ದಕ್ಷಿಣ ಕನ್ನಡ

ಕೈದಿಗಳಿಗೆ ಗಾಂಜಾ ಸಾಗಾಟ ಯತ್ನ: ಜಿಲ್ಲಾ ಪಂಚಾಯ್ತಿ ಸದಸ್ಯೆ ಪುತ್ರ ಸಹಿತ 4 ಸೆರೆ

Published On :

ಮಂಗಳೂರು: ಮಡಿಕೇರಿ ಜೈಲ್‌ನಲ್ಲಿರುವ ಬಿಜೈ ರಾಜ ಕೊಲೆ ಆರೋಪಿಗಳಿಗೆ ಗಾಂಜಾ ನೀಡಲು ತೆರಳುತ್ತಿದ್ದ ನಾಲ್ವರು ಆರೋಪಿಗಳನ್ನು ಡಿಸಿಐಬಿ ಪೊಲೀಸರು ಸುಳ್ಯದಲ್ಲಿ ಬಂಧಿಸಿದ್ದು, 1.1 ಕಿಲೋ ಗಾಂಜಾ ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪಂಚಾಯ್ತಿ ಸದಸ್ಯೆ ಯಶವಂತಿ ಆಳ್ವ ಎಂಬರ ಪುತ್ರ ಪೃಥ್ವಿ ಆಳ್ವ ಗಾಂಜಾ ಸಾಗಾಟ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದಾನೆ.
 ಗುರುನಗರ ಕೊಂಚಾಡಿ ನಿವಾಸಿ ಅರುಣ್ ಶೆಟ್ಟಿ (38), ಬೋಂದೆಲ್ ಕೆ.ಎಚ್.ಬಿ. ಕಾಲನಿ ಅವಿನಾಶ್ (22), ಸೋಮೇಶ್ವರ ಶಿವಭಾಗ್ ಪೃಥ್ವಿ ಆಳ್ವ (35), ಕೊಟ್ಟಾರಚೌಕಿ ನಿವಾಸಿ ನೆಲ್ಸನ್ ಡಿಸೋಜ (29) ಬಂಧಿತರು. ಆರೋಪಿಗಳನ್ನು ಪೊಲೀಸರು ಸುಳ್ಯ ಕಲ್ಲುಗುಂಡು ಬಳಿ ಬಂಧಿಸಿದರು.
ಬಿಜೈ ರಾಜ ಕೊಲೆ ಪ್ರಕರಣ ಆರೋಪಿ ಪ್ರದೀಪ್ ಮೆಂಡನ್ ಮತ್ತು ಆತನ ಸಹಚರರಿಗೆ ಗಾಂಜಾ ನೀಡಲು ಹೋಗುತ್ತಿರುವುದಾಗಿ ಡಿಸಿಐಬಿ ಪೊಲೀಸರು ಬಳಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಪುತ್ತೂರು ಪ್ರಭಾರ ಡಿವೈಎಸ್ಪಿ, ಡಿಸಿಐಬಿ ಇನ್‌ಸ್ಪೆಕ್ಟರ್ ವಿನಯ್ ನಾಯಕ್, ಸುಳ್ಯ ಇನ್‌ಸ್ಪೆಕ್ಟರ್  ಸುದರ್ಶನ್‌ಎಂ. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಸಿಐಬಿ ಎಸ್‌ಐ ಸಂಜೀವ ಪುರುಷ, ಚಂದ್ರ ಅದೂರು, ಉದಯ ರೈ ಮಂದಾರ, ಇಕ್ಬಾಲ್, ತಾರಾನಾಥ ಎಸ್. ಭಾಗವಹಿಸಿದ್ದರು. ಚಾಲಕ ವಾಸು ನಾಯ್ಕ, ಯಜ್ಞ ಗೌಡ ಸಹಕರಿಸಿದ್ದರು.
ಪೊಲೀಸ್ ದೌರ್ಜನ್ಯ: ನ್ಯಾಯಾಲಯದಲ್ಲಿ ದೂರು ದಾಖಲು
ಉಪ್ಪಿನಂಗಡಿ: ಕೋಡಿಂಬಾಳದಲ್ಲಿ 2012 ಸೆ.25ರಂದು ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನ್ನ ಮೇಲೆ ಕಡಬ ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಕೋಡಿಂಬಾಳ ನಿವಾಸಿ ಸಾಬ್ಯಂಟನಿ ಎಂಬವರು ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
ಈ ಸಂಬಂಧ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸ್ ಸಿಬ್ಬಂದಿಗಳಾದ ಸತೀಶ್, ನಿತೀಶ್, ಚೆನ್ನಪ್ಪ ಗೌಡ ಹಾಗೂ ಸಂದೀಪ್ ಎಂಬವರ ವಿರುದ್ಧ ಕಡಬ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ. ನ್ಯಾಯಲಯಕ್ಕೆ ಖಾಸಗಿ ದೂರು ನೀಡಿರುವ ಸಾಬ್ಯಂಟನಿ, ಕೋಡಿಂಬಾಳದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ವಿಚಾರದಲ್ಲಿ ಆರೋಪಿಗಳನ್ನು ಬಂಧಿಸಲು ಉಪ್ಪಿನಂಗಡಿ ಪೋಲೀಸರಿಗೆ ಸಹಕಾರ ನೀಡಿದ ಕಾರಣಕ್ಕಾಗಿ ಕಡಬ ಪೊಲೀಸರು ತನ್ನ ಮೇಲೆ ಅಸಮಾಧಾನ ಹೊಂದಿದ್ದರು. ಈ ಕಾರಣದಿಂದ ತಾನು 2012 ನ.30ರಂದು ಕಡಬ ಪೇಟೆಯಲ್ಲಿದ್ದಾಗ ಮೊಬೈಲ್‌ಗೆ ಕರೆ ಮಾಡಿದ ಕಡಬ ಠಾಣೆ ಸಿಬ್ಬಂದಿ, ತಕ್ಷಣ ಠಾಣೆಗೆ ಬರುವಂತೆ ಹೇಳಿದರು. ಠಾಣೆಗೆ ಹೋದಾಗ ಪೊಲೀಸ್ ಪೇದೆಗಳಾದ ಸಂದೀಪ್, ನಿತೀಶ್, ಸತೀಶ್ ತನ್ನನ್ನು ಠಾಣೆಯಲ್ಲಿ ಹಿಗ್ಗಾಮುಗ್ಗ ಥಳಿಸಿದರಲ್ಲದೆ ತನ್ನಲ್ಲಿದ್ದ ರು. 2300 ಹಾಗೂ ಮೊಬೈಲ್ ಫೋನನ್ನು ಬಲವಂತವಾಗಿ ಎಳೆದುಕೊಂಡ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿನಾಕಾರಣ ಹೊಡೆದಿದ್ದಾರೆ ಎಂದು ಆರೋಪಿಸಿದ್ದರು.
ಈ ಬಗ್ಗೆ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಂದಿನ ಠಾಣಾಧಿಕಾರಿ ನಾಗರಾಜ್ ಕ್ಷಮೆ ಯಾಚಿಸಿ ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಯಾವುದೇ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ನ್ಯಾಯಲಯಕ್ಕೆ ಮೊರೆ ಹೋಗಬೇಕಾಯಿತು ಎಂದಿದ್ದಾರೆ. ಇದೀಗ ನ್ಯಾಯಾಲಯದ ಆದೇಶದಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.