ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಭೆ: ಖಾದರ್ ಸೂಚನೆ
ಮಂಗಳೂರು: ಜಿಲ್ಲೆಯಲ್ಲಿರುವ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಜಾಗೃತಿ ಸಭೆ ನಡೆಸಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ.
ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡೆಂಘೀ, ಮಲೇರಿಯಾ ಮುಂತಾದ ರೋಗವಾಹಕ ಆಶ್ರಿತ ರೋಗಗಳ ತಡೆಗಟ್ಟುವಿಕೆ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಡೆಂಘೀ ಜ್ವರವನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುವಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಪ್ರಯತ್ನ ತೃಪ್ತಿ ತಂದಿಲ್ಲ ಎಂದ ಅವರು, ಸಾಕಷ್ಟು ಮುಂಜಾಗ್ರತಾ ಕ್ರಮ ಅನುಸರಿಸಿದರೂ ಜ್ವರ ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.
ಈ ಹಿನ್ನಲೆಯಲ್ಲಿ ಎರಡು ಬಾರಿ ಆರೋಗ್ಯಾಧಿಕಾರಿಗೆ ಎಚ್ಚರಿಕೆ ನೀಡಿದ್ದೂ, ಇದು ಕೊನೆ ಎಚ್ಚರಿಕೆ, ಆರೋಗ್ಯ ಪರಿಪಾಲಿಸುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮತ್ತೊಮ್ಮೆ ಎಚ್ಚರಿಕೆ ನೀಡಿದರು.
ಲೆಕ್ಕ ಮುಖ್ಯವಲ್ಲ ಕೆಲ್ಸ ಮಾಡಿ: ಕಚೇರಿಯಲ್ಲಿ ಕುಳಿತು ಎಷ್ಟು ಶೇಕಡಾ ರೋಗ ನಿಯಂತ್ರಣ ಎಂದು ಲೆಕ್ಕ ಹಾಕುವ ಬದಲು ನೇರವಾಗಿ ಆರೋಗ್ಯ ಕೇಂದ್ರಗಳಿಗೆ, ರೋಗಪೀಡಿತ ಸ್ಥಳಕ್ಕೆ ತೆರಳಬೇಕು. ಜನರ ಭಾವನೆಗಳನ್ನು ಅರ್ಥೈಸಿ ಕೆಲಸ ಮಾಡಬೇಕು. ಆರೋಗ್ಯ ಜಾಗೃತಿ ಸಭೆ ನಡೆಸುವಾಗ ಜನಪ್ರತಿನಿಧಿಗಳನ್ನು, ಸಂಘಸಂಸ್ಥೆಗಳನ್ನು ಕರೆಯಬೇಕು. ಪ್ರತಿ ಮನೆಗೆ ಭೇಟಿ ನೀಡಿ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಬೇಕು. ಮನೆಗೆ ಹೋಗುವಾಗ ಅಲ್ಲಿನವರ ಸಹಿ ಪಡೆಯಬೇಕು. ಎಲ್ಲ ಕಡೆಗಳಲ್ಲಿ ಕಟ್ಟಡ ನಿರ್ಮಾಣದ ಮ್ಯಾಪ್ ಸಿದ್ಧವಿರಬೇಕು. ಪ್ರತಿ ನಿರ್ಮಾಣದಲ್ಲಿ ಇಬ್ಬರು ಕಾರ್ಮಿಕರನ್ನು ಆಯ್ಕೆ ಮಾಡಿ ಅವರಿಗೆ ಕಾರ್ಯಾಗಾರ ನಡೆಸಬೇಕು. ಅಗತ್ಯವಿರುವಲ್ಲಿ ಆರೋಗ್ಯ ಕಾರ್ಯಕರ್ತರೇ ಬ್ಲೀಚಿಂಗ್ ಪೌಡರ್ ಹಾಕಬೇಕು ಎಂದರು.
ಜಿ.ಪಂ.ಆರೋಗ್ಯ ನಿಧಿ: ಪ್ರತಿ ಜಿಲ್ಲೆಗೆ ಜಿಲ್ಲಾ ಪಂಚಾಯ್ತಿ ನಿಧಿ ಎಂದು ಮೊತ್ತ ಬಿಡುಗಡೆಯಾಗುತ್ತದೆ. ಇದನ್ನು ಆರೋಗ್ಯ ಸಂಬಂಧಿ ವಿಚಾರಗಳಿಗೆ ಖರ್ಚು ಮಾಡಬಹುದು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅವಶ್ಯಕ ಮೂಲಸೌಕರ್ಯಕ್ಕೆ ಬಳಸಿಕೊಳ್ಳಬಹುದು. ಈ ವರ್ಷ ರು. 49.7 ಕೋಟಿ ಬಿಡುಗಡೆಯಾಗಿದ್ದು, ದ.ಕ.ಜಿಲ್ಲೆಗೆ ರು. 3 ಕೋಟಿ ಬಿಡುಗಡೆಯಾಗಿದೆ. ಈ ಮೊತ್ತವನ್ನು ಡಿಸೆಂಬರ್ ವರೆಗೆ ಖರ್ಚು ಮಾಡುವುದಿಲ್ಲ, ಜನವರಿಯಲ್ಲಿ ಎರಡು ತಿಂಗಳಲ್ಲಿ ಖರ್ಚಿನ ಲೆಕ್ಕ ತೋರಿಸುತ್ತಾರೆ. ಇದು ಸರಿಯಲ್ಲ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್‌ಗೋಪಾಲ್ ಹೇಳಿದರು.
ಮಂಗಳೂರಲ್ಲಿ ಮಲೇರಿಯಾ ಜಾಸ್ತಿ: ಕೇಂದ್ರ ಸರ್ಕಾರದ ಪ್ರಾಂತೀಯ ನಿರ್ದೇಶಕ ಡಾ.ರವಿ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಮೂರನೇ ಒಂದಂಶ ಮಲೇರಿಯಾ ಮಂಗಳೂರಿನಲ್ಲಿ ಪತ್ತೆಯಾಗುತ್ತದೆ. ಕಳೆದ ಬಾರಿಗಿಂತ ಈ ಬಾರಿ ಮಲೇರಿಯಾ ಪ್ರಕರಣ ಶೇ.50 ಕಡಿಮೆಯಾಗಿದೆ. ಆದರೆ ಕಟ್ಟಡ ನಿರ್ಮಾಣ ಜಾಗಗಳಲ್ಲಿ ಸರಿಯಾದ ತಪಾಸಣೆ ನಡೆಸಬೇಕು, ನಿಯಮ ಪಾಲಿಸದಿದ್ದರೆ ನೋಟಿಸ್ ನೀಡಬೇಕು, ಮನೆಗಳಿಗೆ ಭೇಟಿ ನೀಡಿ ತಿಳುವಳಿಕೆ ಮೂಡಿಸಬೇಕು ಎಂದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 3 ಲಕ್ಷ ಮನೆಗಳಿಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿದ್ದು, 27,447 ಸೊಳ್ಳೆ ಉತ್ಪತ್ತಿ ತಾಣ ಗುರುತಿಸಲಾಗಿದೆ. ಪಾಲಿಕೆಯ ಸಂಚಾರಿ ವಾಹನ 15 ದಿನಕ್ಕೊಮ್ಮೆ ಎಲ್ಲ ವಾರ್ಡ್‌ಗಳಿಗೆ ಭೇಟಿ ನೀಡುತ್ತದೆ. ನಗರದ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳ ನೆರವಿನಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಮಾಹಿತಿ ನೀಡಿದರು.
ಆಯುಷ್ ಕಮೀಷನರ್ ವಿಜಯ ಕುಮಾರ್, ಎನ್‌ಆರ್‌ಎಚ್‌ಎಂಸಿ ವ್ಯವಸ್ಥಾಪಕ ನಿರ್ದೇಶಕ ಸುರೇಶ್, ಜಿಲ್ಲಾಧಿಕಾರಿ ಪ್ರಕಾಶ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಪ್ರಕಾಶ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊರಗಪ್ಪ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

