ಗದಗದ ಪ್ರಣಯ ಜೋಡಿಗಳಿಗೆ ಮಂಗಳೂರಲ್ಲಿ ಕಂಕಣ ಭಾಗ್ಯ
ಮಂಗಳೂರು: ಪ್ರೀತಿ ಮಾಡಿದ ಹುಡುಗಿ ಮದುವೆಗೆ ಹೆತ್ತವರು ನಿರಾಕರಿಸಿದಾಗ ಊರನ್ನೇ ಬಿಟ್ಟು ಮಂಗಳೂರಿಗೆ ಬಂದ ಯುವಕನಿಗೆ ಜನಶಕ್ತಿ ಸೇವಾ ಟ್ರಸ್ಟ್ ಮತ್ತು ಲಯನ್ಸ್ ಕ್ಲಬ್ ಮುಂದೆ ನಿಂತು ಮದುವೆ ಮಾಡಿಸಿದೆ. ಗದಗದ ರವಿ ಬುದ್ದಿಹಾಳ ಮತ್ತು ಪಕ್ಕದ ಹಳ್ಳಿಯ ರತ್ನಾ ನಡುವಿನ ಪರಿಚಯ ಪ್ರೇಮವಾಗಿ ಬೆಳೆದಿತ್ತು. ರತ್ನ ಮಂಗಳೂರಲ್ಲಿ ಬ್ಯುಟಿಷಿಯನ್ ಕೆಲಸ ಮಾಡಿಕೊಂಡು ಹೆತ್ತವರ ಜತೆ ವಾಸವಾಗಿದ್ದಾರೆ. ರತ್ನ ಹಾಗೂ ರವಿ ನಡುವೆ ಪ್ರೇಮ ಅಂಕುರಿಸಿತ್ತು. 6 ತಿಂಗಳ ಹಿಂದೆ ರವಿ ತನ್ನ ಹೆತ್ತವರ ಜತೆ ರತ್ನಾಳನ್ನು ಮದುವೆಯಾಗುವುದಾಗಿ ಹೇಳಿದ್ದ. ಆದರೆ ರವಿಯ ಹೆತ್ತವರು ಈ ಮದುವೆಗೆ ನಿರಾಕರಿಸಿದ್ದರು. ಅವಳಿಗಿಂತ ಒಳ್ಳೆಯ ಸ್ಥಿತಿವಂತ ವಧುವನ್ನು ಮದುವೆ ಮಾಡಿಸುವುದಾಗಿ ಹೇಳಿದರು. ರತ್ನಾಳನ್ನು ಮದುವೆಯಾಗಲೇಬೇಕು ಎಂಬ ಆಸೆಯಿಂದ ಮಂಗಳೂರಿಗೆ ಬಂದ ರವಿ ಇಲ್ಲಿನ ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕೂ ಸೇರಿಕೊಂಡರು. ಆದರೆ ಹೆತ್ತವರನ್ನು ಧಿಕ್ಕರಿಸಿ ಮದುವೆ ಆಗುವುದು ಹೇಗೆ ಎಂಬ ಚಿಂತೆ ಕಾಡುತ್ತಿತ್ತು. ಆಗ ನೆರವಿಗೆ ಬಂದದ್ದೇ ಜನಸೇವಾಶಕ್ತಿ ಟ್ರಸ್ಟ್, ಮಂಗಳಾದೇವಿ ಲಯನ್ಸ್ ಮತ್ತು ಲಯನೆಸ್ ಕ್ಲಬ್. ನಗರದ ಕಾಶಿ ಸದನದಲ್ಲಿ ಸೋಮವಾರ ಸರಳ ವಿವಾಹ ನಡೆಯಿತು. ಆದರೆ ಅಲ್ಲಿಗೆ ಬಂದವರಲ್ಲಿ ಸಂತೃಪ್ತಿಯ ಕಳೆ ಇತ್ತು. ಪ್ರೇಮಿಗಳನ್ನು ಒಗ್ಗೂಡಿಸಿ ಮದುವೆ ಮಾಡಿಸಿದ ಖುಷಿ ಇತ್ತು. 'ಯುವಕನಿಗೆ ಈ ಹಿಂದೆ ಮದುವೆಯಾಗಿದೆಯೋ ಎಂಬ ಬಗ್ಗೆ ವಿಚಾರಣೆ ನಡೆಸಿದ್ದೇವೆ. ಇಬ್ಬರು ಪ್ರಾಪ್ತ ವಯಸ್ಕರು ಎಂದು ಕಂಡು ಬಂದ ಬಳಿಕವೇ ಅವರಿಗೆ ಮದುವೆ ಮಾಡಿಸಿದ್ದೇವೆ' ಎಂದು ಜನಸೇವಾಶಕ್ತಿ ಟ್ರಸ್ಟ್ ಅಧ್ಯಕ್ಷ ಎಂ.ದೇವದಾಸ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

