವೆ. ಈಗಾಗಲೇ ಹಲವೆಡೆ ಇಂತಹ ಘಟನೆಗಳು ನಡೆಯುತ್ತಿವೆ. ಇದರಿಂದಾಗಿ ಗಂಟೆಗಟ್ಟಲೆ ವಾಹನ ಸಂಚಾರಕ್ಕೆ ಅಡ್ಡಿಯಾಗಿ ಜನ ಸಂಕಷ್ಟಪಡಬೇಕಾಗಿದೆ.
ಮಣ್ಣು ಜರಿತ: ಮತ್ತೊಂದೆಡೆ, ರಸ್ತೆ ಕಾಮಗಾರಿ ಸಂದರ್ಭ ರಸ್ತೆ ಬದಿ ಹಾಕಲಾದ ಮಣ್ಣು ಕುಸಿಯುತ್ತಿರುವ ಕಾರಣ ಹಲವಡೆ ರಸ್ತೆ ಬದಿಯೂ ಅಪಾಯ ಆಹ್ವಾನಿಸುತ್ತಿದೆ. ಸಮರ್ಪಕ ಚರಂಡಿ ಇಲ್ಲದಿರುವುದು ಇದಕ್ಕೆ ಕಾರಣ. ದೊಡ್ಡತೋಟ, ಕಂದಡ್ಕ, ದುಗ್ಗಲಡ್ಕಗಳಲ್ಲಿ ಇಂತಹ ಪರಿಸ್ಥಿತಿ ಏರ್ಪಟ್ಟಿದೆ. ಇಲಾಖೆಗಳ ನಡುವಿನ ಸಮನ್ವಯದ ಕೊರತೆ, ಅರಣ್ಯ ಇಲಾಖೆಯ ಹಠಮಾರಿ ಧೋರಣೆಗಳು ರಸ್ತೆ ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡುತ್ತದೆ.
ಸುಳ್ಯದಲ್ಲಿ ಮಳೆ ಸುರಿಯುತ್ತಿದೆ... ಮಣ್ಣು ಸವೆಯತ್ತಿದೆ... ರಸ್ತೆಗೆ ಅಡ್ಡಿಯಾದ ಮರಗಳು ಉರುಳುತ್ತಲೇ ಇವೆ...!
-ದುರ್ಗಾಕುಮಾರ್ ನಾಯರ್ಕೆರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

