ಫೈನಾನ್ಸ್ ಉದ್ಯೋಗಿ ಕೊಲೆ ಅಪರಾಧಿಗೆ ಜೀವಾವಧಿ ಸಜೆ
ಪುತ್ತೂರು: ಕೋಡಿಂಬಾಡಿ ಗ್ರಾಮದ ಅರ್ಬಿ ಎಂಬಲ್ಲಿ 2011ನೇ ಜೂ.4ರಂದು ನಡೆದಿದ್ದ ಮಂಗಳೂರಿನ ಭಾರತ್ ಫೈನಾನ್ಸ್ ಉದ್ಯೋಗಿ ಗಂಗಾಧರ ಆಚಾರ್ಯ ಕೊಲೆ ಪ್ರಕರಣದ ಆರೋಪಿಗೆ ಪುತ್ತೂರಿನ ತ್ವರಿತಗತಿ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಬಂಟ್ವಾಳ ತಾಲೂಕು ಕಲ್ಲಡ್ಕ ಸಮೀಪದ ಗೋಳ್ತಮಜಲು ಗ್ರಾಮದ ಕಾಂಪ್ರಬೈಲು ನಿವಾಸಿ ಕೂಸಪ್ಪ ಯಾನೆ ಮಾಧವ ನಾಯ್ಕ ಯಾನೆ ಗಣೇಶ್ ನಾಯ್ಕ (24) ಶಿಕ್ಷೆಗೊಳಗಾದ ಅಪರಾಧಿ.
ಕೊಲೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು ರು. 5 ಸಾವಿರ ದಂಡ, ಗಂಗಾಧರ ಆಚಾರ್ಯ ಅವರಲ್ಲಿದ್ದ ಹಣ ದರೋಡೆ ಮಾಡಿದ ಅಪರಾಧಕ್ಕಾಗಿ 5 ವರ್ಷಗಳ ಕಠಿಣ ಜೈಲು ಶಿಕ್ಷೆಯ ಜೊತೆಗೆ ರು. 5ಸಾವಿರ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ರು. 10 ಸಾವಿರ ದಂಡ ಹಣವನ್ನು ಗಂಗಾಧರ ಆಚಾರ್ಯ ಪತ್ನಿ ಪಿ.ಬಿ.ಗೀತಾಗೆ ನೀಡುವಂತೆ ಮತ್ತು ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಹೆಚ್ಚುವರಿ ಸದಾ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ.
ಪ್ರಕರಣ ಹೀಗಿದೆ...: ಕೂಸಪ್ಪ ಯಾನೆ ಮಾಧವ ನಾಯ್ಕ ಯಾನೆ ಗಣೇಶ ನಾಯ್ಕ ನಕಲಿ ವಿಳಾಸ ನೀಡಿ ತನ್ನ ಸ್ನೇಹಿತ ಬ್ಯಾಂಕಲ್ಲಿ ಚಿನ್ನ ಅಡವಿರಿಸಿದ್ದು, 'ಅದರ ವಾಯ್ದೆ ಮೀರಿದೆ. ಅದನ್ನು ಬಿಡಿಸಲು ಹಣಬೇಕು. ಚಿನ್ನ ಬಿಡಿಸಿದ ಬಳಿಕ ಮಾರಾಟ ಮಾಡಿ ಹಣ ನೀಡುತ್ತೇನೆ.
ತನಗೆ ಕಮಿಷನ್ ನೀಡಿದರೆ ಸಾಕು' ಎಂದು ಮಂಗಳೂರಿನ ಭಾರತ್ ಫೈನಾನ್ಸ್ನ ಮ್ಯಾನೇರಜ್ ಮೋಹನ್ ಕುಮಾರ್ನ್ನು ನಂಬಿಸಿದ್ದ.
ಅಲ್ಲದೆ ಫೈನಾನ್ಸ್ ಸಿಬ್ಬಂದಿ ಗಂಗಾಧರ ಆಚಾರ್ಯರನ್ನು 2010 ಜೂ.4ರಂದು ರು. 1.15 ಲಕ್ಷ ಹಣದೊಂದಿಗೆ ಪುತ್ತೂರಿಗೆ ಕರೆಸಿಕೊಂಡಿದ್ದ. ಗಂಗಾಧರ ಆಚಾರ್ಯರನ್ನು ಆರೋಪಿ ಅದೇ ದಿನ ರಾತ್ರಿ ಕೋಡಿಂಬಾಡಿಯ ಮನೆಯೊಂದಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ಕೋಡಿಂಬಾಡಿ ಗ್ರಾಮದ ಅರ್ಬಿ ಸಮೀಪ ಕರೆದುಕೊಂಡು ಹೋಗಿದ್ದ.
ಅಲ್ಲಿನ ಪ್ರಯಾಣಿಕರ ಬಸ್ ತಂಗುದಾಣದ ಬಳಿ ಚೂರಿಯಿಂದ ಇರಿದು ಪುತ್ತೂರು ಉಪ್ಪಿನಂಗಡಿ ರಸ್ತೆ ಪಕ್ಕದ ನೀರು ಹರಿಯುವ ಚರಂಡಿಗೆ ದೂಡಿಹಾಕಿದ್ದ. ಕೊಂದ ಬಳಿಕ ಗಂಗಾಧರ ಆಚಾರ್ಯ ಬಳಿಯಿದ್ದ ಹಣದೊಂದಿಗೆ ಪರಾರಿಯಾಗಿದ್ದ ಎಂದು ಆರೋಪಿಸಲಾಗಿತ್ತು.
ಪುತ್ತೂರು ನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು 2011ನೇ ಜೂ.15ರಂದು ಬಂಧಿಸಿ ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ವಾದಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

