ಕಾರು ಡಿಕ್ಕಿಯಾಗಿ ಬಾಲಕಿಗೆ ಗಾಯ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕೆಮ್ಮಾರ ಎಂಬಲ್ಲಿ ರಸ್ತೆ ದಾಟುತ್ತಿದ್ದ ಬಾಲಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ನಿಶಾನ (6) ಎಂಬಾಕೆ ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ಕೆಮ್ಮಾರದ ಬಡ್ಡಮೆ ನಿವಾಸಿ ಜಲೀಲ್ ಎಂಬವರ ಪುತ್ರಿ ನೀಶಾನ ಆತೂರು ಬಳಿಯ ಬದ್ರಿಯಾ ಖಾಸಗಿ ಶಾಲೆಯಿಂದ ಜೀಪಿನಲ್ಲಿ ಮನೆ ಬಳಿಗೆ ಬಂದವಳು, ರಸ್ತೆ ದಾಟುತ್ತಿದ್ದಂತೆಯೇ ಎದುರಿನಿಂದ ಬಂದ ಮಾರುತಿ ಕಾರು ಡಿಕ್ಕಿ ಹೊಡೆಯಿತು. ಗಂಭೀರವಾಗಿ ಗಾಯಗೊಂಡ ಆಕೆಯನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಪೋಲಿಸುರು ಕೇಸು ದಾಖಲಿಸಿದ್ದಾರೆ.
ಬೆಳ್ಮಣ್ಣಿನಲ್ಲಿ ಬೆಂಕಿ ಆಕಸ್ಮಿಕ
ಕಾರ್ಕಳ: ತಾಲೂಕಿನ ಬೆಳ್ಮಣ್ಣು ಸಂತ ಜೋಸೆಫ್ ಚರ್ಚ್ನ ಮುಂಭಾಗದಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಸಮೀಪ ಸೋಮವಾರ ಸಂಜೆ ಬೆಂಕಿ ಆಕಸ್ಮಿಕ ಸಂಭವಿಸಿ, ರಸ್ತೆ ಅಗಲೀಕರಣದ ಪ್ರಯುಕ್ತ ಕತ್ತರಿಸಿ ಹಾಕಲಾಗಿದ್ದ ಮರದ ಬೊಡ್ಡೆಗಳಿಗೆ ಬೆಂಕಿ ತಗಲಿತು. ಈ ಬೆಂಕಿ ಪರಿಸರದಲ್ಲಿ ವ್ಯಾಪಿಸಲಾರಂಭಿಸಿದಾಗ ಸ್ಥಳಕ್ಕೆ ಧಾವಿಸಿ ಬಂದ ಕಾರ್ಕಳ ಅಗ್ನಿಶಾಮಕ ದಳದ ಠಾಣಾಧಿಕಾರಿ ಕೆ. ವಿ. ನವೀನ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ಬೆಂಕಿಯನ್ನು ಆರಿಸಿ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದರು.
ಮನೆಯಿಂದ ಹಣ, ಆಭರಣ ಕಳವು
ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಮಠಂತಬೆಟ್ಟು ದೇವಾಲಯದ ದ್ವಾರದ ಬಳಿಯಲ್ಲಿನ ಮನೆಯೊಂದರಿಂದ ಹಣ ಮತ್ತು ಆಭರಣ ಕಳವಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಬೆಳ್ಳಿಪ್ಪಾಡಿ ಗ್ರಾಮದ ಮಠಂತಬೆಟ್ಟು ದ್ವಾರದ ಬಳಿಯ ನಿವಾಸಿ ಅಬೂಬಕ್ಕರ್ ಎಂಬವರ ಮನೆಯಿಂದ ಕಳ್ಳತನ ನಡೆದಿದೆ. ಭಾನುವಾರ ತಡರಾತ್ರಿಯ ವೇಳೆ ಮನೆಯ ಹಿಂಬಾಗಿಲಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಮಂದಿಗೆ ಗೋಚರವಾಗದ ರೀತಿಯಲ್ಲಿ ಮನೆಯ ಕೋಣೆಯೊಂದರೊಳಗಿದ್ದ 3 ಪವನ್ ಚಿನ್ನಾಭರಣ ಮತ್ತು ರು. 30 ಸಾವಿರ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಘಟನೆಯ ಕುರಿತು ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅನಾರೋಗ್ಯ: ವ್ಯಕ್ತಿ ಆತ್ಮಹತ್ಯೆ
ಬೈಂದೂರು: ಇಲ್ಲಿನ ಯಡ್ತೆರೆ ಗ್ರಾಮದ ಯೋಜನಾ ನಗರದಲ್ಲಿ ಅನಾರೋಗ್ಯದ ಕಾರಣ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಮುಂಜಾನೆ ನಡೆದಿದೆ. ಮೃತರು ರಾಮ ಭಂಡಾರಿ (65), ವೃತ್ತಿಯಲ್ಲಿ ಕ್ಷೌರಿಕರಾಗಿದ್ದು, ಕಳೆದ 20 ವರ್ಷಗಳಿಂದ ಮನೆಯವರಿಂದ ದೂರವಾಗಿ ಇಲ್ಲಿನ ವಿದ್ಯಾನಗರದ ಸ್ಮಶಾನದ ಬಳಿಯ ನಿವಾಸಿ ಯಶೋಧ ಎಂಬವರೊಂದಿಗೆ ವಾಸವಾಗಿದ್ದರು. ಇತ್ತೀಚೆಗೆ ಅವರ ಆರೋಗ್ಯ ಸರಿಯಿಲ್ಲದಿರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸೋಮವಾರ ಮುಂಜಾನೆ 1 ಗಂಟೆಗೆ ವಿದ್ಯಾನಗರದ ನಾಕಟ್ಟೆ ಸೇತುವೆಯ ಬಳಿ ಬಂದು ಯಾವುದೋ ವಿಷ ಪದಾರ್ಥ ಸೇವಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರ ಮಗ ಪ್ರವೀಣ್ ಭಂಡಾರಿ ಅವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಾಸೆಬೈಲು: ಮಹಿಳೆ ಆತ್ಮಹತ್ಯೆ
ಅಮಾಸೆಬೈಲು: ಇಲ್ಲಿನ ರಟ್ಟಾಡಿ ಗ್ರಾಮದ ಹೊರ್ಲಿಜೆಡ್ಡು ಎಂಬಲ್ಲಿ ಮಹಿಳೆಯೊಬ್ಬರು ಅನಾರೋಗ್ಯದ ಕಾರಣ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮುಂಜಾನೆ ನಡೆದಿದೆ. ಮೃತರಾದ ಗಿರಿಜ (60) ಕಳೆದ 6 ತಿಂಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಉಡುಪಿಯಲ್ಲಿ ಚಿಕಿತ್ಸೆಯ ನಂತರ ಬೆಂಗಳೂರಿನಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗಿತ್ತು. ತಿಂಗಳ ಹಿಂದೆ ವಾಪಾಸ್ಸು ಮನೆಗೆ ಕರೆದುಕೊಂಡು ಬಂದಾಗ ಮತ್ತೆ ಮಾನಸಿಕ ಕಾಯಿಲೆ ಉಲ್ಬಣವಾಗಿದ್ದು ಯಾರ ಹತ್ತಿರ ಮಾತನಾಡದೇ ಮೌನವಾಗಿರುತ್ತಿದ್ದರು. ಸೋಮವಾರ ಮುಂಜಾನೆ 4 ಗಂಟೆಗೆ ಸುಮಾರಿಗೆ ಮನೆಯ ಹಿಂದಿನ ಗೇರು ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರ ಮಗ ನಾಗರಾಜ ನೀಡಿದ ದೂರಿನಂತೆ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನುಮಾನಾಸ್ಪದ ವ್ಯಕ್ತಿಯ ಬಂಧನ
ಮೂಲ್ಕಿ: ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗಿನ ಅವಧಿಯಲ್ಲಿ ಕಿನ್ನಿಗೋಳಿ ಮಾರ್ಕೆಟ್ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಮೂಲ್ಕಿ ಪೋಲಿಸರು ಬಂಧಿಸಿ ವಿಚಾರಿಸಿದಾಗ ಸಮರ್ಪಕ ಉತ್ತರ ನೀಡಲಿಲ್ಲ. ಈ ವ್ಯಕ್ತಿ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಧರ್ಮಪ್ಪ ಪೂಜಾರಿಯವರ ಮಗ ಸತೀಶ್ ಪೂಜಾರಿ ಎಂದು ವಿಚಾರಣೆಯಿಂದ ತಿಳಿದು ಬಂದಿದ್ದು ದುರುದ್ದೇಶದಿಂದ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದರು ಎನ್ನಲಾಗಿದೆ. ಅವರನ್ನು ಮಂಗಳೂರಿನ ತಾಲೂಕು ದಂಡಾಧಿಕಾರಿಯವರ ಮುಂದೆ ಹಾಜರುಪಡಿಸಲಾಗಿದೆ.
ಆಟೋ ಡಿಕ್ಕಿ: ಬೈಕ್ ಹಿಂಬದಿ ಸವಾರೆಗೆ ಗಾಯ
ವಿಟ್ಲ: ಉಕ್ಕುಡ ಎಂಬಲ್ಲಿ ಬೈಕೊಂದಕ್ಕೆ ಅಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಸವಾರರಿಗೆ ಗಾಯವಾದ ಘಟನೆ ಸೋಮವಾರ ನಡೆದಿದೆ. ಕನ್ಯಾನ ಗೌರೀಶಂಕರ ಮತ್ತು ಅವರ ಪತ್ನಿ ಇಂದಿರಾ (31) ಸಾಗುತ್ತಿದ್ದ ಬೈಕ್ಗೆ ಶಿವಪ್ಪ ಎಂಬವರಿಗೆ ಸೇರಿದ ರಿಕ್ಷಾ ಡಿಕ್ಕಿ ಹೊಡೆದಿದೆ. ಗಾಯಗೊಂಡ ಇಂದಿರಾ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

