ದಕ್ಷಿಣ ಕನ್ನಡ

ರಬ್ಬರ್ ಕೃಷಿಯಲ್ಲಿ ಕೇರಳ ಹಿಂದಿಕ್ಕುವ ವೇಗದಲ್ಲಿ ಕರ್ನಾಟಕ: ಶೀಲಾ ಥಾಮಸ್

Published On :

ಬೆಳ್ತಂಗಡಿ: ಸಹಕಾರಿ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ ಉಜಿರೆ ರಬ್ಬರ್ ಸೊಸೈಟಿ ದ.ಕ. ಜಿಲ್ಲೆಯಷ್ಟೇ ಅಲ್ಲ ಇತರ ಜಿಲ್ಲೆಗಳಲ್ಲೂ ಪ್ರಸಿದ್ಧಿ ಪಡೆದಿದೆ. ಈ ಸಾಧನೆಯಿಂದಾಗಿ ಕರ್ನಾಟಕ ಕೇರಳವನ್ನು ಹಿಂದಿಕ್ಕುವ ರೀತಿಯಲ್ಲಿ ರಬ್ಬರ್ ಬೆಳೆಯಲ್ಲಿ ಮುಂದಡಿಯಿಡುತ್ತಿದೆ ಎಂದು ಕೊಟ್ಟಾಯಂ ರಬ್ಬರ್ ಮಂಡಳಿ ಅಧ್ಯಕ್ಷೆ ಶೀಲಾ ಥಾಮಸ್ ಹೇಳಿದರು.
ಅವರು ಮಂಗಳವಾರ ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ಉಜಿರೆ ಇವರು ಲಾಯಿಲದ ಕೊಯ್ಯೂರು ಕ್ರಾಸ್ ಬಳಿಯಿರುವ ಸಂಘದ ರಬ್ಬರ್ ಸಂಸ್ಕರಣಾ ಘಟಕದ ವಠಾರದಲ್ಲಿ ನೂತನವಾಗಿ ನಿರ್ಮಿಸಿದ ಗೋದಾಮು ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ರಬ್ಬರ್ ಬೆಳೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಮುಖ ಸ್ಥಾನದಲ್ಲಿದೆ. ಹಾಗಿರುವಾಗ ರಬ್ಬರ್ ಮಂಡಳಿಯಲ್ಲಿ ಕನ್ನಡಿಗ ಅಧಿಕಾರಿಗಳು ಇಲ್ಲದಿರುವುದರಿಂದ ಸಂವಹನಕ್ಕೆ ತೊಂದರೆಯಾಗಿರುವುದು ಮಂಡಳಿಯ ಗಮನಕ್ಕೆ ಬಂದಿದೆ. ರಬ್ಬರ್ ಪ್ರಾದೇಶಿಕ ಮಂಡಳಿಯಲ್ಲಿ ಕನ್ನಡಿಗ ಅಧಿಕಾರಿಗಳ ನೇಮಕಕ್ಕೆ ಶೀಘ್ರ ಪ್ರಯತ್ನಿಸಲಾಗುವುದು. ರಬ್ಬರ್ ಬೆಳೆಗಾರರು ಯಾವುದೇ ವಿಷಯಕ್ಕೆ ರಬ್ಬರ್ ಮಂಡಳಿಯನ್ನು ಸಂಪರ್ಕಿಸಬಹುದು. ಬೆಳೆಗಾರರಿಗೆ ಸಲಹೆ, ಮಾರ್ಗದರ್ಶನ ನೀಡಲು ಮಂಡಳಿ ಸದಾ ಸಿದ್ಧವಿದೆ ಎಂದರು.
ದೇಶದಲ್ಲಿ ಭವಿಷ್ಯದಲ್ಲಿ ರಬ್ಬರ್ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದ ಮುಂದಿನ ದಿನಗಳಲ್ಲಿ ರಬ್ಬರ್ ಧಾರಣೆ ಏರಿಕೆಯಾಗುವುದರಲ್ಲಿ ಸಂದೇಹವಿಲ್ಲ. ಇದೀಗ ದೇಶದಲ್ಲಿ ಕೇರಳ ರಬ್ಬರ್ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ ಎಂದರು. ನೂತನವಾಗಿ ನಿರ್ಮಿಸಿದ ವೇಬ್ರಿಡ್ಜ್ ಅನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಲೋರೆನ್ಸ್ ಮಕ್ಕಯಿ ಉದ್ಘಾಟಿಸಿ, ದೇಶದಲ್ಲಿನ ರಬ್ಬರ್ ಉತ್ಪಾದನೆಯ ಶೇ.1ನ್ನು ಬೆಳ್ತಂಗಡಿ ರಬ್ಬರ್ ಬೆಳೆಗಾರರ ಸಂಘ ಉತ್ಪಾದಿಸುತ್ತಿರುವುದು ಶ್ಲಾಘನೀಯ. ಇದರ ಕಾರ್ಯವ್ಯಾಪ್ತಿ ಇಡೀ ದೇಶದಲ್ಲಿ ವಿಸ್ತರಿಸಲಿ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಸಮಸ್ಯೆಗಳಿಗೆ ಸ್ಪಂದನೆ: ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ. ವಸಂತ ಬಂಗೇರ, ನಮ್ಮ ಮುಖ್ಯ ಬೆಳೆಯಾದ ಬತ್ತ, ಅಡಿಕೆಗೆ ಹೆಚ್ಚಿನ ಸ್ಥಾನಮಾನ ಸಿಗಬೇಕಾಗಿದ್ದರೂ ಅದನ್ನು ಮುಖ್ಯ ಬೆಳೆಯಾಗಿಸುವಲ್ಲಿ ಸಹಕಾರಿ ಸಂಘಗಳು ವಿಫಲವಾಗಿವೆ. ಆದರೆ ರಬ್ಬರ್ ಕೃಷಿಯಲ್ಲಿ ಕರ್ನಾಟಕ ಕೇರಳ ಮಾದರಿಯನ್ನು ಅನುಸರಿಸಿ ಮುಖ್ಯ ಬೆಳೆಯಾಗಿಸುವಲ್ಲಿ ಲಾಭದಯಿಕವಾಗಿದ್ದು ಸಹಕಾರಿಯಾಗಿದೆ. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ರಬ್ಬರ್ ಬೆಳೆಗಾರರ ಹಾಗೂ ಸಂಘಗಳ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.
 ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೊಡಿ, ನಬಾರ್ಡ್‌ನ ಪ್ರಕಾಶ್ ರಾವ್, ಚೆನ್ನೈನ ಅಪೊಲೊ ಟಯರ್‌ನ ಮುಖ್ಯ ಪ್ರಬಂಧಕ ಮುರಳಿ ಗೋಪಾಲ್ ಅತಿಥಿಗಳಾಗಿ ಮಾತನಾಡಿದರು.
 ಕೆ.ಎಸ್. ಕೃಷ್ಣ ಶರ್ಮ ಮತ್ತಿತರರು ಇದ್ದರು. ಎಂಜಿನಿಯರ್ ಸದಾನಂದ ಅಂಚನ್, ಗುತ್ತಿಗೆದಾರ ಜಾರ್ಜ್ ಕುರಿಯಕೋಸ್ ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.