ಮೂಲ ಸೌಕರ್ಯ ಬಳಿಕ ಸುಂದರೀಕರಣದೆಡೆ ಗಮನಿಸಿ
ಮಂಗಳೂರು: ವೇಗವಾಗಿ ಬೆಳೆಯುತ್ತಿರುವ ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ. ನಗರವೂ ಬೆಳೆಯುತ್ತಿದೆ ಜತೆಯಲ್ಲಿ ಸಮಸ್ಯೆಯೂ ಕೂಡಾ. ಇಲ್ಲಿ ಆಡಳಿತ ನಡೆಸುವರಿಗೆ ಅನೇಕ ಸವಾಲುಗಳಿವೆ.
ರಾಜಕಾರಣಿ ನಾಳಿನ ಬಗ್ಗೆ ಯೋಚನೆ ಮಾಡುತ್ತಾನೆ ರಾಜತಾಂತ್ರಿಕರು ಮುಂದಿನ ಪೀಳಿಗೆ ಬಗ್ಗೆ ಯೋಚನೆ ಮಾಡುತ್ತಾರೆ. ಅದೇ ರೀತಿ ಮಂಗಳೂರಿನ ಸಮಗ್ರ ಅಭಿವೃದ್ಧಿಗೆ ಪಾಲಿಕೆ ಆಡಳಿತ ಚಿಂತಿಸಬೇಕಿದೆ. ಕುಡಿಯುವ ನೀರು ಇತ್ಯಾದಿ ಕನಿಷ್ಠ ಮೂಲಭೂತ ಸೌಕರ್ಯ ಕೊಟ್ಟ ಬಳಿಕ ಪಾರ್ಕಿಂಗ್, ನಗರ ಸುಂದರೀಕರಣ ಕಡೆ ಗಮನಹರಿಸಬೇಕು. ಫುಟ್ಪಾತ್ ರಚನೆ, ಒಳಚರಂಡಿ ವ್ಯವಸ್ಥೆ ಸುಧಾರಿಸಬೇಕು. ನಗರ ಮಧ್ಯದಲ್ಲಿ ಕೊಳೆತ ಹೋದ ತರಕಾರಿಯಂತಿರುವ ಮಾರುಕಟ್ಟೆಯನ್ನು ಅತ್ಯಾಧುನಿಕವಾಗಿ ಮಾಡಬೇಕಿದೆ. ಇದೆಲ್ಲ ಮಾಡಿದ ಬಳಿಕ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವತ್ತ ಗಮನ ಹರಿಸಬಹುದು.
ತ್ಯಾಜ್ಯಗಳಿಂದ ವಿದ್ಯುತ್, ಕೊಳಚೆ ನೀರು ಶುದ್ಧೀಕರಣ, ಸೌರ ಶಕ್ತಿ ಬಳಕೆ ಇಂಥ ಪರ್ಯಾಯ ಪರಿಹಾರ ಯೋಜನೆಗಳು ಪಾಲಿಕೆಗೆ ಅಗತ್ಯವಾಗಿದೆ. ಪಾಲಿಕೆಯಲ್ಲಿ ಸದ್ಯಕ್ಕೆ ಪ್ರತಿಭಾನ್ವಿತ ಮತ್ತು ದಕ್ಷ ಅಧಿಕಾರಿಗಳ ದಂಡೇ ಇದೆ. ಈ ಅಧಿಕಾರಿಗಳನ್ನು ಬಳಸಿಕೊಂಡು ಸುಧಾರಿತ ಆಡಳಿತ ನೀಡಬಹುದಾಗಿದೆ.
ಬಿಜೆಪಿ ಆಡಳಿತದಲ್ಲಿ ಅಭಿವೃದ್ಧಿ ಕಾಮಗಾರಿಗಳು ಬಹಳಷ್ಟು ನಡೆದಿವೆ. ಮುಗಿಯುವ ಹಂತದಲ್ಲಿದೆ. ಬಿಜೆಪಿ ಅಭಿವೃದ್ಧಿ ಕಾಮಗಾರಿ ಮಾಡದೆ ಸೋತಿದ್ದಾರೆ ಎಂದಾದರೆ ಕಾಂಗ್ರೆಸ್ ಆಡಳಿತ ಇದಕ್ಕಿಂತ ದುಪ್ಪಟ್ಟು ಅಭಿವೃದ್ಧಿ ಮಾಡಿ ತೋರಿಸಬೇಕು. ಇದಕ್ಕಾಗಿ ಸಂಪನ್ಮೂಲ ತರಬೇಕು. ಮಂಗಳೂರಿನ ಜನ ತೆರಿಗೆ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ, ತಮಗೆ ಬೇಕಾದ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳ ನಡವಳಿಕೆ ಬಗ್ಗೆ ಚಿಂತಿಸುತ್ತಾರೆ ಎಂಬುದನ್ನು ಮನದಲ್ಲಿಟ್ಟುಕೊಳ್ಳಬೇಕು.
ಫುಟ್ಪಾತ್ ಕಾಮಗಾರಿ ಮಾಡಲು 40 ಕೋಟಿ ಅನುದಾನ ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ. ಹಣ ಅನುದಾನ ಬಿಡುಗಡೆಯಾದ ತಕ್ಷಣ ಪುಟ್ಪಾತ್ ಕಾಮಗಾರಿಗಳು ಆರಂಭಗೊಳ್ಳಲಿದೆ. 210 ಕೋಟಿ ಒಳಚರಂಡಿ ಕಾಮಗಾರಿ 2 ತಿಂಗಳಲ್ಲಿ ಮುಗಿಯಲಿದೆ. ಬಿಜೆಪಿ ಆಡಳಿತದಲ್ಲಿ ಒಳಚರಂಡಿ ಮತ್ತು ಕುಡಿಯುವ ನೀರು ಸೌಲಭ್ಯಕ್ಕೆ 210 ಕೋಟಿ ಸಾಲ ಮಾಡಿದೆ. ಈ ಸಾಲ ತೀರಿಸಬೇಕು. ತೀರಿಸದಿದ್ದರೆ ಸರ್ಕಾರದ ಅನುದಾನವೆಲ್ಲ ಸಾಲದ ಕಂತಿಗೆ ಪಾವತಿಸುತ್ತದೆ.
ತುಂಬೆ ಡ್ಯಾಮ್ ನಿರ್ಮಾಣಕ್ಕೆ 100 ಕೋಟಿಯಲ್ಲಿ 50 ಕೋಟಿ ಸಾಲ. ತೆರಿಗೆ ಹೆಚ್ಚು ಮಾಡುವುದಿಲ್ಲ ಎಂದು ಪಾಲಿಕೆ ಆಡಳಿತ ಹೇಳಿದರೆ ಸಂಪನ್ಮೂಲ ಎಲ್ಲಿಂದ ತರುತ್ತೇವೆ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು. ನೀವೆ ಹೋಗಿ ಸಾಲ ತೆಗೆದು ತೀರಿಸಿ, ಆಸ್ತಿ ಅಡವಿಟ್ಟು ಸಾಲ ಪಡೆಯಬಹುದು ಎಂದು ರಾಜ್ಯ ಸರ್ಕಾರ ವಿಶೇಷ ಅವಕಾಶ ನೀಡಿದೆ.
ನೀರು ವಿತರಣೆ: ಕುಡಿಯುವ ನೀರು ಬೇಕಾದಷ್ಟಿದೆ, ವ್ಯವಸ್ಥಿತವಾಗಿ ವಿತರಿಸಬೇಕು. ನೀರು ಕಳ್ಳತನ ನಿಲ್ಲಿಸಬೇಕು. ಅದಕ್ಕೆ ಮೀಟರ್ ಹಾಕಿಸಬೇಕು. ವಿತರಣೆ ನೆಟ್ವರ್ಕ್ ಸರಿಪಡಿಸಬೇಕು. ನೀರು ಸೋರಿಕೆ ತಪ್ಪಿಸಲು ಪೈಪ್ಲೇನ್ ದುರಸ್ತಿ ಪಡಿಸಬೇಕು.
2026ಕ್ಕೆ ಮಹಾನಗರ ಬಳಸುವ ನೀರನ್ನು ಈಗಲೇ ಜನ ಬಳಸುತ್ತಿದ್ದಾರೆ. 2026ಕ್ಕೆ 7.5 ಲಕ್ಷ ಜನಸಂಖ್ಯೆ ಆಗಬಹುದು ಎಂಬ ಲೆಕ್ಕಾಚಾರ. ಈಗ 5 ಲಕ್ಷ ಜನ ಇದ್ದಾರೆ. ಆದರೆ ಒಬ್ಬ ವ್ಯಕ್ತಿ 135 ಲೀ. ಬಳಸುವ ಲೆಕ್ಕಾಚಾರದಂತೆ ಈಗ 7.5 ಲಕ್ಷ ಜನರ ನೀರು ಸ್ವಾಹಾ ಆಗುತ್ತಿದೆ. ಜಲಾಶಯದಲ್ಲಿ ನೀರು ಪ್ರಮಾಣ ಕಡಿಮೆಯಾದಾಗ ನೀರು ಬಳಸುವ ಪ್ರಮಾಣ ಕಡಿಮೆ ಮಾಡುವ ತಾಂತ್ರಿಕತೆ ಪಾಲಿಕೆಯಲ್ಲಿ ಇಲ್ಲ.
ಕಸ ವಿಲೇವಾರಿ: ಮನೆ ಮನೆಯಿಂದ ಕಸ ಸಂಗ್ರಹ ಮಾಡಿ ಪಚ್ಚನಾಡಿಗೆ ಹಾಕುವುದು. ಪಚ್ಚನಾಡಿಯಲ್ಲಿ ಕಸದಿಂದ ಗೊಬ್ಬರ ಮಾಡುವುದು. ಎರಡಕ್ಕೂ ಗುತ್ತಿಗೆ ನೀಡಲಾಗಿದೆ. ವರ್ಷಕ್ಕೆ 20 ಕೋಟಿ ಕಸ ತ್ಯಾಜ್ಯ ವಿಲೇವಾರಿಗೆ ಪಾಲಿಕೆ ಖರ್ಚು ಮಾಡುತ್ತದೆ. ಪಚ್ಚನಾಡಿಯಲ್ಲಿ ಕಸದಿಂದ ಗೊಬ್ಬರ ಮಾಡಲು ಏಳು ವರ್ಷಕ್ಕೆ ಗುತ್ತಿಗೆ ನೀಡಲಾಗಿದೆ. ಈ ವ್ಯವಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಲು ಕಾಂಗ್ರೆಸ್ ಆಡಳಿತ ಮುಂದಾಗಬೇಕು.
ಮಲ್ಟಿ ಲೆವೆಲ್ ಪಾರ್ಕಿಂಗ್: ಮಂಗಳೂರಲ್ಲಿ ಟ್ರಾಫಿಕ್ ಜಾಂ ಕಿರಿ ಕಿರಿ ಇಲ್ಲ. ಬೆಂಗಳೂರಿನಂಥ ಮಹಾನಗರಗಳಿಗೆ ಹೋಲಿಸಿದರೆ ಮಂಗಳೂರು ಟ್ರಾಫಿಕ್ ಜಾಂ ಸಮಸ್ಯೆ ದೊಡ್ಡದಾಗಿಲ್ಲ. ಈಗ ಕೈಗಾರಿಕೆಗಳು ಮತ್ತು ಅಪಾರ್ಟ್ಮೆಂಟ್ಗಳು ಬೆಳೆಯುವುದನ್ನು ನೋಡಿದರೆ ಶೀಘ್ರದಲ್ಲಿಯೇ ಟ್ರಾಫಿಕ್ ಜಾಂ ಕೂಡಾ ಬರಬಹುದು. ಆದ್ದರಿಂದ ಮಲ್ಟಿಲೆವೆಲ್ ಪಾರ್ಕಿಂಗ್ ತುರ್ತು ಅಗತ್ಯವಾಗಿದೆ. ಪ್ರತಿ ಕಟ್ಟಡದಲ್ಲಿ ಪಾರ್ಕಿಂಗ್ ಕಡ್ಡಾಯ ಮಾಡಬೇಕು. ಹಿಂದೆ ಪಾರ್ಕಿಂಗ್ ಸೌಲಭ್ಯ ಇಲ್ಲದೆ ನಿರ್ಮಿಸಲಾದ ಕಟ್ಟಡಗಳ ತಳ ಅಂತಸ್ತಲ್ಲಿ ಕಾನೂನು ಬದ್ಧವಾಗಿ ಪಾರ್ಕಿಂಗ್ ನಿರ್ಮಿಸುವಲ್ಲಿ ಪಾಲಿಕೆ ಮುತುವರ್ಜಿ ವಹಿಸಬೇಕು.
ರಿಂಗ್ ರೋಡ್ಗಳು: ಮಂಗಳಾ ಕಾರ್ನಿಶ್ ಯೋಜನೆ ಇನ್ನೂ ಕಾಗದದಲ್ಲಿಯೇ ಇದೆ. ಬೆಳೆಯುತ್ತಿರುವ ಮಂಗಳೂರಿಗೆ ರಿಂಗ್ ರೋಡ್ ಅತ್ಯಗತ್ಯ, ಮೋನೋ ರೈಲು ಪ್ರಸ್ತಾವನೆಯೂ ಇದೆ. ಆದರೆ ಸದ್ಯಕ್ಕೆ ಟ್ರಾಫಿಕ್ ಜಾಮ್ ತಪ್ಪಿಸಲು ರಿಂಗ್ ರೋಡ್ಗಳು ಅತ್ಯಗತ್ಯವಾಗಿದೆ. ಸ್ಥಳಿಯಾಡಳಿತ ಮತ್ತು ಪ್ರತಿನಿಧಿಗಳು ಒಕ್ಕೊರಲಿಂದ ಇದಕ್ಕೆ ಪ್ರಯತ್ನಿಸಬೇಕು. ಸರ್ವೆ ಹಂತದಲ್ಲಿದೆ, ಅದನ್ನು ನಿಯಮ ಬದ್ಧವಾಗಿ ಮಾಡಬೇಕು. ಟ್ರಾಫಿಕ್ ಜಾಮ್ ತಪ್ಪಿಸಲು ಹಂಪನಕಟ್ಟೆ ಪ್ಲೈ ಓವರ್, ನಂತೂರು ಪ್ಲೈ ಓವರ್ ನಿರ್ಮಾಣಕ್ಕೆ ಸ್ಥಳಿಯಾಡಳಿತ ಪ್ರಯತ್ನಿಸಬೇಕು.
ಬಸ್ ನಿಲ್ದಾಣ: ಮಂಗಳೂರು ನಗರದ ಬಸ್ ತಂಗುದಾಣ ದಾನಿಗಳು ಹಾಕಿ ಮೈದಾನಕ್ಕೆಂದು ದಾನವಾಗಿ ನೀಡಿದ್ದು. ತಾತ್ಕಾಲಿಕ ಬಸ್ ತಂಗುದಾಣ ಎಂದು ಮಹಾನಗರ ಪಾಲಿಕೆಯೇ ಹೈಕೋರ್ಟ್ಗೆ ಅಫಿದವಿತ್ ನೀಡಿದೆ. ಆದ್ದರಿಂದ ಪರ್ಯಾಯ ಬಸ್ ತಂಗುದಾಣ ನಿರ್ಮಾಣ ಆಗಬೇಕು. ಬೆಂಗಳೂರಿನ ಮೆಜಿಸ್ಟಿಕ್ಗೆ ಪರ್ಯಾಯವಾಗಿ ಶಿವಾಜಿ ನಗರ, ವಿಜಯನಗರ ಬಸ್ತಂಗುದಾಣ ಮಾಡಿದಂತೆ ಮಂಗಳೂರಲ್ಲಿಯೂ ಕೂಳೂರು, ಮಂಗಳಾದೇವಿ, ಪಂಪ್ವೆಲ್ಗಳಲ್ಲಿ ಪ್ರತ್ಯೇಕ ಬಸ್ ನಿಲ್ದಾಣ ಮಾಡಿದರೆ ನಗರ ಹೃದಯಭಾಗದಲ್ಲಿ ವೃಥಾ ಟ್ರಾಫಿಕ್ ಜಾಮ್ ತಪ್ಪಲಿದೆ.
ಕಾನೂನು ಭಂಗ ಬೇಡ: ಜನರ ಸೇವೆ ಹೆಸರಲ್ಲಿ ಕಾನೂನು ಉಲ್ಲಂಘಿಸಿ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸಕ್ಕೆ ಮುಂದಾದರೆ ಆಡಳಿತ ಹದ ತಪ್ಪುವ ಸಾಧ್ಯತೆಗಳಿವೆ. ಪ್ರಣಾಳಿಕೆಯಲ್ಲಿ ಹೇಳಿದಂತೆ 2 ಸಾವಿರ ಚದರಡಿ ವಿಸ್ತೀರ್ಣದೊಳಗಿನ ಮನೆ ನಿರ್ಮಾಣಕ್ಕೆ ಪಾಲಿಕೆಯಿಂದಲೇ ಪರವಾನಗಿ ನೀಡುವ ನಿಯಮ ಮತ್ತೆ ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ. ಗೆದ್ದ ಬಳಿಕ ಪೂಜಾರಿ ಅವರು, ಬಿಜೆಪಿ ಆಡಳಿತದ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಬಳಿ ತಿದ್ದುಪಡಿಗೆ ಒತ್ತಾಯಿಸುತ್ತೇವೆ, ಇಲ್ಲವಾದರೆ ಹೋರಾಟ ನಡೆಸುತ್ತೇವೆ ಎಂಬ ಮಾತುಗಳನ್ನಾಡಿದ್ದಾರೆ. ಜನರು ಹೋರಾಟ ಮಾಡಿ ಎಂದು ಹೇಳುತ್ತಿಲ್ಲ, ಜಾರಿಗೆ ಬಂದರೆ ಸಾಕು. ಪ್ರಣಾಳಿಕೆಯಲ್ಲಿ ಸೇರಿಸಿದ ಮೇಲೆ ಈಡೇರಿಸದೆ ಬಡ ಮತದಾರರಿಗೆ ಮಂಗ ಮಾಡಬಾರದು.
ಈಗಲೇ ನರ್ಮ್ ಬರಲಿ: ತಕ್ಷಣವೇ ನರ್ಮ್ ಯೋಜನೆಯಡಿ ಮಂಗಳೂರು ಪಾಲಿಕೆಯನ್ನು ಸೇರಿಸಿದರೆ ಮಾತ್ರ ಕಾಂಗ್ರೆಸ್ ನಗರವನ್ನು ಅಭಿವೃದ್ಧಿ ಪಥದಲ್ಲಿ ಒಯ್ಯಬಹುದು. ನರ್ಮ್ನ 600 ಕೋಟಿ ಅನುದಾನದಲ್ಲಿ ಪ್ರತಿ ವರ್ಷಕ್ಕೆ 100 ಕೋಟಿ ಖರ್ಚು ಮಾಡಬಹುದು. ಲೋಕಸಭೆ ಚುನಾವಣೆ ಬಳಿಕ ಕೇಂದ್ರದಲ್ಲಿ ಯಾರು ಆಡಳಿತಕ್ಕೆ ಬರುತ್ತಾರೆ ಎನ್ನುವಂತಿಲ್ಲ. ಈ ವರ್ಷದಲ್ಲೇ ನರ್ಮ್ ಯೋಜನೆಗೆ ಪ್ರಯತ್ನಿಸಬೇಕು.
ಆಡಳಿತ ಸುಧಾರಣೆ: ಕಾನೂನಲ್ಲಿ ಹೇಳಿರುವಂತೆ 60 ವಾರ್ಡ್ಗಳಲ್ಲಿಯೂ ವಾರ್ಡ್ ಸಮಿತಿ ಮಾಡಬೇಕು. ಇದರಲ್ಲಿ ವಾರ್ಡ್ನ ಆಯ್ದ ಹತ್ತು ಮಂದಿ ಇರುತ್ತಾರೆ. ವಾರ್ಡ್ನಲ್ಲಿ ಅನುದಾನ ಹೇಗೆ ಬಳಸಬಹುದು ಎಂಬ ಬಗ್ಗೆ ಅವರೇ ಸ್ಥಾಯಿ ಸಮಿತಿಗೆ ಶಿಫಾರಸು ಮಾಡುತ್ತಾರೆ. ಅಲ್ಲಿಂದ ಟೆಂಡರ್ ಪ್ರಕ್ರಿಯೆಗೆ ಹೋಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

