ದಕ್ಷಿಣ ಕನ್ನಡ

ಮತಾಂತರ ಯತ್ನ ಪ್ರಕರಣ; ಕಾಂಗ್ರೆಸ್‌ಗೆ ಬಿಜೆಪಿ ಮಹಿಳಾ ಮೋರ್ಚಾ ಸವಾಲು

Published On :

ಸುಳ್ಯ: ಪುತ್ತೂರಿನಲ್ಲಿ ನಡೆದ ಯುವತಿಯ ಮತಾಂತರ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕರಾಗಿರುವ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಬಂಧನಕ್ಕೆ ಒಳಗಾದ ಹಿನ್ನಲೆಯಲ್ಲಿ ಘಟನೆಯ ಕುರಿತಂತೆ ಕಾಂಗ್ರೆಸ್ ಏನು ಹೇಳುತ್ತದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಪ್ರಶ್ನಿಸಿದೆ.
ಸುಳ್ಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಪುಲಸ್ಯ ರೈ ಯವರು, ದಿನಂಪ್ರತಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿರುವ ದಿನಗಳಲ್ಲಿ ಪುತ್ತೂರಿನಲ್ಲಿ ನಡೆದ ಘಟನೆ ನಮ್ಮಲ್ಲಿ ಆತಂಕ ಮೂಡಿಸಿದೆ. 19 ವರ್ಷದ ಯುವತಿಯನ್ನು ಮತಾಂತರಿಸಿ ಕೇರಳದ ಪೊನ್ನಾನಿಗೆ ಕೊಂಡೊಯ್ಯುವ ಹಿಂದೆ ಒಬ್ಬ ನೀಚ ಇದ್ದಾನೆ. ಈತ ಜಿಲ್ಲೆಯಲ್ಲಿ ನಡೆಯುತ್ತಿರುವ ಹುಡುಗಿಯರ ಮಾರಾಟ ಜಾಲದ ಮತ್ತು ಲವ್ ಜಿಹಾದ್‌ನ ಮಾಸ್ಟರ್‌ಮೈಂಡ್ ಆಗಿದ್ದು ಕಾಂಗ್ರೆಸ್ ನಾಯಕನಾಗಿರುವ ಈತನ ಕೃತ್ಯದ ಬಗ್ಗೆ ಕಾಂಗ್ರೆಸ್ ಏನು ಹೇಳುತ್ತದೆ ಎಂದು ಪ್ರಶ್ನಿಸಿದರು.
ಗುಣವತಿ ಕೊಲ್ಲಂತಡ್ಕ, ಮಮತ ಬೊಳುಗಲ್ಲು, ನವೀನ್ ರೈ ಮೇನಾಲ, ಸುಭೋದ್ ಶೆಟ್ಟಿ, ಕಮಲಾಕ್ಷ ರೈ, ಚಂದ್ರಶೇಖರ ಅತ್ಯಾಡಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಸುಳ್ಯ: ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಯುವತಿಯ ಮತಾಂತರ ಯತ್ನ  ಘಟನೆಯನ್ನು ಖಂಡಿಸಿ ಸೋಮವಾರ ಭಜರಂಗದಳ, ವಿಶ್ವ ಹಿಂದೂ ಪರಿಷತ್ಮ್‌ತ್ತು ಹಿಂದು ಹಿತರಕ್ಷಣಾ ಸಮಿತಿ ಪ್ರತಿಭಟನೆ ನಡೆಸಲಿದೆ.
ಭಜರಂಗದಳದ ಗೋರಕ್ಷಾ ಪ್ರಮುಖ್ ಮಹೇಶ್ ಕುಮಾರ್ ಮೇನಾಲ ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಜಿಲ್ಲೆಯ ಹಲವು ಕಡೆಗಳಲ್ಲಿ ಹಿಂದೂ ಯುವತಿಯರ ನಾಪತ್ತೆ ಪ್ರಕರಣಗಳು, ಯುವತಿಯರ ಅನುಮಾನಸ್ಪಾದ ಸಾವು ನಡೆಯುತ್ತಲೇ ಇತ್ತು.
ಈ ಬಗ್ಗೆ ಹಿಂದು ಸಂಘಟನೆಗಳು ಪ್ರತಿ ಬಾರಿಯೂ ಎಚ್ಚರಿಕೆ ನೀಡಿದಾಗಲೂ ನಮ್ಮನ್ನು ಕೋಮುವಾದಿಗಳು ಎಂದು ಕರೆಯಲಾಗುತ್ತಿತ್ತು. ಈಗ ಈ ಮಾತು ಸತ್ಯವಾಗಿದೆ. ಕಾಂಗ್ರೆಸ್ ನಾಯಕನೇ ಇದರಲ್ಲಿ ಭಾಗಿಯಾಗುವ ಮೂಲಕ ಜಾತ್ಯತೀತದ ಸೋಗು ಹಾಕುವ ಕಾಂಗ್ರೆಸ್‌ನ ಬಣ್ಣ ಬಯಲಾಗಿದೆ. ಈ ಘಟನೆಯನ್ನು ಖಂಡಿಸಿ ಸೋಮವಾರ ಜಿಲ್ಲಾದ್ಯಂತ ಪ್ರತಿಭಟನೆ ನಡೆಯಲಿದ್ದು ಸುಳ್ಯದಲ್ಲೂ ಪ್ರತಿಭಟನೆ ನಡೆಯಲಿದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಕೈವಾಡ: ಹಿಂಜಾವೇ ಆರೋಪ
ಮಂಗಳೂರು: ಪುತ್ತೂರಿನಲ್ಲಿ ಯುವತಿಯನ್ನು ಅಪಹರಿಸಿ ಮತಾಂತರ ಯತ್ನದ ಹಿಂದೆ ಕಾಂಗ್ರೆಸ್ ಶಕ್ತಿಗಳ ಕೈವಾಡವಿದೆ ಎಂದು ಹಿಂದೂ ಜನಜಾಗೃತಿ ವೇದಿಕೆ ಆರೋಪಿಸಿದೆ.
ಅಕತಡ್ಕದ ಯುವತಿಯನ್ನು ಕೇರಳದ ಪೊನ್ನಾಣಿಗೆ ಕರೆದೊಯ್ದ ಆರೋಪಿ ಅಜೀಜ್, ಮಹಮ್ಮದ್ ಅಲ್ತಾಫ್ ಹಾಗೂ ಪುತ್ತೂರಿನ ನೋಟರಿ ವಕೀಲ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಕಾರ್ಯದರ್ಶಿ ನೂರುದ್ದೀನ್ ಸಾಲ್ಮರ ಇವರ ಕೃತ್ಯವನ್ನು ಖಂಡಿಸುವುದಾಗಿ ಸಮಿತಿ ಹೇಳಿದೆ. ಜಿಲ್ಲೆಯಲ್ಲಿ ಡ್ರಗ್ ಮಾಫಿಯಾ, ಲವ್ ಜಿಹಾದ್, ಮತಾಂತರ, ಹಿಂದೂ ಯುವತಿ ನಾಪತ್ತೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದೊಂದು ಅಂತಾರಾಷ್ಟ್ರೀಯ ಜಾಲವಾಗಿದೆ. ಉಗ್ರ ಸಂಘಟನೆಗಳ ಜತೆ ಮತಾಂಧ ಗುಂಪುಗಳು ಸೇರಿ ಈ ಕೃತ್ಯವನ್ನು ವ್ಯವಸ್ಥಿತ ಮಾಡುತ್ತಿವೆ. ಇದಕ್ಕೆ ಕಾಂಗ್ರೆಸ್ ಕೈಜೋಡಿಸಿರುವುದು ಬೇಸರದ ಸಂಗತಿ. ಪಬ್ ದಾಳಿ, ಹೋಂ ಸ್ಟೇ ಪ್ರಕರಣಗಳ ಸಂದರ್ಭ ಬೊಬ್ಬೆ ಹಾಕುವ ಸಂಘಟನೆಗಳು ಈಗ ಮೌನ ವಹಿಸುತ್ತಿರುವುದು ಆಶ್ಚರ್ಯವಾಗಿದೆ. ಅವರು ಕೂಡ ಈ ಕೃತ್ಯಕ್ಕೆ ಸಮ್ಮತಿದಾರರೇ ಎಂದು ಸಮಿತಿ ಪ್ರಶ್ನಿಸಿದೆ. ಪೊಲೀಸರು ಈ ವಿಚಾರದಲ್ಲಿ ಉನ್ನತ ತನಿಖೆ ನಡೆಸಿ, ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗುಂತೆ ಮಾಡಬೇಕು ಎಂದು ಸಮಿತಿ ಮುಖಂಡ ರಮಾನಂದ ಗೌಡ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.