ಮೂಡುಬಿದಿರೆ ಕ್ಷೇತ್ರ: ಕಾಂಗ್ರೆಸ್, ಜೆಡಿಎಸ್ ನಡುವೆ ಬಿಜೆಪಿ ಸೆಣಸು
ಮೂಲ್ಕಿ: ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಾಯಕ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿಯವರು ಸ್ಪರ್ಧಿಸುತ್ತಿದ್ದರೆ, ಕ್ಷೇತ್ರದ ಶಾಸಕ ಕೆ. ಅಭಯಚಂದ್ರ ಜೈನ್ ಅವರು ಸತತ ನಾಲ್ಕನೇ ಬಾರಿಗೆ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಿದ್ದಾರೆ.
ಬಿಜೆಪಿಯು ಕಳೆದ ಹಲವಾರು ವರ್ಷಗಳಿಂದ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ, ಯಶಸ್ವಿಯಾಗಿಲ್ಲ. ಈ ಬಾರಿಯು ಕೂಡ ಪಕ್ಷದಿಂದ ಟಿಕೆಟ್ಗೆ ಹೆಚ್ಚಿನ ಆಕಾಂಕ್ಷಿಗಳಿದ್ದು, ಟಿಕೆಟ್ ಸಿಗದಿದ್ದಲ್ಲಿ ಬಂಡಾಯವಾಗಿ ಸ್ಪರ್ಧಿಸುವ ಅಥವಾ ತೆರೆ ಮರೆಯಲ್ಲಿ ಕಾರ್ಯ ನಡೆಸುವ ಸಾಧ್ಯತೆಯಿದೆ.
ಕ್ಷೇತ್ರ ಇತಿಹಾಸ: 1952ರಿಂದ 62 ರವರೆಗೆ ಸುರತ್ಕಲ್ ಕ್ಷೇತ್ರದಲ್ಲಿದ್ದ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರವು 1967ರ ಚುನಾವಣೆಯಲ್ಲಿ ಮೂಲ್ಕಿ- ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರವಾಗಿ ಮಾರ್ಪಟಿದ್ದು, ಅಂದಿನಿಂದ ಇಂದಿನವರೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬಿಟ್ಟಲ್ಲಿ ಕೇವಲ ಜೆಡಿಎಸ್ನ ಕೆ. ಅಮರನಾಥ ಶೆಟ್ಟಿಯವರು ಮೂರು ಭಾರಿ ಜಯಗಳಿಸಿದ್ದಾರೆ. ಬೇರೆ ಪಕ್ಷಕ್ಕೆ ಇಲ್ಲಿ ಈವರೆಗೆ ಜಯ ಸಿಕ್ಕಿಲ್ಲ.
1952ರಲ್ಲಿ ಸಂಸ್ತಾ ಕಾಂಗ್ರೆಸ್ನ ಬಿ.ಆರ್. ಕರ್ಕೇರ, 1957ರಲ್ಲಿ ಸಂಸ್ತಾ ಕಾಂಗ್ರೆಸ್ನ ಧೂಮಪ್ಪ, 1962ರಲ್ಲಿ ಪ್ರಜಾ ಸೋಷ್ಯಲಿಸ್ಟ್ ಪಕ್ಷದ ಡಾ. ಸಂಜೀವನಾಥ ಐಕಳ ಜಯಗಳಿಸಿದ್ದರು. 1967ರಲ್ಲಿ ಮೂಲ್ಕಿ- ಮೂಡುಬಿದಿರೆ ವಿಧಾನಸಭಾ ಕ್ಷೇತ್ರವಾಗಿ ಪರಿವರ್ತನೆಯಾಗಿದ್ದು, 1967ರಲ್ಲಿ ಕಾಂಗ್ರೆಸ್ನಿಂದ ರತನ್ ಕುಮಾರ್ ಕಟ್ಟೆಮಾರ್ ಜಯಗಳಿಸಿದ್ದು, 1972ರಿಂದ ಜನತಾ ಪಕ್ಷದ ಕೆ. ಅಮರನಾಥ ಶೆಟ್ಟಿ ಸ್ಪರ್ಧಿಸಲು ಆರಂಭಿಸಿದರು.
1972 ಹಾಗೂ 1978ರಲ್ಲಿ ಕಾಂಗ್ರೆಸ್ನಿಂದ ಡಾ. ದಾಮೋದರ ಮೂಲ್ಕಿ ಜಯಗಳಿಸಿದ್ದು, 1983 ಹಾಗೂ 85ರಲ್ಲಿ ಕೆ. ಅಮರನಾಥ ಶೆಟ್ಟಿ ಜಯಗಳಿಸಿದ್ದರು. 1990ರಲ್ಲಿ ಕಾಂಗ್ರೆಸ್ನ ಕೆ. ಸೋಮಪ್ಪ ಸುವರ್ಣ, 1994ರಲ್ಲಿ ಜೆಡಿಎಸ್ನ ಕೆ. ಅಮರನಾಥ ಶೆಟ್ಟಿ ಜಯಗಳಿಸಿದ್ದು, 1999, 2004 ಹಾಗೂ 2008ರಲ್ಲಿ ಅಭಯಚಂದ್ರ ಜೈನ್ ನಿರಂತರವಾಗಿ ಜಯಗಳಿಸಿದ್ದಾರೆ.
ಅಮರನಾಥ ಶೆಟ್ಟಿ: ಜೆಡಿಎಸ್ನ ಕೆ. ಅಮರನಾಥ ಶೆಟ್ಟಿಯವರು ಬಂಟ ಸಮುದಾಯದ ನಾಯಕರಾಗಿದ್ದು, ತನ್ನ ಸ್ವಂತ ವರ್ಚಸ್ಸಿನಿಂದ ಮೂಡುಬಿದಿರೆ ಕ್ಷೇತ್ರದಲ್ಲಿ ಗೆದ್ದಿದ್ದು, ಪ್ರತಿ ಚುನಾವಣೆಯಲ್ಲಿ ಸುಮಾರು 25000 ಮತವನ್ನು ಪಡೆಯುತ್ತಾ ಬಂದಿದ್ದಾರೆ. 1972ರಿಂದ ನಿರಂತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, 1972ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದು, ಅಂದಿನಿಂದ ಇಂದಿನವರೆಗೆ ಜನತಾ ಪಕ್ಷ ಇಬ್ಭಾಗವಾಗುತ್ತ ಬಂದಿದ್ದರೂ ಜನತಾ ಪಕ್ಷವನ್ನು ಬಿಟ್ಟಿಲ್ಲ. ಈಗ ಜೆಡಿಎಸ್ನಿಂದ ಸ್ಪರ್ಧಿಸುತ್ತಿದ್ದಾರೆ.
ಅಭಯಚಂದ್ರ ಜೈನ್: 1983, 1985 ಹಾಗೂ 1994ರಲ್ಲಿ ಜಯಗಳಿಸಿದ್ದು, 1999ರಿಂದ ಕಾಂಗ್ರೆಸ್ನಿಂದ ಕೆ. ಅಭಯಚಂದ್ರ ಜೈನ್ ಸ್ಪರ್ಧಿಸಿದ ಬಳಿಕ ಸತತವಾಗಿ ಮೂರು ಬಾರಿ ಸೋತಿದ್ದು, 1999 ಹಾಗೂ 2004ರಲ್ಲಿ 2ನೇ ಸ್ಥಾನಗಳಿಸಿದ್ದಾರೆ. 2008ರಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ. ಅವರು 2008ರಲ್ಲಿ 26,083 ಮತವನ್ನು, ದ್ವಿತೀಯ ಸ್ಥಾನ ಪಡೆದ ಬಿಜೆಪಿಯ ಕೆ.ಪಿ. ಜಗದೀಶ್ ಅಧಿಕಾರಿ 34,841 ಮತವನ್ನು ಪಡೆದಿದ್ದರು.
ಬಿಲ್ಲವ ಮತ್ತು ಬಂಟ ಸಮುದಾಯದ ನಡುವೆ 1972ರಿಂದ1983ರವರೆಗೆ ಹಾಗೂ 1990ರಿಂದ 1994ರವರಗೆ ನೇರ ಸ್ಪರ್ಧೆ ನಡೆಯುತ್ತಿದ್ದು, 1999ರಲ್ಲಿ ಕಾಂಗ್ರೆಸ್ನ ಮಾಜಿ ಶಾಸಕ ಕೆ. ಸೋಮಪ್ಪ ಸುವರ್ಣ ತನ್ನ ಸ್ಥಾನವನ್ನು ಅಭಯಚಂದ್ರ ಜೈನ್ಗೆ ಬಿಟ್ಟು ಕೊಟ್ಟ ನಂತರ ಬಿಲ್ಲವ ಸಮುದಾಯದ ಬೆಂಬಲದೊಂದಿಗೆ ಸತತವಾಗಿ 1999ರಿಂದ 2008ರವರೆಗೆ ಮೂರು ಚುನಾವಣೆಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಬಿಜೆಪಿ ಆಕಾಂಕ್ಷಿಗಳು...: ಈ ಬಾರಿ ಬಿಲ್ಲವ ಸಮುದಾಯದ ಮತವನ್ನು ಸೆಳೆಯಲು ಬಿಜೆಪಿಯಿಂದ ಬಿಲ್ಲವ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ಬಿಜೆಪಿಯಿಂದ ಬಿಲ್ಲವ ಸಮುದಾಯದವರಾದ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲು, ಹಿಂದೂ ಜಾಗರಣಾ ವೇದಿಕೆಯ ಸತ್ಯಜಿತ್ ಸುರತ್ಕಲ್ ಮತ್ತು ಸತೀಶ್ ಭಟ್ ಕೊಳುವೈಲು ಹಳೆಯಂಗಡಿ, ಸಂಸದ ನಳಿನ್ ಕುಮಾರ್ ಕಟೀಲು ಕೂಡ ಆಕಾಂಕ್ಷಿಯಾಗಿದ್ದಾರೆ.
ಕಳೆದ ಬಾರಿ ದ್ವಿತೀಯ ಸ್ಥಾನಗಳಿಸಿದ ಕೆ.ಪಿ. ಜಗದೀಶ್ ಅಧಿಕಾರಿ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದು, ಟಿಕೆಟ್ ಸಿಗದಿದ್ದಲ್ಲಿ ಕೆಜೆಪಿಯತ್ತ ವಾಲುವ ಸಾಧ್ಯತೆಯಿದೆ. ಕ್ಷೇತ್ರದಲ್ಲಿ ಎಸ್ಡಿಪಿಐ ಸ್ಪರ್ಧಿಸುವ ಸಾಧ್ಯತೆಯಿದ್ದು, ಎಸ್ಡಿಪಿಐ ಸ್ಪರ್ಧಿಸಿದಲ್ಲಿ ಕಾಂಗ್ರೆಸ್ಗೆ ಹೊಡೆತ ಬೀಳುವ ಸಾಧ್ಯತೆಯಿದೆ.
- ಪ್ರಕಾಶ್ ಮೂಲ್ಕಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

