ದಕ್ಷಿಣ ಕನ್ನಡ

ಸೌಮ್ಯ ಕೊಲೆ ಪಾತಕಿಗೆ ಗಲ್ಲು ವಿಧಿಸಿ: ಹಕ್ಕೊತ್ತಾಯ

Published On :

ಬಂಟ್ವಾಳ: ಅಲ್ಲಿ ಸೇರಿದ್ದ ನೂರಾರು ಮಹಿಳೆಯರ ಕಣ್ಣಂಚಿನಲ್ಲಿ ನೀರು ಹರಿಯುತ್ತಿತ್ತು. ಊರಿನಲ್ಲಿ ಆಗಬಾರದ ಘಟನೆಯೊಂದು ಆಗಿಹೋದ ಬಗ್ಗೆ ನೋವಿತ್ತು, ಸಂಕಟವಿತ್ತು. ತಮ್ಮ ನಡುವೆ ಇದ್ದ ವ್ಯಕ್ತಿಯೇ ಈ ಕೃತ್ಯ ಮಾಡಿದನಲ್ಲಾ ಎಂಬ ಆತಂಕದ ಆಕ್ರೋಶವೂ ಇತ್ತು. ಗ್ರಾಮಸ್ಥರಿಂದ ತುಂಬಿ ತುಳುಕುತ್ತಿದ್ದ ಆ ಸಭೆಯಲ್ಲಿ ಮೊಳಗಿಬಂದ ಮಾತುಗಳೆಲ್ಲವೂ ಸೌಮ್ಯಳಿಗೆ ಶ್ರದ್ದಾಂಜಲಿ ಸಲ್ಲಿಸುವಂತಿತ್ತು.
 ಇದು. ಕಳೆದ ಐದು ದಿನಗಳ ಹಿಂದೆ ಅಮಾನುಷವಾಗಿ ಹತ್ಯೆಗೀಡಾದ ಬಾಳ್ತಿಲದ ಸೌಮ್ಯಳ ಕುಟುಂಬಕ್ಕೆ ಊರಿಗೆ ಊರೇ ಬೆಂಬಲವಾಗಿ ನಿಂತ ಬಗೆ. ಶನಿವಾರ ಬಾಳ್ತಿಲ ಗ್ರಾ.ಪಂ. ಸಭಾಂಗಣದಲ್ಲಿ ಸೇರಿದ ನೂರಾರು ಸಂಖ್ಯೆಯ ಗ್ರಾಮಸ್ಥರು, ಸೌಮ್ಯಳ ಕೊಲೆ ಆರೋಪಿ ಸತೀಶನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.
 ಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಸುಂದರ ಸಾಲ್ಯಾನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಊರ ಗಣ್ಯರು ಸೌಮ್ಯಳ ಸಾವಿಗೆ ಸಂತಾಪ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ನಿಂತು ಮಾತನಾಡುತ್ತಿದ್ದ ಗಣ್ಯರೆಲ್ಲರೂ ತಮ್ಮ ಮಾತಿನ ಮಧ್ಯೆ, ಸೌಮ್ಯಳ ಸಾವಿನ ವಿಚಾರ ಪ್ರಸ್ತಾಪಿಸುತ್ತಲೇ, ದುಃಖದಲ್ಲಿ ಎಲ್ಲರ ಕಣ್ಣು ತೇವವಾಗುತ್ತಿತ್ತು. ಜಾತಿಯ ನೆಪದಲ್ಲಿ ಆರೋಪಿಗೆ ಯಾವುದೇ ರೀತಿಯ ರಕ್ಷಣೆ ಒದಗಿಸಬಾರದು. ಅಮಾನುಷ ಕೃತ್ಯಕ್ಕೆ ತಕ್ಕುದಾದ ಶಿಕ್ಷೆ ವಿಧಿಸಬೇಕು. ಗಲ್ಲು ಶಿಕ್ಷೆ ಅಥವಾ ಗಡಿಪಾರು ಮಾಡಬೇಕು. ಆರೋಪಿ ಪರವಾಗಿ ಯಾವ ವಕೀಲರೂ ವಾದ ಮಾಡಬಾರದು. ಇಂತಹ ಕೃತ್ಯ ನಡೆಸುವ ಮನಸ್ಥಿತಿಯವರನ್ನು ಕಾನೂನು ಪ್ರಕಾರ ಶಿಕ್ಷಿಸಬೇಕು. ಮೃತ ಸೌಮ್ಯಳ ಹೆಸರಿನಲ್ಲಿ ಖಾಸಗಿಯಾಗಿ ಯಾರೂ ಹಣ ಸಂಗ್ರಹ ಮಾಡಬಾರದು. ಪ್ರಚಾರದ ಕಾರಣಕ್ಕೆ ಸಾಂತ್ವಾನ ಬೇಕಾಗಿಲ್ಲ. ಕುಟುಂಬಕ್ಕೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಆಗಲಿ, ಮೃತ ಸೌಮ್ಯಳ ಕುಟುಂಬಕ್ಕೆ ಸರ್ಕಾರ ಸೂಕ್ತ ರೀತಿಯ ಪರಿಹಾರ ಒದಗಿಸಬೇಕು ಎಂಬ ಒತ್ತಾಯ ಸಭೆಯಲ್ಲಿ ಕೇಳಿ ಬಂತು. ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ ಊರಿನ ಗಣ್ಯರು, ರಾಜಕೀಯ ರಹಿತವಾಗಿ ನಡೆಯುತ್ತಿರುವ ಹೋರಾಟ ತೀವ್ರವಾಗಬೇಕು, ಸೌಮ್ಯಳಂತ ಸ್ಥಿತಿ ಯಾರಿಗೂ ಬರಬಾರದು ಈ ನಿಟ್ಟಿನಲ್ಲಿ ಜಾತಿ- ಮತ- ಪಕ್ಷ ಭೇದ ಮರೆತು ಹೋರಾಟ ಮುಂದುವರಿಯಬೇಕು ಎಂದರು. ಬಾಳ್ತಿಲ ಗ್ರಾ.ಪಂ. ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರವನ್ನು ಸಭೆಯಲ್ಲಿ ವಾಚಿಸಲಾಯಿತು. ಸೌಮ್ಯ ಕುಟುಂಬಕ್ಕೆ ಆರ್ಥಿಕವಾಗಿ ನೆರವಾದ ವಿವಿಧ ವ್ಯಕ್ತಿ, ಪಕ್ಷ, ಸಂಘಟನೆ ಪ್ರಮುಖರನ್ನು ಸಭೆಯಲ್ಲಿ ಶ್ಲಾಘಿಸಲಾಯಿತು.
 ಜಿಲ್ಲಾ ಬಿಜೆಪಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಸುಲೋಚನಾ ಜಿ.ಕೆ. ಭಟ್, ಜಿ.ಪಂ. ಸದಸ್ಯರಾದ ಚಂದ್ರ ಪ್ರಕಾಶ್ ಶೆಟ್ಟಿ, ಮಮತಾ ಗಟ್ಟಿ, ಚೆನ್ನಪ್ಪ ಕೋಟ್ಯಾನ್, ಮಾಜಿ ಶಾಸಕ ರುಕ್ಮಯ ಪೂಜಾರಿ, ತಾ.ಪಂ. ಅಧ್ಯಕ್ಷೆ ಲಲಿತಾ ಶಿವಪ್ಪ ನಾಯ್ಕ, ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಪೂಜಾರಿ, ಪ್ರಮುಖರಾದ ಮೋಹನ್ ಪಿ.ಎಸ್, ಸೂರ್ಯನಾರಾಯಣ ಭಟ್, ನೇತ್ರಾವತಿ, ಆಶಾಪ್ರಸಾದ್, ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ, ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ, ಬಂಟ್ವಾಳ ನಗರ ಠಾಣಾಧಿಕಾರಿ ಬಿ. ಶೇಖರ್ ವೇದಿಕೆಯಲ್ಲಿದ್ದರು.
ಬಾರದ ಸಂಸದರು ಆಕ್ರೋಶ: ರಾಜ್ಯಮಟ್ಟದಲ್ಲಿ ಸುದ್ದಿಯಾದ ಸೌಮ್ಯ ಕೊಲೆ ನಡೆದು ಐದು ದಿನ ಕಳೆದಿದೆಯಾದರೂ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರು ಸೌಮ್ಯ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ನೀಡದಿರುವ ಬಗ್ಗೆ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗಿದೆ.
ಸಭೆಯಲ್ಲಿ ಭಾಗವಹಿಸಿದ್ದ ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯರು, ಮಾಜಿ ಸಂಸದರೊಬ್ಬರು ಸೌಮ್ಯ ಕುಟುಂಬಕ್ಕೆ ಪಕ್ಷದ ಕಾರ್ಯಕರ್ತರಿಂದ ಸಂಗ್ರಹಿಸಿ ನೀಡಿದ ಬೃಹತ್ ಮೊತ್ತದ ಬಗ್ಗೆ ಶ್ಲಾಘಿಸಿದ್ದರು. ಇದೇ ವೇಳೆ ಗ್ರಾಮಸ್ಥರ ನಡುವೆ ಚರ್ಚೆ ನಡೆದಿದ್ದು, ಹಾಲಿ ಸಂಸದ ನಳಿನ್ ಕುಮಾರ್ ಬಾಳ್ತಿಲಕ್ಕೆ ಭೇಟಿ ನೀಡದಿರುವ ಬಗ್ಗೆ ಆಕ್ರೋಶದ ಮಾತುಗಳು ಕೇಳಿ ಬಂದಿದೆ.  
ಮತ್ತೊಂದೆಡೆ ಅಮಾನುಷವಾಗಿ ಸೌಮ್ಯಾಳ ಕೊಲೆ ನಡೆದಿದ್ದರೂ ದ.ಕ ಜಿಲ್ಲಾಧಿಕಾರಿ ಸೌಮ್ಯ ಕುಟುಂಬಸ್ಥರನ್ನು  ಭೇಟಿಯಾಗದಿರುವ ಬಗ್ಗೆ ಜಿ.ಪಂ. ಸದಸ್ಯೆ ಮಮತಾ ಗಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.