ಚರ್ಚ್ ದಾಳಿ ಆಯೋಗ ವರದಿ ಸಂಪುಟದಲ್ಲಿ ಚರ್ಚೆ
ಮಂಗಳೂರು: ಚರ್ಚ್ ದಾಳಿ ಕುರಿತ ನ್ಯಾ.ಸೋಮಶೇಖರ ಆಯೋಗ ತನಿಖಾ ವರದಿ ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ವರದಿಯನ್ನು ಶೀಘ್ರದಲ್ಲಿ ಸಚಿವ ಸಂಪುಟದಲ್ಲಿ ಚರ್ಚಿಸಿ ಉಪಸಮಿತಿಗೆ ವಹಿಸಲಾಗುವುದು ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಮಧ್ಯಂತರ ಮತ್ತು ಅಂತಿಮ ವರದಿಯನ್ನು ಹಿಂದಿನ ಸರ್ಕಾರ ಅಸೆಂಬ್ಲಿಯಲ್ಲಿ ಇಟ್ಟಿಲ್ಲ. ತೀರ್ಮಾನವನ್ನು ತೆಗೆದುಕೊಂಡಿರಲಿಲ್ಲ ಎಂದು ಬುಧವಾರ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪೊಲೀಸ್ ಕಾಯ್ದೆ ರಾಜ್ಯಕ್ಕೆ ಸಂಬಂಧಿಸಿದ ವಿಚಾರ ಎಂದು ಸುಪ್ರೀಂಕೋರ್ಟ್ ಹೇಳಿದೆ. ಜನರಿಂದ ಆಯ್ಕೆಯಾದ ಸರ್ಕಾರ ಜನರಿಗೆ, ಅಸೆಂಬ್ಲಿಗೆ, ಮಾಧ್ಯಮಕ್ಕೆ ಉತ್ತರ ನೀಡಬೇಕಾಗಿದೆ. ಹೀಗಾಗಿ ಸರ್ಕಾರಕ್ಕೆ, ಗೃಹಸಚಿವರಿಗೆ ಇಲಾಖೆ ಮೇಲೆ ಹಿಡಿತ ಬೇಕಾಗುತ್ತದೆ. ಪೊಲೀಸ್ ವರ್ಗಾವಣೆ ಮತ್ತು ವಿಚಾರಣೆಯಲ್ಲಿ ಒತ್ತಡ ಹೇರುವುದಿಲ್ಲ ಎಂದರು.
ಪೊಲೀಸರೇ ಖುದ್ದು ಸ್ಥಳಕ್ಕೆ ತೆರಳಿ ಪಾಸ್ಪೋರ್ಟ್ ವೆರಿಫಿಕೇಶನ್ ಮಾಡಬೇಕು. ಲಂಚಕ್ಕೆ ಕೈಒಡ್ಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸಬೇಕು. ಕಾಲೇಜುಗಳಲ್ಲಿ ಮಾದಕ ದ್ರವ್ಯ ಹೆಚ್ಚುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ವಾರ ಅಥವಾ ಹತ್ತು ದಿನ ಬಿಟ್ಟು ಸಭೆ ಮಾಡುತ್ತೇವೆ, ಕ್ರಮ ಕೈಗೊಳ್ಳದೆ ಹೋದರೆ ಅಂಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
'ಪೊಲೀಸರಿಗೆ ಗಸ್ತು ತಿರುಗಲು ಸೈಕಲ್ ನೀಡಬೇಕು ಎಂದು ಗೃಹಸಚಿವರು ಹೇಳಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಆದರೆ ನಾನು ಹಾಗೆ ಹೇಳಿಯೇ ಇಲ್ಲ. ಪೊಲೀಸ್ ವಸತಿಗೃಹಗಳ ದುರಸ್ತಿ ಸಹಿತ 5 ಸಾವಿರ ಸಿಬ್ಬಂದಿಗೆ ವಸತಿ ವ್ಯವಸ್ಥೆ, ಪೊಲೀಸ್ ಇಲಾಖೆ ಸುಧಾರಣೆಗೆ ಬದ್ಧರಾಗಿದ್ದೇವೆ'.
ರಾಜ್ಯದಲ್ಲಿ 19 ಸಾವಿರ ಪೊಲೀಸ್ ಹುದ್ದೆ ಬಾಕಿ ಇದೆ. ಮಹಿಳೆಯರಿಗೆ ಆದ್ಯತೆಯಲ್ಲಿ 8 ಸಾವಿರ ಹುದ್ದೆ ಭರ್ತಿ ಮಾಡಲು ಕ್ರಮಕೈಗೊಳ್ಳಲಾಗಿದೆ. ಎಲ್ಲೆಡೆ ಎಸ್ಪಿ ಮತ್ತು ಕಮಿಷನರ್ ಕಚೇರಿಗಳಲ್ಲಿ ಲೈಂಗಿಕ ಕಿರುಕುಳ ನಿವಾರಣೆ ಸಮಿತಿ ರಚಿಸಬೇಕು. ಪ್ರತಿ ಪೊಲೀಸ್ ಠಾಣೆಯಲ್ಲಿ ನಾಗರಿಕ ಸಮಿತಿ ರಚಿಸಬೇಕು, ನಿಯಮಿತವಾಗಿ ಸಭೆ ನಡೆಸಬೇಕು ಎಂದು ಸಚಿವರು ತಿಳಿಸಿದರು.
ಆರೋಗ್ಯ ಭಾಗ್ಯ ಸಂಪೂರ್ಣ ಉಚಿತ: ಪೊಲೀಸರು ಆರೋಗ್ಯ ಭಾಗ್ಯ ಯೋಜನೆಯಲ್ಲಿ ಅನಾರೋಗ್ಯ ಪೀಡಿತರಾದರೆ ಆಸ್ಪತ್ರೆಯಲ್ಲಿ ಸ್ಕ್ಯಾನ್ ಸಹಿತ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಹಣ ಪಾವತಿಸುವ ಅಗತ್ಯ ಇಲ್ಲ. ಹಣ ಪಡೆದರೆ ಅಂಥ ಆಸ್ಪತ್ರೆ ವಿರುದ್ಧ ಕ್ರಮಕೈಗೊಳ್ಳಲಾಗುವುದು ಸಚಿವ ಜಾರ್ಜ್ ಹೇಳಿದರು.
ಆಸ್ಪತ್ರೆಯಲ್ಲಿ ಹೆಚ್ಚುವರಿ ಹಣ ಪಡೆಯುತ್ತಿರುವ ಬಗ್ಗೆ ಎರಡು ದೂರು ಬಂದಿದೆ. ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದು ಪಶ್ಚಿಮವಲಯ ಐಜಿಪಿ ಪ್ರತಾಪ್ ರೆಡ್ಡಿ ಹೇಳಿದರು.
ರಾಜ್ಯದ ಸಮಸ್ತ ಜನತೆಗೆ ಗೃಹ ಸಚಿವ
ಮಂಗಳೂರು: ತಾನು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರವಲ್ಲ ಕರ್ನಾಟಕದ ಸಮಸ್ತ ಜನತೆಗೆ ಗೃಹ ಸಚಿವ ಎಂದು ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಮಂಗಳೂರಿನ ಬಿಷಪ್ ಹೌಸ್ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜಾರ್ಜ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ರೀತಿ ಹೇಳಿಕೆ ನೀಡಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ನಾನು ಅವರನ್ನು ಚೆನ್ನಾಗಿ ಬಲ್ಲೆ, ಆದರೆ ಏಕೆ ಈ ರೀತಿ ಹೇಳಿಕೆ ನೀಡಿದರೊ ಗೊತ್ತಿಲ್ಲ. ಆದರೆ ನಾನು ಅವರ ಹೇಳಿಕೆ ಸುಳ್ಳು ಎಂದು ಸಾಬೀತು ಪಡಿಸುತ್ತೇನೆ ಎಂದರು. ಚರ್ಚ್ ದಾಳಿ ಕುರಿತು ಪ್ರತಿಕ್ರಿಯಿಸಿದ ಸಚಿವರು, ತಾನು ಅಲ್ಪಸಂಖ್ಯಾತರಿಗಾದ ನೋವು ಅರ್ಥಮಾಡಿಕೊಂಡಿದ್ದೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

