ಸ್ಕಾಲರ್ಶಿಪ್ಗೆ ಆಧಾರ್ ಕಾರ್ಡ್: ವಿನಾಯಿತಿಗೆ ತಾ.ಪಂ. ಆಗ್ರಹ
ಮಂಗಳೂರು: ಕೇಂದ್ರ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಮಿಕ ಮಕ್ಕಳಿಗೆ ಸ್ಕಾಲರ್ಶಿಪ್ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವ ವಿಚಾರ ಮಂಗಳೂರು ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೀಡಾಯಿತು.
ತಾ.ಪಂ.ಅಧ್ಯಕ್ಷ ಹರೀಶ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷ ಸದಸ್ಯರು ಪ್ರಸ್ತಾಪಿಸಿದರು.
ವಿಪಕ್ಷ ಸದಸ್ಯ ಪ್ರಕಾಶ್ ಪ್ರಸ್ತಾಪಿಸಿ, ಕಾರ್ಮಿಕ ಮಕ್ಕಳನ್ನು ಶಾಲಾ ವೇಳೆಯಲ್ಲಿ ಆಧಾರ್ ಕಾರ್ಡ್ಗೆ ಕರೆದೊಯ್ಯಲಾಗುತ್ತಿದೆ. ಆಧಾರ್ ಕಾರ್ಡ್ ಕಡ್ಡಾಯ ಎಷ್ಟು ಸರಿ? ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕಾರ್ಮಿಕ ಇಲಾಖಾ ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಎರಡೂ ಇಲಾಖಾ ಅಧಿಕಾರಿಗಳು, ಈ ವಿಚಾರ ತಮಗೆ ಸಂಬಂಧಿಸಿದ್ದಲ್ಲ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಸತೀಶ್ ಕುಂಪಲ ಮಾತನಾಡಿ, ಆಧಾರ್ ಕಾರ್ಡ್ನ್ನು ವರ್ಷದ ಮಟ್ಟಿಗೆ ಕಡ್ಡಾಯಗೊಳಿಸಬಾರದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಸುದರ್ಶನ್, ಆಧಾರ್ ಕಾರ್ಡ್ ಕೇಂದ್ರಗಳನ್ನು ಜಾಸ್ತಿ ಮಾಡಬೇಕು. ವರ್ಷದ ಮಟ್ಟಿಗೆ ವಿನಾಯ್ತಿ ಕೊಡಲು ಸಾಧ್ಯವಾಗದು. ಯಾಕೆಂದರೆ, ವಿದ್ಯಾರ್ಥಿಗಳ ಸ್ಕಾಲರ್ಶಿಪ್ಗೆ ಆಧಾರ್ ಕಾರ್ಡ್ನ್ನು ಕೇಂದ್ರ ಕಡ್ಡಾಯ ಮಾಡಿರುವುದರಿಂದ ಕಾರ್ಡ್ ಮಾಡುವುದೇ ಲೇಸು. ಇಲ್ಲದಿದ್ದರೆ ಸ್ಕಾಲರ್ಶಿಪ್ನಿಂದ ವಂಚಿತಗೊಳ್ಳಬೇಕಾಗಬಹುದು ಎಂದರು. ಈ ವರ್ಷ ಕಾರ್ಡ್ ಪಡೆಯಲು ರಿಯಾಯ್ತಿ ಬಗ್ಗೆ ಕೇಂದ್ರವನ್ನು ಕೋರಲು ರಾಜ್ಯ ಸರ್ಕಾರಕ್ಕೆ ಬರೆಯಲು ನಿರ್ಣಯಿಸುವುದಾಗಿ ಅಧ್ಯಕ್ಷ ಹರೀಶ್ ಹೇಳಿದರು.
ಆರ್ಟಿಇ ಸೀಟು: ಕಡ್ಡಾಯ ಶಿಕ್ಷಣ ಕಾಯ್ದೆಯಡಿ(ಆರ್ಟಿಇ)ಮಂಗಳೂರು ದಕ್ಷಿಣ ವಲಯದ 27 ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 284 ಸೀಟುಗಳು, ಉತ್ತರ ವಲಯದ 34 ಆಂಗ್ಲ ಮಾಧ್ಯಮಗಳಲ್ಲಿ 460 ಸೀಟುಗಳು ಹಾಗೂ ಮೂಡುಬಿದಿರೆ ವಲಯದ 13 ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 140 ಸೀಟುಗಳಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಆದರೆ ಆರ್ಟಿಇ ಕಾಯ್ದೆ ಪ್ರಕಾರ ಸೀಟು ಸರಿಯಾಗಿ ನೀಡುತ್ತಿಲ್ಲ ಎಂದು ಖಾಸಗಿ ಶಾಲೆಗಳ ವಿರುದ್ಧ ವಿಪಕ್ಷ ಸದಸ್ಯ ಪ್ರಕಾಶ್ ಆಕ್ಷೇಪವೆತ್ತಿದರು.
ಆರ್ಟಿಇ ಪ್ರಕಾರ ಸೀಟು ಕೊಡದ ಶಾಲೆಗಳೆಷ್ಟು, ಎಷ್ಟು ದೂರುಗಳು ಬಂದಿದೆ? ಯಾವ್ಯಾವ ಶಾಲೆಗಳಿಗೆ ಭೇಟಿ ನೀಡಿದ್ದೀರಿ ಎಂದು ವಿವರ ಬಯಸಿದರು. ಆರ್ಟಿಇ ಪ್ರಕಾರವೇ ಖಾಸಗಿ ಶಾಲೆಗಳಲ್ಲಿ ದಾಖಲಾತಿ ನಡೆದಿದೆ ಎಂದು ಶಿಕ್ಷಣ ಅಧಿಕಾರಿಗಳು ಸಮಜಾಯಿಸಿ ನೀಡಿದ್ದು ಅವರಿಗೆ ತೃಪ್ತಿ ತರಲಿಲ್ಲ. ಈ ಬಗ್ಗೆ ಸರಿಯಾಗಿ ಪರಿಶೀಲಿಸುವಂತೆ ಅಧ್ಯಕ್ಷ ಹರೀಶ್ ಸೂಚನೆ ನೀಡಿದರು.
6 ಮತ್ತು 7ನೇ ತರಗತಿಗೆ ಆಂಗ್ಲ ಪಠ್ಯ ಪುಸ್ತಕ ಮೂಡುಬಿದಿರೆಗೆ ಮಾತ್ರ ಪೂರೈಕೆಯಾಗಿದ್ದು, ಬಾಕಿ ಇರುವ ಕಡೆಗಳಲ್ಲಿ ತಕ್ಷಣ ಪಠ್ಯ ಪುಸ್ತಕ ಒದಗಿಸುವಂತೆ ಅಧ್ಯಕ್ಷ ಹರೀಶ್ ಸೂಚಿಸಿದರು.
ಬಾಡಿಗೆ ಬಾಕಿ ವಿವಾದ: ತಾಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ 2 ವರ್ಷದಿಂದ ಅಂಗಡಿ ಕಟ್ಟಡಗಳ ಬಾಡಿಗೆ ಹೆಚ್ಚಿಸಿಲ್ಲ. ಮಾಸಿಕ ರು. 1.16 ಲಕ್ಷ ಬಾಡಿಗೆ ಬರಬೇಕಿದ್ದು, 6 ತಿಂಗಳಿಂದ ರು. 10.94 ಲಕ್ಷ ಬಾಡಿಗೆ ವಸೂಲಿಗೆ ಬಾಕಿ ಇದೆ ಎಂದು ಆಡಳಿತ ಸದಸ್ಯ ಪ್ರಕಾಶ್ ಗಮನ ಸೆಳೆದರು.
ಇದಕ್ಕೆ ಸ್ಪಷ್ಟೀಕರಣ ನೀಡಿದ ಅಧ್ಯಕ್ಷ ಹರೀಶ್, ಈಗಾಗಲೇ ಬಾಡಿಗೆ ಬಾಕಿ ಇರಿಸಿದವರಿಗೆ ನೋಟಿಸ್ ನೀಡಲಾಗಿದೆ. ಕ್ರಮಬದ್ಧವಾಗಿ ಬಾಡಿಗೆ ಪಾವತಿಸುವವರಿಗೆ ಅಂಗಡಿ ಮರು ಏಲಂ ಮಾಡಲಾಗುವುದು ಎಂದು ಹೇಳಿದರು.
ಉಪಾಧ್ಯಕ್ಷೆ ರಾಜೀವಿ ಕೆಂಪುಮಣ್ಣು, ಜಿಲ್ಲಾ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷ ರಿತೇಶ್ ಶೆಟ್ಟಿ, ತಹಸೀಲ್ದಾರ್ ಶಿವಪ್ಪ ಲಮಾಣಿ, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿದಾಸ್ ಹಾಜರಿದ್ದರು.
ಆಧಾರ್ ಕಾರ್ಡ್ ಕೇಂದ್ರಗಳನ್ನು ಜಾಸ್ತಿ ಮಾಡಬೇಕು. ವರ್ಷದ ಮಟ್ಟಿಗೆ ವಿನಾಯ್ತಿ ಕೊಡಲು ಸಾಧ್ಯವಾಗದು. ಯಾಕೆಂದರೆ, ವಿದ್ಯಾರ್ಥಿಗಳ ಸ್ಕಾಲರ್ಶಿಪ್ಗೆ ಆಧಾರ್ ಕಾರ್ಡ್ನ್ನು ಕೇಂದ್ರ ಕಡ್ಡಾಯ ಮಾಡಿರುವುದರಿಂದ ಕಾರ್ಡ್ ಮಾಡುವುದೇ ಲೇಸು. ಇಲ್ಲದಿದ್ದರೆ ಸ್ಕಾಲರ್ಶಿಪ್ನಿಂದ ವಂಚಿತಗೊಳ್ಳಬೇಕಾಗಬಹುದು ಎಂದರು. ಈ ವರ್ಷ ಕಾರ್ಡ್ ಪಡೆಯಲು ರಿಯಾಯ್ತಿ ಬಗ್ಗೆ ಕೇಂದ್ರವನ್ನು ಕೋರಲು ರಾಜ್ಯ ಸರ್ಕಾರಕ್ಕೆ ಬರೆಯಲು ನಿರ್ಣಯಿಸಲಾಗುವುದು.
ಹರೀಶ್, ಅಧ್ಯಕ್ಷ, ತಾಲೂಕು ಪಂಚಾಯಿತಿ, ಮಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

