ದಕ್ಷಿಣ ಕನ್ನಡ

ರಸ್ತೆ ಅಭಿವೃದ್ಧಿ ಕಾಮಗಾರಿಗೆ ನೀತಿಸಂಹಿತೆ ಅಡ್ಡಿ

Published On :

ಗೋಣಿಕೊಪ್ಪಲು: ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಟೆಂಡರ್ ಪ್ರಕ್ರಿಯೆ ನಡೆದರೂ ವೀರಾಜಪೇಟೆ- ಗೋಣಿಕೊಪ್ಪಲು ರಸ್ತೆ ಅಭಿವೃದ್ಧಿ ಕಾಮಗಾರಿ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ನಡೆಯದು. ಒಂದು ವೇಳೆ ಮೇ- ಜೂನ್ ತಿಂಗಳಿನಲ್ಲಿ ಮುಂಗಾರು ಮಳೆ ಆರಂಭಗೊಂಡಲ್ಲಿ ಕಾಮಗಾರಿ ಸೆಪ್ಟೆಂಬರ್‌ವರೆಗೂ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.
ವಿರಾಜಪೇಟೆ- ಗೋಣಿಕೊಪ್ಪಲು ಸುಮಾರು 16 ಕಿ.ಮೀ. ಕಾಮಗಾರಿಗಾಗಿ ಇ ಟೆಂಡರ್ ಪ್ರಕ್ರಿಯೆ ತಾ. 22 ರಂದು ನಡೆದು 48 ಗಂಟೆಗಳ ಬಳಿಕ ಅಂದರೆ ತಾ. 26 ರಂದು ಗುತ್ತಿಗೆದಾರರು ಯಾರೆಂಬುದು ಖಾತ್ರಿಯಾಗಲಿದೆ. ಆದರೆ, ರಸ್ತೆ ಡಾಂಬರೀಕರಣ ಕಾರ್ಯ ಮಾತ್ರ ನೆನೆಗುದಿಗೆ ಬೀಳಲಿದೆ. ಇದರಿಂದ ಹರ್ಷವಾಗಿರುವದು ಗೋಣಿಕೊಪ್ಪಲು ರಸ್ತೆ ಬದಿ ವ್ಯಾಪಾರಿಗಳಿಗೆ. ಮುಂದಿನ 2 ತಿಂಗಳ ಅವಧಿಯಲ್ಲಿ ರಸ್ತೆಯನ್ನು ತಲಾ 10 ಮೀ. (ಮಧ್ಯ ಭಾಗದಿಂದ) ಅಗಲಗೊಳಿಸಲು ಲೋಕೋಪಯೋಗಿ ಇಲಾಖೆ ನಿರ್ಧರಿಸಿತ್ತು. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿ ಇಲ್ಲಿನ ವರ್ತಕರಿಗೆ ಸಮಯಾವಕಾಶ ಕಲ್ಪಿಸಿದೆ ಎನ್ನಲಾಗಿದೆ.
ಹುಣಸೂರಿನಿಂದ ಆನೆಚೌಕೂರು ರಸ್ತೆ ಅಭಿವೃದ್ಧಿ ಕಾಮಗಾರಿಯೂ ಬಿರುಸುಗೊಂಡಿದೆ. ಈ ನಡುವೆ ಇತ್ತೀಚೆಗೆ ಅಪಾಯಕಾರಿ ಗುಂಡಿ ರಸ್ತೆಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೊಳಗಾಗಿದೆ.
ಆನೆಚೌಕೂರು -ಗೋಣಿಕೊಪ್ಪಲು ರಸ್ತೆ ಕಾಮಗಾರಿ ಗುತ್ತಿಗೆಯನ್ನು ಕೆ.ಆರ್. ಪೇಟೆಯ ಮಂಜುನಾಥ್ ಅವರಿಗೆ ಗುತ್ತಿಗೆ ನೀಡಲಾಗಿದ್ದು, ರಸ್ತೆ ಅಗಲೀಕರಣ ಕಾರ್ಯ ಹಾಗೂ ಡಾಂಬರೀಕರಣ ಕಾರ್ಯ ಬಿರುಸುಗೊಂಡಿದೆ. ದೇವರ ಪುರದಲ್ಲಿದ್ದ ಅಪಾಯದ ರಸ್ತೆ ಗುಡ್ಡವನ್ನು ಇದೀಗ ಸಮತಟ್ಟು ಮಾಡಲಾಗಿದೆ. ಇದುವರೆಗೆ ಹಲವು ರಸ್ತೆ ಅಪಘಾತಗಳು, ಸಾವು- ನೋವು ಸಂಭವಿಸಿತ್ತು. ಚೆನ್ನಂಗೊಲ್ಲಿ ಸಮೀಪ ವಾಹನ ಓಡಾಡಕ್ಕೆ ಕ್ಲಿಷ್ಟಕರ ಎತ್ತರದ ಗುಡ್ಡವಿದ್ದು, ಅದನ್ನೂ ಸಮತಟ್ಟು ಮಾಡಲಾಗುವದು ಎಂದು ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರ ನವೀನ್ ತಿಳಿಸಿದ್ದಾರೆ.
ಆನೆಚೌಕೂರು-ಗೋಣಿಕೊಪ್ಪಲು ರಸ್ತೆಯನ್ನು 10.50 ಕೋಟಿ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಒಟ್ಟು 700 ಮೀ. ರಸ್ತೆಯನ್ನು ಅಗೆದು ತೆಗೆದು ಸರ್ವಋತು ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ನವೀನ್ ತಿಳಿಸಿದ್ದಾರೆ. ಗೋಣಿಕೊಪ್ಪಲು ಜೈ ಹಿಂದ್ ಕರ್ ಶಾಪ್ ಮುಂಭಾಗ ಒಟ್ಟು 300 ಮೀ., ದೇವರಪುರ 200 ಮೀ. ಹಾಗೂ ಸೀಗೆತೋಡು ಇಳಿಜಾರು ರಸ್ತೆಯನ್ನು ಸಂಪೂರ್ಣ ಕಿತ್ತು ಹೊಸ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.
ಗೋಣಿಕೊಪ್ಪಲು- ತೋಲ್ಪೆಟ್ಟಿ ಅಂತಾರಾಜ್ಯ ಹೆದ್ದಾರಿ ರಸ್ತೆ ಇದಾಗಿದ್ದು, ಸುಮಾರು 7 ಮೀ. ಅಗಲ ಡಾಂಬರೀಕರಣ ಕಾರ್ಯ ಕೈಗೊಳ್ಳಲಾಗುತ್ತಿದೆ. ದೇವರ ಪುರ ಸಾವಿರ ಬಟ್ಟಿ ತೋಟ ಎಂಬಲ್ಲಿ ರಸ್ತೆ ಅಗಲೀಕರಣ ಮಾಡುತ್ತಿದ್ದಂತೆ ಮತ್ತೆ ರಸ್ತೆಗೇ ಬೇಲಿ ಹಾಕಿಕೊಂಡಿರುವ ಹಿನ್ನೆಲೆ ಮತ್ತೊಮ್ಮೆ ಹೊಸ ಬೇಲಿಯನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವದು ಎಂದು ನವೀನ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.