ಬಂಟ್ವಾಳ ಪುರಸಭೆ: ಕಾಂಗ್ರೆಸ್- ಬಿಜೆಪಿ ನಡುವೆ ಪ್ರಬಲ ಸ್ಪರ್ಧೆ
ಬಂಟ್ವಾಳ: ಇಲ್ಲಿನ ಪುರಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜಕೀಯ ಪಕ್ಷಗಳ ಮತಬೇಟೆಯ ಕಾಯಕ ತೀವ್ರಗೊಂಡಿದೆ.
ಪುರಸಭೆಯ ಒಟ್ಟು 23 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ 82 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ. ಉಳಿದಂತೆ ಜೆಡಿಎಸ್, ಕೆಜೆಪಿ, ಸಿಪಿಐ, ಸಿಪಿಎಂ, ಎಸ್ಡಿಪಿಐ, ಮುಸ್ಲಿಂ ಲೀಗ್ ಅಭ್ಯರ್ಥಿಗಳು ಕಣದಲ್ಲಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸವಾಲು ಒಡ್ಡಿದ್ದಾರೆ.
ಕಳೆದ ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದ್ದರೂ, ಕಾಂಗ್ರೆಸ್ ಸದಸ್ಯರು ಬಿಜೆಪಿ ಪರವಾಗಿ ಕೈ ಎತ್ತಿ ಪುರಸಭಾ ಆಡಳಿತ ಬಿಜೆಪಿಗೆ ಒಲಿಯುವಂತೆ ಮಾಡಿದ್ದರು.
ಅದರಂತೆ ಬಿಜೆಪಿ ಐದು ವರ್ಷಗಳ ಆಡಳಿತ ಪೂರ್ಣಗೊಳಿಸಿದೆ. ಇದೀಗ ಮತ್ತೆ ಚುನಾವಣೆ ಎದುರಾಗಿದ್ದು, ಆಡಳಿತ ಪಡೆಯುವಲ್ಲಿ ಬಿಜೆಪಿ ನಡೆಸಿದ್ದ ಆಪರೇಷನ್ ಕಮಲ, ವಿವಿಧ ಅಭಿವೃದ್ಧಿ ಕಾಮಗಾರಿಗಳ ವಿಳಂಬ, ಭ್ರಷ್ಟಾಚಾರ ಆರೋಪಗಳನ್ನು ಕಾಂಗ್ರೆಸ್ ಈ ಬಾರಿ ಪ್ರಚಾರದ ಸರಕಾಗಿಸಿದೆ.
ಇತ್ತ ಬಿಜೆಪಿ ತನ್ನ ಆಡಳಿತ ಅವಧಿಯ ಸಾಧನೆಗಳನ್ನು, ಮುಂದಿನ ಭರವಸೆಗಳನ್ನು ಮತದಾರರ ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದೆ. ಪ್ರತೀ ಕ್ಷೇತ್ರದಲ್ಲೂ ಪ್ರತೀ ಪಕ್ಷಗಳು ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಮತದಾರರ ಒಲವು ಯಾರತ್ತ ಎಂಬುದನ್ನು ಕಾದುನೋಡಬೇಕಾಗಿದೆ.
ಕೆಲ ಹೊಸಪಕ್ಷಗಳ ಎಂಟ್ರಿ ಚುನಾವಣಾ ಕಣಕ್ಕೆ ಹೊಸ ರಂಗು ತಂದಿದ್ದು, 22 ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಕಾಂಗ್ರೆಸ್ ಪುರಸಭೆಯ ನಿಕಟಪೂರ್ವ ಅಧ್ಯಕ್ಷರಿಗೆ ಪ್ರಬಲ ಸ್ಪರ್ಧೆ ನೀಡುವ ಕಾರಣಕ್ಕೆ ವಾರ್ಡ್ ಸಂಖ್ಯೆ 5 ರಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ, ಸ್ವತಂತ್ರ ಅಭ್ಯರ್ಥಿಯನ್ನು ಬೆಂಬಲಿಸಿ ಅಚ್ಚರಿ ಮೂಡಿಸಿದೆ. ಬಿಜೆಪಿ ಈ ಬೆಳವಣಿಗೆಯನ್ನು ಕಾಂಗ್ರೆಸ್ನ ದೌರ್ಬಲ್ಯ ಎಂದು ಹೇಳಿಕೊಂಡಿದೆ.
ಸಂಚಯಗಿರಿ ವಾರ್ಡ್ನಲ್ಲಿ ಚುನಾವಣಾ ಬಹಿಷ್ಕಾರದ ಅಪಸ್ವರ ಕೇಳಿ ಬಂದಿದ್ದು, ಅಲ್ಲಿನ ಮತದಾರರ ಮನವೊಲಿಸುವ ಕಾರ್ಯ ರಾಜಕೀಯ ಪಕ್ಷಗಳಿಂದ ನಡೆಯುತ್ತಿದೆ.
6 ಅಭ್ಯರ್ಥಿಗಳಿಗೆ ನೋಟಿಸ್
ಮಂಗಳೂರು: ಮಾಧ್ಯಮ ಸಮಿತಿ ಅನುಮತಿ ಪಡೆಯದೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಹಾಗೂ ಬಿಜೆಪಿ ಪಕ್ಷದ ಕಾರ್ಯದರ್ಶಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ನೋಟಿಸ್ ಕಳುಹಿಸಿದ್ದಾರೆ. ಅಪರ ಜಿಲ್ಲಾಧಿಕಾರಿ, ಮಾಧ್ಯಮ ಸಮಿತಿ ಸಂಚಾಲಕ ಎ.ದಯಾನಂದ್ ನೋಟಿಸ್ ಜಾರಿ ಮಾಡಿದ್ದು, 24 ಗಂಟೆ ಒಳಗೆ ಉತ್ತರಿಸುವಂತೆ ಸೂಚಿಸಿದ್ದಾರೆ. ಅನುಮತಿ ಹೊರತಾಗಿ ವೈಯಕ್ತಿಕ ಜಾಹೀರಾತು ನೀಡಿದ ಗಣೇಶ್, ರಾಜೇಶ್ ಕುಳಾಯಿ, ಭಾಸ್ಕರಚಂದ್ರ ಶೆಟ್ಟಿ, ಶಶಿಧರ ಹೆಗ್ಡೆ, ಲೇನ್ಸ್ ಲೋಟ್ ಪಿಂಟೊ, ಮೋಹನ್ ಪಡೀಲ್ ಅವರಿಗೆ ನೋಟಿಸ್ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

