ತಮಿಳು ಕಾರ್ಮಿಕರಿಂದ ತಾಲೂಕು ಕಚೇರಿ ಮುತ್ತಿಗೆ
ಸುಳ್ಯ: ಸುಳ್ಯ ಮತ್ತು ಪುತ್ತೂರು ತಾಲೂಕಿನಲ್ಲಿರುವ ತಮಿಳು ಪುನರ್ವಸತಿ ದಾರರಿಗೆ ಜಾತಿ ಪ್ರಮಾಣಪತ್ರ ನೀಡಬೇಕು, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಅವರಿಗೆ ನೀಡಲಾಗಿರುವ ವಸತಿ ಗೃಹದಿಂದ ಎಬ್ಬಿಸಬಾರದು ಮತ್ತು ಮೂರನೇ ತಲೆಮಾರಿಗೆ ಕೂಡ ಉದ್ಯೋಗ ನೀಡಬೇಕು ಮೊದಲಾದ ಬೇಡಿಕೆ ಮುಂದಿರಿಸಿ ತಮಿಳು ಕಾರ್ಮಿಕರು ಆರಂಭಿಸಿರುವ ಅಹೋರಾತ್ರಿ ಧರಣಿ 11ನೇ ದಿನಕ್ಕೆ ಕಾಲಿಟ್ಟಿದೆ.
ಪ್ರತಿಭಟನೆಗೆ ಸಮರ್ಪಕ ಸ್ಪಂದನೆ ಬಾರದಿರುವುದನ್ನು ಖಂಡಿಸಿ ಕಾರ್ಮಿಕರು ಸೋಮವಾರ ಕೆಲಸ ಬಹಿಷ್ಕರಿಸಿ ನಗರದಲ್ಲಿ ಬೃಹತ್ ರ್ಯಾಲಿ ನಡೆಸಿದರಲ್ಲದೆ, ಸುಳ್ಯ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು. ಕಾಂಗ್ರೆಸ್, ಜೆಡಿಎಸ್ ಇದಕ್ಕೆ ಬೆಂಬಲ ನೀಡಿದ್ದರೆ, ಬಿಜೆಪಿ ದೂರ ಉಳಿದಿತ್ತು.
ಮೆರವಣಿಗೆ: ಸುಳ್ಯದ ಶಾಸ್ತ್ರೀ ವೃತ್ತ ಬಳಿಯಿಂದ ಕಾರ್ಮಿಕರ ಮೆರವಣಿಗೆ ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ತಾಲೂಕು ಕಚೇರಿ ಎದುರು ಸಮಾವೇಶಗೊಂಡಿತು.
ನೂರಾರು ಸಂಖ್ಯೆಯಲ್ಲಿ ಸೇರಿದ ಕಾರ್ಮಿಕರು ಆಕ್ರೋಶಿತರಾಗಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರೂ ಇತರ ನಾಯಕರು ಅವರನ್ನು ಸಮಾಧಾನಪಡಿಸಿದರು.
ಬಳಿಕ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡ ಚಂದ್ರಲಿಂಗಂ, ನಮ್ಮ ಹೋರಾಟ ಸರ್ಕಾರ ಮತ್ತು ಅದರ ಅಧಿಕಾರಿಗಳ ವಿರುದ್ಧ. ನಮಗೆ ಯಾವ ರಾಜಕೀಯ ಉದ್ದೇಶವೂ ಇಲ್ಲ. ಆದರೆ ನಮ್ಮ ಬೇಡಿಕೆ ಇವತ್ತು, ನಾಳೆ ಈಡೇರುತ್ತದೆ ಎಂದು ನಮ್ಮನ್ನು ಢೋಂಗಿ ಮಾಡಿದ್ದೀರಿ. ನಮಗೆ ಯಾರು ಬೆಂಬಲ ಕೊಡುತ್ತಾರೋ ಅವರನ್ನು ನಾವು ಬೆಂಬಲಿಸುತ್ತೇವೆ. ಇವತ್ತೇ ಆದೇಶ ತಂದು ತೋರಿಸಿದರೂ ನಾವು ಹೋರಾಟ ಹಿಂತೆಗೆದುಕೊಳ್ಳುತ್ತೇವೆ. ಇಲ್ಲದೇ ಹೋದರೆ ಜೈಲಿಗೆ ಹೋದರೂ ಹೋರಾಟ ಕೊನೆಗೊಳಿಸುವುದಿಲ್ಲ ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವವರೆಗೂ ನಾವು ಇಲ್ಲಿಂದ ತೆರಳುವುದಿಲ್ಲ. ಬೇಕಾದರೆ ನಮ್ಮನ್ನು ಬಂಧಿಸಿ ಎಂದು ನಾಯಕರು ಘೋಷಿಸಿದರು.
ನಾಯಕರ ಬೆಂಬಲ: ಕಾರ್ಮಿಕರ ಬೇಡಿಕೆ ಈಡೇರಿಸಲು ನಾವು ರಾಸ್ತಾರೋಕೋ ನಡೆಸಲೂ ಸಿದ್ಧರಿದ್ದೇವೆ ಎಂದು ಕಾಂಗ್ರೆಸ್ ನಾಯಕ ಧನಂಜಯ ಅಡ್ಪಂಗಾಯ ಹೇಳಿದರು.
ಸಮಸ್ಯೆ ಬಗೆಹರಿಸಲು ವಿಫಲರಾದ ಕೆಎಫ್ಡಿಸಿ ಅಧ್ಯಕ್ಷರು ಎ.ಸಿ.ಕಾರಿನಲ್ಲಿ ತಿರುಗಾಡುವುದನ್ನು ಬಿಟ್ಟು ತನ್ನ ಸ್ಥಾನಕ್ಕೆ ರಾಜಿ ನಾಮೆ ನೀಡಲಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಸವಾಲು ಹಾಕಿದರು.
ಕಾರ್ಮಿಕರ ಪರವಾಗಿ ಜಯಕರ್ನಾಟಕ ಸಂಘಟನೆಯ ಲಕ್ಷಾಂತರ ಕಾರ್ಯಕರ್ತರು ಬೀದಿಗಿಳಿಯಲಿದ್ದಾರೆ ಎಂದು ನೆಲ್ಲಿಕಟ್ಟೆ ಜಗದೀಶ ಶೆಟ್ಟಿ ಎಚ್ಚರಿಸಿದರು.
ಮುತ್ತಿಗೆ: ಸಂಜೆಯಾಗುತ್ತಿದ್ದರೂ ಜಿಲ್ಲಾಧಿಕಾರಿ ಬಾರದಿರುವುದು ಮತ್ತು ತಹಸೀಲ್ದಾರ್ರಿಂದ ಸ್ಪಂದನೆ ಬಾರದಿದ್ದುದರಿಂದ ಆಕ್ರೋಶಗೊಂಡ ಕಾರ್ಮಿಕರು ಮತ್ತು ರಾಜಕೀಯ ನಾಯಕರು ತಾಲೂಕು ಕಚೇರಿಯ ಗೇಟು ಮುರಿದು ಆವರಣ ಪ್ರವೇಶಿಸಿದರು. ಕೂಡಲೇ ಎಚ್ಚೆತ್ತ ಪೊಲೀಸರು ಮುಖ್ಯ ಬಾಗಿಲು ಬಂದ್ ಮಾಡಿ ಒಳಗೆ ಹೋಗದಂತೆ ತಡೆದರು.
ಆತ್ಮಹತ್ಯೆ ಘೋಷಣೆ: ಉದ್ರಿಕ್ತ ಗುಂಪು ಬಹಳ ಹೊತ್ತು ಅಲ್ಲೇ ಘೋಷಣೆ ಕೂಗತೊಡಗಿತು. ಬೇಡಿಕೆ ಈಡೇರದಿದ್ದರೆ ಇಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಕೆಲವರು ಘೋಷಿಸಿಕೊಂಡರು.
ಕರ್ತವ್ಯ ನಿಮಿತ್ತ ಮಂಗಳೂರಿಗೆ ತೆರಳಿದ್ದ ಸರ್ಕಲ್ ಇನ್ಸ್ಪೆಕ್ಟರ್ ಸುದರ್ಶನ್ ಸ್ಥಳಕ್ಕೆ ಆಗಮಿಸಿದ ಬಳಿಕ ಮುಖಂಡರು ತಹಸೀಲ್ದಾರೊಂದಿಗೆ ಮಾತುಕತೆ ನಡೆಸಿದರು. ಅಲ್ಲಿಂದಲೇ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಲಾಯಿತು.
ಎರಡು ದಿನದಲ್ಲಿ ಅವರು ಸುಳ್ಯಕ್ಕೆ ಬರುವಾಗ ಅವರನ್ನು ಭೇಟಿ ಮಾಡಿವುದೆಂದೂ ಅಲ್ಲಿವರೆಗೆ ಧರಣಿ ಮುಂದುವರಿಸುವುದೆಂದೂ ನಿರ್ಧರಿಸಲಾಯಿತು.
ತಮ್ಮ ಬೇಡಿಕೆ ಈಡೇರದಿದ್ದರೆ ಮತ್ತೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕುವುದಾಗಿ ಮುಖಂಡರು ಘೋಷಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

