ಚುನಾವಣೆ ಬೆಳಗ್ಗೆ ಮಂದಗತಿ, ಸಂಜೆ ತೀವ್ರ...
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಮತ್ತು ಉಳ್ಳಾಲ ಪುರಸಭೆಗೆ ಗುರುವಾರ ನಡೆದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಮಧ್ಯಾಹ್ನ ವರೆಗೆ ಮಂದಗತಿಯಲ್ಲಿ ಸಾಗಿ, ಸಂಜೆ ವೇಳೆಗೆ ಸಾಧಾರಣ ಮತದಾನ ವರದಿಯಾಗಿದೆ.
ಮಂಗಳಾದೇವಿ ವಾರ್ಡ್ನ ಹೈಗೆ ಬಜಾರ್ ಶಾಲೆಯಲ್ಲಿ ಬೆಳಗ್ಗೆ 9 ಗಂಟೆಗೆ ಮತದಾನ ಪ್ರಮಾಣ ಶೇ.10.3 ಆಗಿತ್ತು. ಬೋಳಾರ ವಾರ್ಡ್ನಲ್ಲಿ ಮೀರಾವತಿ ಎಂಬ 70ರ ವೃದ್ಧೆ ತನ್ನ ಸಹಾಯಕರ ನೆರವಿನಲ್ಲಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಇಲ್ಲಿ ಸರಾಸರಿ ಶೇ.10ರಷ್ಟು ಮತದಾನವಾಗಿತ್ತು. ಕುಲಶೇಖರದಲ್ಲಿ ವೃದ್ಧೆಯನ್ನು ಮತಗಟ್ಟೆಗೆ ಕರೆತಂದ ರಿಕ್ಷಾವನ್ನು ಒಳಗೆಬಿಡದೆ ಕೆಲಹೊತ್ತು ವಾಗ್ವಾದ ನಡೆಯಿತು. ಬಳಿಕ ಮತಗಟ್ಟೆ ಅಧಿಕಾರಿಗಳು ವೃದ್ಧೆಯನ್ನು ಒಳಗೆ ಕರೆತಂದು ಮತ ಹಾಕಿಸಿದರು. ಇದೇ ಮತಗಟ್ಟೆಯಲ್ಲಿ ಕೆಜೆಪಿ ಅಭ್ಯರ್ಥಿ ಮರಿಯಮ್ಮ ಥಾಮಸ್ ಮತ ಕೇಳುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಚುನಾವಣಾಧಿಕಾರಿಗೆ ದೂರು ನೀಡಿದ ವಿದ್ಯಮಾನ ನಡೆಯಿತು.
ಆಧಾರ್ಗೆ ಯೋಗ: ಉಳ್ಳಾಲ ಭಾರತ್ ಹೈಸ್ಕೂಲ್ನಲ್ಲಿ 11 ಗಂಟೆಗೆ ಶೇ.32 ಮತದಾನವಾಗಿದೆ. ಆಧಾರ್ ಕಾರ್ಡ್ನ್ನು ಚುನಾವಣಾ ಆಯೋಗ ತನ್ನ 21 ಗುರುತಿನ ಚೀಟಿಗಳಲ್ಲಿ ಹೆಸರಿಸದಿದ್ದರೂ, ಈ ಮತಗಟ್ಟೆಯಲ್ಲಿ ಮತದಾರರೊಬ್ಬರು ಆಧಾರ್ ಕಾರ್ಡ್ ಜತೆ ಬಂದಿದ್ದರು. ಮತಗಟ್ಟೆ ಅಧಿಕಾರಿ ಅವರಿಗೆ ಮತದಾನಕ್ಕೆ ಅವಕಾಶ ನೀಡಿದರು.
ಸತ್ತವರ ಪಟ್ಟಿಯಲ್ಲಿ ಹೆಸರು!: ಅತಿಸೂಕ್ಷ್ಮ ಮತಗಟ್ಟೆ ಉಳ್ಳಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನ ವೇಳೆಗೆ ಬಿರುಸಿನ ಮತದಾನ ನಡೆದಿತ್ತು. ಈ ಮತಗಟ್ಟೆಯಲ್ಲಿ ಐಸಮ್ಮ(54) ಎಂಬಾಕೆ ಮತದಾನಕ್ಕೆ ಬಂದಾಗ, ಆಕೆಯ ಹೆಸರು ಮತದಾರರ ಪಟ್ಟಿಯಲ್ಲಿ ಮೃತಪಟ್ಟವರ ಯಾದಿಯಲ್ಲಿ ಇತ್ತು. ನಿಜವಾಗಿ ಸತ್ತದ್ದು ರಾಬಿಯಮ್ಮ(69). ಹಾಗಾಗಿ ಐಸಮ್ಮಗೆ ಮತ ಚಲಾಯಿಸಲು ಸಾಧ್ಯವಾಗಲಿಲ್ಲ.
ಕೊಡಿಯಾಲಬೈಲ್ನ ಲೂರ್ಡ್ಸ್ ಪ್ರೌಢ ಶಾಲೆಯಲ್ಲಿ ಕಾಲು ನೋವಿನಿಂದ ಬಳಲುತ್ತಿದ್ದ ಕ್ರಿಸ್ಟಿನ್ ರೋಡ್ರಿಗಸ್(91)ಪುತ್ರನ ನೆರವಿನಲ್ಲಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಇಲ್ಲಿ ವ್ಯಕ್ತಿಯೊಬ್ಬರು ಕೇವಲ ಚೀಟಿಯನ್ನು ಮಾತ್ರ ತಂದು ಗುರುತಿನ ಚೀಟಿ ತಾರದ ಕಾರಣ ಅವರನ್ನು ವಾಪಸ್ ಕಳುಹಿಸಲಾಯಿತು. ಗುರುತು ಚೀಟಿ ತಂದ ಬಳಿಕವೇ ಮತದಾನಕ್ಕೆ ಅವಕಾಶ ನೀಡಲಾಯಿತು.
ಮತದಾರರ ಪಟ್ಟಿಯಲ್ಲಿ ಡಿಲೀಟ್: ಕೊಡಿಯಾಲಬೈಲ್ ವಾರ್ಡ್ನ 119ನೇ ಮತದಾನ ಕೇಂದ್ರದಲ್ಲಿ ಸುರೇಶ ಎಂಬಾಕೆಯ ಹೆಸರನ್ನು ಮತದಾರರ ಪಟ್ಟಿಯಲ್ಲಿ ತೆಗೆದುಹಾಕಲಾಗಿತ್ತು. ಮೂರು ಸಲ ಬಂದರೂ ಆಕೆಗೆ ಮತದಾನ ಮಾಡಲು ಸಾಧ್ಯವಾಗಲಿಲ್ಲ. ಸುಮಾರು 37 ಮಂದಿಯ ಹೆಸರು ಇದೇ ರೀತಿ ಮತದಾರರ ಪಟ್ಟಿಯಲ್ಲಿ ಹೊಡೆದುಹಾಕಿದ್ದರಿಂದ ಅಷ್ಟು ಮಂದಿ ಮತದಾನದಿಂದ ವಂಚಿತವಾಗಬೇಕಾಯಿತು. ಅಂಥ ಮಂದಿ ಮತಗಟ್ಟೆಗೆ ಬಂದು ಅಧಿಕಾರಿಯಲ್ಲಿ ಅವಲತ್ತುಕೊಳ್ಳುತ್ತಿದ್ದರು.
ಕೈಕೊಟ್ಟ ಮತಯಂತ್ರ: ಜಪ್ಪುನಲ್ಲಿ 50 ಮಂದಿ ಮತದಾನ ಮಾಡಿದ ಬಳಿಕ ಮತಯಂತ್ರ ಕೈಕೊಟ್ಟು 55 ನಿಮಿಷ ಕಾಲ ಮತದಾನ ವಿಳಂಬವಾಯಿತು. ನಂತರ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮತಯಂತ್ರ ದೋಷವನ್ನು ಸರಿಪಡಿಸಿದರು.
ಕಾಪಿಕಾಡ್ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಬೆಳಗ್ಗೆ 11 ಗಂಟೆಗೆ ಎಲೆಕ್ಟ್ರಾನಿಕ್ ಮತಯಂತ್ರ ಸ್ವಿಚ್ ಜಾಮ್ ಆಗಿ ಸ್ವಲ್ಪ ಹೊತ್ತು ಗೊಂದಲ ಉಂಟಾಯಿತು. ಬಳಿಕ ಅದನ್ನು ಸರಿಪಡಿಸಲಾಯಿತು. ಇದೇ ರೀತಿ ಬೆಂಗ್ರೆ ಮತಗಟ್ಟೆಯಲ್ಲೂ ಮತಯಂತ್ರವನ್ನು ಮತದಾನ ವೇಳೆ ಜಾಸ್ತಿ ಅದುಮಿದ ಕಾರಣ ಕ್ಷಣ ಕಾಲ ಸ್ವಿಚ್ ಜಾಮ್ ಆದ ಘಟನೆ ನಡೆದಿದೆ. ಕುಳಾಯಿಯ ವೆಂಕಟ್ರಮಣ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಮತಯಂತ್ರದ ಬ್ಯಾಟರಿ ಚಾರ್ಜ್ ಕಡಿಮೆಯಾಗಿ, ಆತಂಕ ಉಂಟು ಮಾಡಿತ್ತು. ಚುನಾವಣಾ ಮೇಲಧಿಕಾರಿಗೆ ಮಾಹಿತಿ ತಿಳಿಸಿ 2 ಗಂಟೆ ಕಳೆದರೂ ಪರ್ಯಾಯ ವ್ಯವಸ್ಥೆ ಆಗಿರಲಿಲ್ಲ.
ದೇರೆಬೈಲ್ ಚರ್ಚ್ ಶಾಲೆ, ಕೊಡಿಯಾಲಬೈಲ್ 30ನೇ ವಾರ್ಡ್ ಮತಗಟ್ಟೆಯಲ್ಲಿ ಸಂಜೆಯೂ ಬಿರುಸಿನ ಮತದಾನ ನಡೆದಿತ್ತು.
ಟೆಂಡರ್ ಮತ ಹಾಕಿದ ಯುವತಿ: ಕಾಟಿಪಳ್ಳ ಪೂರ್ವ ವಾರ್ಡ್ನಲ್ಲಿ ಶಮೀನ್ ಯಾಸ್ಮಿನ್ ಎಂಬಾಕೆಯ ಮತವನ್ನು ಯಾರೋ ಚಲಾಯಿಸಿದ್ದರು. ಆಕೆಯದೇ ಭಾವಚಿತ್ರ ತೋರಿಸಿ ಬುರ್ಖಾ ಧರಿಸಿದ ಮಹಿಳೆಯೊಬ್ಬಳು ಮತದಾನ ಮಾಡಿ ತೆರಳಿದ್ದಳು. ಕೆಲಹೊತ್ತಿನ ಬಳಿಕ ಯಾಸ್ಮಿನ್ ಬಂದಾಗ, ತನ್ನ ಮತವನ್ನು ಯಾರೋ ಚಲಾಯಿಸಿದ್ದು ಗೊತ್ತಾಯಿತು. ಕೊನೆಗ ಈಕೆಗೂ ಟೆಂಡರ್ ಮತ ಚಲಾಯಿಸಲು ಅವಕಾಶ ನೀಡಲಾಯಿತು.
ಮತದಾರರ ಪಟ್ಟಿಯಲ್ಲಿ ಹೆಸರಿನ ಮೇಲೆ ಗುಣಿಸು ಮಾರ್ಕ್ ಇದ್ದವರಿಗೆ ಮತದಾನಕ್ಕೆ ಅವಕಾಶ ನೀಡದಿರುವುದು ಸರಿಯಷ್ಟೆ, ಆದರೆ ಇದೇ ವಾರ್ಡ್ನಲ್ಲಿ ಮತದಾರರ ಪಟ್ಟಿಯಲ್ಲಿ ಐಡಿ ಕಾರ್ಡ್ ನಂಬರು ಇದ್ದ ಮಾತ್ರಕ್ಕೆ ಮತದಾನಕ್ಕೆ ಅವಕಾಶ ನೀಡಿದ ಘಟನೆ ನಡೆದಿದೆ. ಹೀಗೆ ಮೂರು ಮಂದಿ ಮತದಾನ ಮಾಡಿದ್ದರು.
ಮೊಬೈಲ್ ಪೊಲೀಸಿಂಗ್!: ಮತದಾನ ಕೇಂದ್ರದೊಳಗೆ ಮೊಬೈಲ್ ನಿಷೇಧ. ಹಾಗಂತ ಎಲ್ಲಿಯೂ ಫಲಕ ಹಾಕಿಲ್ಲ. ಆದರೂ ಮತದಾರರು ಈ ಬಗ್ಗೆ ತಿಳುವಳಿಕೆ ಹೊಂದಿರುತ್ತಾರೆ ಎನ್ನುವುದು ಮತದಾನ ಕೇಂದ್ರದಲ್ಲಿ ಕಾವಲಿದ್ದ ಪೊಲೀಸಪ್ಪನ ವಾದ. ಆತ ಮಾಡಿದ್ದೇನೆಂದರೆ,
ಇಡ್ಯಾ ಮತಗಟ್ಟೆಯಲ್ಲಿ ಶೃತಿ ಎಂಬಾಕೆ ಮತದಾನ ಕೇಂದ್ರಕ್ಕೆ ಮತ ಚಲಾಯಿಸಲು ಹೋಗಿದ್ದಳು. ಆದರೆ ದುರದೃಷ್ಟಕ್ಕೆ ಮತದಾರರ ಪಟ್ಟಿಯಲ್ಲಿ ಆಕೆಯ ಹೆಸರಿರಲಿಲ್ಲ. ಅಷ್ಟರಲ್ಲಿ ಆಕೆಯ ಮೊಬೈಲ್ ರಿಂಗಣಿಸಿತು. ಸಹೋದರನಲ್ಲಿ ಮಾತನಾಡಲು ಮತಗಟ್ಟೆಯಿಂದ ಹೊರಗೆ ಬಂದಾಗ, ಪೊಲೀಸ್ ಸಿಬ್ಬಂದಿ ಆಕೆಯ ಮೊಬೈಲ್ನ್ನು ಕಸಿದುಕೊಂಡ. ಇದರಿಂದ ಮುಜುಗರಗೊಂಡ ಆಕೆಯ ಸಹಪಾಠಿಗಳು ಪೊಲೀಸ್ ಜತೆ ವಾಗ್ವಾದಕ್ಕಿಳಿದರು. ಇದರಿಂದ ಸಿಟ್ಟಾದ ಸಿಬ್ಬಂದಿ ಠಾಣೆಗೆ ಹಾಜರುಪಡಿಸುತ್ತೇನೆ ಎಂದು ಪಟ್ಟುಹಿಡಿದ. ಕೊನೆಗೆ ಮತಗಟ್ಟೆ ಅಧಿಕಾರಿಯ ಮಧ್ಯಪ್ರವೇಶದೊಂದಿಗೆ ಮೊಬೈಲ್ನ್ನು ಹಿಂದಿರುಗಿಸಲಾಯಿತು.
ಮಾಹಿತಿ ನಿರಾಕರಿಸಿದ ಅಧಿಕಾರಿ: ಕುಳಾಯಿ ವೆಂಕಟ್ರಮಣ ಶಾಲೆಯ 52ನೇ ಮತದಾನ ಕೇಂದ್ರದ ಮತಗಟ್ಟೆ ಅಧಿಕಾರಿ ಮಾಧ್ಯಮ ಮಂದಿಗೆ ಮತದಾನದ ವಿವರ ನೀಡಲು ನಿರಾಕರಿಸಿದ ವಿದ್ಯಮಾನ ನಡೆಯಿತು. ಸೆಕ್ಟರ್ ಅಧಿಕಾರಿ ಅಚ್ಚುತ ನಾಯಕ್ ಕೂಡ ಮಾಹಿತಿ ನೀಡಬೇಡಿ ಎಂದು ಹೇಳಿದ್ದರಿಂದ ವಾರ್ತಾ ಅಧಿಕಾರಿಗೂ ಮಾಹಿತಿ ನೀಡದೆ ವಾಪಾಸ್ ಕಳುಹಿಸಿದರು. ಮೇಲಿನವರ ಆದೇಶವಿದ್ದರೆ ಮಾತ್ರ ತಾನು ಮಾಹಿತಿ ನೀಡುವುದಾಗಿ ಮತಗಟ್ಟೆ ಅಧಿಕಾರಿ ಪಟ್ಟುಹಿಡಿಯುತ್ತಿದ್ದರು.
ಪೋಸ್ಟರ್ನಲ್ಲಿ ಚಿಹ್ನೆ ಇಲ್ಲ: ಪ್ರತಿ ಬಾರಿ ಮತದಾನ ವೇಳೆ ಮತದಾನ ಕೇಂದ್ರದ ಹೊರಗೆ ಗೋಡೆಯಲ್ಲಿ ಮತದಾನ ಕೇಂದ್ರದ ಮಾಹಿತಿ ಹಾಗೂ ಅಭ್ಯರ್ಥಿಗಳ ವಿವರ ಎದುರು ಚಿಹ್ನೆಯನ್ನೂ ಹಾಕುತ್ತಿದ್ದರು. ಈ ಬಾರಿ ಕೇವಲ ಅಭ್ಯರ್ಥಿಗಳ ಹೆಸರು ಮತ್ತು ಪಕ್ಷದ ಚಿಹ್ನೆ ಎಂದಷ್ಟೇ ಬರೆಯಲಾಗಿದೆ. ಚಿಹ್ನೆಯ ಚಿತ್ರ ಎಲ್ಲಿಯೂ ಹಾಕಿಲ್ಲ ಎನ್ನುವುದು ಗಮನಾರ್ಹ.
ಫ್ಯಾನ್ ಬಂದ್ ಮಾಡಿಲ್ಲ!
ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಚಿಹ್ನೆ ಫ್ಯಾನು. ಹಾಗಾಗಿ ಈ ಬಾರಿ ಬಿಎಸ್ಆರ್ ಅಭ್ಯರ್ಥಿ ಸ್ಪರ್ಧಿಸುವ ಮತಗಟ್ಟೆಯಲ್ಲಿ ಫ್ಯಾನ್ನ್ನು ಮರೆ ಮಾಚುವಂತೆ ಚುನಾವಣಾಧಿಕಾರಿಗಳು ಸೂಚಿಸಿದ್ದರು. ಪಾಲಿಕೆ ವ್ಯಾಪ್ತಿಯ ಕುಳಾಯಿ, ತಣ್ಣೀರುಬಾವಿ ಬೆಂಗ್ರೆ ಪ್ರದೇಶಗಳ ವಾರ್ಡ್ಗಳ ಮತದಾನ ಕೇಂದ್ರಗಳಲ್ಲಿ ಫ್ಯಾನ್ ಮುಕ್ತವಾಗಿ ತಿರುಗುತ್ತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

