25 ಅಂಶ ಪ್ರಣಾಳಿಕೆಯಲ್ಲಿ 24 ಕೈಬಿಟ್ಟಿದ್ದಾರೆ : ಸೊರಕೆ
ಮಂಗಳೂರು: 5 ವರ್ಷಗಳಲ್ಲಿ ಮಹಾನಗರ ಪಾಲಿಕೆ ಆಡಳಿತ ನಡೆಸಿದ ಬಿಜೆಪಿ ಕಳೆದ ಬಾರಿ ಹೇಳಿದ 25 ಅಂಶಗಳ ಚುನಾವಣೆ ಪ್ರಣಾಳಿಕೆಯಲ್ಲಿ 24 ಅಂಶಗಳನ್ನು ಮಾಡಿಲ್ಲ ಎಂದು ಎಐಸಿಸಿ ಕಾರ್ಯದರ್ಶಿ ವಿನಯಕುಮಾರ್ ಸೊರಕೆ ಆರೋಪಿಸಿದರು.
ಮಹಾನಗರ ಪಾಲಿಕೆ ಚುನಾವಣೆ ವಿಧಾನಸಭೆ ಚುನಾವಣಗೆ ಅಂಕದ ತೆರೆ ಇದ್ದಂತೆ. ಕಾಂಗ್ರೆಸ್ ಉತ್ತಮ ಫಲಿತಾಂಶ ನೀಡಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದ್ದಾಗ ಅಂದಿನ ಸಚಿವ ಬಿ.ಎ. ಮೊಯ್ದಿನ್ ಮಂಗಳೂರಿಗೆ 1,100 ಕೋಟಿ ಮಹಾನಗರ ಪಾಲಿಕೆಗೆ ಒಳಚರಂಡಿ ಯೋಜನೆಗೆ ಎಬಿಡಿ ಯೋಜನೆಯಿಂದ ನೀಡಿದರು. ಬಿಜೆಪಿ ಆಡಳಿತದಲ್ಲಿ ಕುಂಟುತ್ತಾ ಕಾಮಗಾರಿ ನಡೆದಿದ್ದು, ಒಳಚರಂಡಿ ಕಾಮಗಾರಿಯ ಸಂಪೂರ್ಣ ಪ್ರಯೋಜನ ನಾಗರಿಕರಿಗೆ ಸಿಕ್ಕಿಲ್ಲ. ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಉತ್ತಮ ಅಭಿವೃದ್ಧಿ ಕಾಮಗಾರಿ ನಡೆಸುವುದಾಗಿ ಹೇಳಿದರು.
ಮಂಗಳೂರಿಗೆ ಕುಡಿಯುವ ನೀರು ಎನ್ನುವುದು ಜ್ವಲಂತ ಸಮಸ್ಯೆ. ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಎತ್ತಿನಹೊಳೆ ಯೋಜನೆಗೆ 3,400 ಕೋಟಿ ಮಂಜೂರು ಮಾಡಿದ್ದಾರೆ. ಇದರಿಂದ ನೇತ್ರಾವತಿಯನ್ನು ಮೂಲದಲ್ಲಿಯೇ ತಿರುಗಿಸಿ ಕೋಲಾರಕ್ಕೆ ನೀರು ಹರಿಸಲಾಗುತ್ತದೆ. ಮಂಗಳೂರಿನ ಜನರಿಗೆ ನೀರಿನ ತೀವ್ರ ಅಭಾವ ಎದುರಾಗಲಿದೆ. ಡೀವಿ ಮಂಗಳೂರು ಜನತೆಗೆ ದ್ರೋಹ ಬಗೆದಿದ್ದಾರೆ ಎಂದು ಸೊರಕೆ ಆರೋಪಿಸಿದರು.
ಮಾಜಿ ಉಸ್ತುವಾರಿ ಸಚಿವರು ದೊಡ್ಡ ಬಿಲ್ಡರ್. ಅವರ ಉದ್ಯಮ ಬೆಳವಣಿಗೆಗೆಂದು ನಗರ ಯೋಜನೆಯನ್ನು ಬದಲಿಸಿದ್ದಾರೆ. ಅವರಿಗೆ ಬೇಕಾದ ಕಡೆಗಳಲ್ಲಿ ಅಭಿವೃದ್ಧಿ ಯೋಜನೆ ರೂಪಿಸಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಸಣ್ಣ ಜಾಗದಲ್ಲಿಯೂ ಬಡ ಜನರು ಮನೆ ಕಟ್ಟಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ಮಾಡಿಕೊಡುತ್ತೇವೆ ಎಂದರು.
ಮಂಗಳೂರು ಬೆಳೆಯುತ್ತಿರುವ ನಗರ, ಇದನ್ನು ಗೇಟ್ ವೇ ಆಫ್ ಇಂಡಿಯಾ ಮಾಡಬಹುದಿತ್ತು. ಆದರೆ ಬಿಜೆಪಿ ನಿರ್ಲಕ್ಷ್ಯ ತೋರಿದೆ, ಕಾಂಗ್ರೆಸ್ ಆಧಿಕಾರಕ್ಕೆ ಬಂದರೆ ಬೆಂಗಳೂರು ಬಳಿಕ ಮಂಗಳೂರು ಮಹಾನಗರಕ್ಕೆ ಪ್ರಾಧಾನ್ಯತೆ ನೀಡುತ್ತದೆ. ಮಂಗಳೂರಲ್ಲಿ ಶಾಂತಿ, ಸೌಹಾರ್ದ ಕಾಪಾಡುವುದು ನಮ್ಮ ಉದ್ದೇಶ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಿ.ಎ.ಮೊಯ್ದಿನ್, ಬಿ.ಇಬ್ರಾಹಿಂ, ಕಳ್ಳಿಗೆ ತಾರನಾಥ ಶೆಟ್ಟಿ, ಸದಾಶಿವ ಉಳ್ಳಾಲ, ಐವನ್ ಡಿಸೋಜ, ಚುನಾವಣೆ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಜೆ.ಆರ್.ಲೋಬೊ, ಪಿ.ವಿ.ಮೋಹನ್, ಬಲರಾಜ ರೈ, ಇಬ್ರಾಹಿಂ ಕೋಡಿಜಾಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

