ಮಂಗಳೂರು: ಅಲ್ಲಲ್ಲಿ ಕೃತಕ ನೆರೆ
ಮಂಗಳೂರು: ಕಳೆದೆರಡು ದಿನದಿಂದ ಕಡಿಮೆಗೊಂಡಿದ್ದ ಮಳೆ, ದಕ್ಷಿಣ ಕನ್ನಡದಲ್ಲಿ ಸೋಮವಾರ ಧಾರಾಕಾರವಾಗಿ ಸುರಿದಿದೆ. ಬೆಳಗ್ಗಿನಿಂದಲೇ ಎಡೆಬಿಡದೇ ಸುರಿದ ಮಳೆಯಿಂದ ತಗ್ಗು ಪ್ರದೇಶದಲ್ಲಿ ಕೃತಕ ನೆರೆ ಸೃಷ್ಟಿಯಾಗಿತ್ತು.
ಮುಂದಿನ ದಿನಗಳಲ್ಲಿ ಕರಾವಳಿ ಪ್ರದೇಶದಲ್ಲಿ ಮಳೆ ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಂಗಳೂರು ಹಂಪನಕಟ್ಟೆ ಜಯಂತಿ ಟೆಕ್ಸ್ಟೈಲ್ ಮುಂಭಾಗ ನೀರು ನಿಂತಿದ್ದು, ಸಾರ್ವಜನಿಕರು ನಡೆದಾಡಲು ಪರದಾಡಿದರು. ಕೆ.ಎಸ್. ರಾವ್ ರಸ್ತೆಗೆ ಹಂಪನಕಟ್ಟೆ ತೆರದ ಚರಂಡಿಯಿಂದ ನೀರು ಬಂದ ಪರಿಣಾಮ ಸಿಟಿ ಸೆಂಟರ್ ಮುಂಭಾಗದ ರಸ್ತೆಯಲ್ಲಿ ಕೃತಕ ನೀರು ಹರಿದಿದೆ. ವಾಹನಗಳು, ಸಾರ್ವಜನಿಕರು, ರಸ್ತೆಯಲ್ಲಿ ನಡೆದಾಡಲು ಪರದಾಡುವಂತಾಯಿತು. ರಸ್ತೆ ನೀರು ರಾಮ್ದೇವ್ ಬೇಕರಿ ಒಳಗೆ ನುಗ್ಗಿದೆ.
ಕೋಡಿಕಲ್, ಕೋಡಿಯಾಲ್ಗುತ್ತು ಬಳಿಯ ಚರಂಡಿಯಲ್ಲಿ ನೀರು ಹೋಗಲು ಸ್ಥಳವಿಲ್ಲದೆ ರಸ್ತೆ ತುಂಬಾ ಹರಡಿದೆ. ಭಾನುವಾರ ಸಂಜೆ ಕೊಟ್ಟಾರ ಚೌಕಿಯಿಂದ ಕೋಡಿಕಲ್ಗೆ ತೆರಳುವ ರಸ್ತೆ ಬದಿಯ ಟ್ರಾನ್ಸ್ಫಾರಂ, ವಿದ್ಯುತ್ ಕಂಬ ಸಂಪೂರ್ಣ ನೆಲಕ್ಕುರುಳಿದೆ. ಪರಿಣಾಮ ಸೋಮವಾರ ಕೋಡಿಕಲ್ ಕಡೆ ಯಾವುದೇ ವಾಹನ ತೆರಳಲಿಲ್ಲ. ಮೆಸ್ಕಾಂ ಸ್ಥಳಕ್ಕೆ ತೆರಳಲಿದ್ದು, ಕಾಮಗಾರಿ ಪ್ರಾರಂಭಿಸಿದೆ.
ಸೋಮವಾರ ಮುಂಜಾನೆ ವೇಳೆ ಮುನ್ನೂರು, ಉಳ್ಳಾಲ ಉಳಿಯ ಬಳಿಯ ಮನೆ ಗಾಳಿ ಮಳೆಗೆ ಗೋಡೆ ಕುಸಿದು ಹಾನಿ ಸಂಭವಿಸಿದೆ. ಅತ್ತಾವರ ಬಾಬುಗುಡ್ಡೆ ಬಳಿ ಮನೆಗೆ ತೆಂಗಿನ ಮರ ಬಿದ್ದು ಹಾನಿಯುಂಟಾಗಿದೆ. ಮೇಲಂತಬೆಟ್ಟು ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡಕ್ಕೆ ಮರ ಬಿದ್ದು ರು. 20 ಸಾವಿರ ಹಾನಿ ಸಂಭವಿಸಿದೆ.
ಕೊಂಚಾಡಿ ಲ್ಯಾಂಡ್ಲಿಂಕ್ಸ್ನಲ್ಲಿ ರಸ್ತೆ ಬದಿಯ 150 ವರ್ಷ ಹಳೆಯ ಮಾವಿನ ಮರವೊಂದು ರಸ್ತೆಗೆ ಬಿದ್ದಿದ್ದು, ಅಗ್ನಿಶಾಮಕ ದಳ ಸ್ಥಳಕ್ಕೆ ತೆರಳಿ ತೆರವುಗೊಳಿಸಿದೆ. ಸೋಮವಾರ ಬೆಳಗ್ಗಿನವರೆಗೆ ಜಿಲ್ಲೆಯ ಬೆಳ್ತಂಗಡಿಯಲ್ಲಿ 91.4 ಮಿ.ಮೀ., ಗರಿಷ್ಠ ಮಳೆ ಸುರಿದಿದೆ. ಬಂಟ್ವಾಳ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ 3.7 ಮೀ. ಹಾಗೂ ಕುಮಾರಧಾರ ನದಿ ನೀರಿನ ಮಟ್ಟ 18.0 ಮೀ. ಏರಿಕೆಯಾಗಿದೆ.
ಮಳೆ ವಿವರ: ಬಂಟ್ವಾಳ- 68.0 ಮಿ.ಮೀ., ಸುಳ್ಯ- 65.0 ಮಿ.ಮೀ., ಪುತ್ತೂರು- 58.2 ಮಿ.ಮೀ., ಕಡಬ- 66.0 ಮಿ.ಮೀ., ಮೂಡುಬಿದಿರೆ- 52.4 ಮಿ.ಮೀ., ಬಜ್ಪೆ- 52.0 ಮಿ.ಮೀ., ಮಂಗಳೂರು- 42.7 ಮಿ.ಮೀ. ಮಳೆ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

