ಕಾರು ಡಿಕ್ಕಿ: ಪಾದಚಾರಿ ಸಾವು, ಮಹಿಳೆ ಸ್ಥಿತಿ ಗಂಭೀರ
ಮಂಗಳೂರು: ಕುಲಶೇಖರ ಬಳಿ ಒಮ್ನಿ ಕಾರು ಡಿಕ್ಕಿ ಹೊಡೆದು ನಡೆದು ಹೋಗುತ್ತಿದ್ದ ಅಲ್ಬರ್ಟ್ ಕೊನ್ಸೆಸೊ (64) ಮೃತಪಟ್ಟಿದ್ದು, ಮಹಿಳೆ ತಲೆಗೆ ಗಂಭೀರ ಏಟಾಗಿದೆ.
ಬುಧವಾರ ಬೆಳಗ್ಗಿನ ಜಾವ ವಾಮಂಜೂರು ಕಡೆಯಿಂದ ಕುಲಶೇಖರದತ್ತ ಬರುತ್ತಿರುವ ವೇಳೆ ಕುಲಶೇಖರ ಸೆಕ್ರೆಡ್ ಹಾರ್ಟ್ ಸ್ಕೂಲ್ ಬಳಿ ಅಪಘಾತ ಸಂಭವಿಸಿದೆ. ಗಾಯಗೊಂಡ ಶಶಿಕಲಾ ಅವರನ್ನು ಒಮ್ನಿ ಕಾರು ಚಾಲಕ ಕಾರಿನಲ್ಲಿಯೇ ಒಯ್ದು ಆಸ್ಪತ್ರೆಗೆ ದಾಖಲಿಸಿದ್ದಾನೆ. ಅಲ್ಬರ್ಟ್ ಕೊನ್ಸೆಸೊ ಅವರಿಗೆ ಪತ್ನಿ ಫೆಲ್ಸಿ, ಮಗ ಜಾನ್ ಪ್ರದೀಪ್, ಮಗಳು ಪ್ರಮಿಳಾ ಇದ್ದಾರೆ. ಗ್ರಾಮಾಂತರ ಪೊಲೀಸರು ಚಾಲಕ ಅಬ್ದುಲ್ ಸಮದ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕೇಬಲ್ ಕಳವು: 350ಕ್ಕೂ ಮಿಕ್ಕಿ ದೂರವಾಣಿ ಸ್ತಬ್ಧ
ಬಂಟ್ವಾಳ: ತಾಲೂಕಿನ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಪಂಜಿಕಲ್ಲು ಗ್ರಾಮದ ಮುಳಿಯ ಎಂಬಲ್ಲಿ ರಸ್ತೆ ಬದಿ ಮಣ್ಣಡಿ ಕಬ್ಬಿಣದ ಕೊಳೆವೆಯೊಳಗೆ ಅಳವಡಿಸಲಾದ ಸುಮಾರು 35 ಮೀಟರ್ ಉದ್ದದ ಟೆಲಿಫೋನ್ ಕೇಬಲ್ ಕಳವಾದ ಅಂಶ ತಡವಾಗಿ ಬೆಳಕಿಗೆ ಬಂದಿದೆ. ಮಣ್ಣನ್ನು ಅಗೆದು ಕಳ್ಳರು ಈ ಕೃತ್ಯ ಎಸಗಿದ್ದಾರೆ. ಕಳವಾದ ಕೇಬಲ್ ಮೌಲ್ಯ ರು. 20 ಸಾವಿರ ಎಂದು ಅಂದಾಜಿಸಲಾಗಿದೆ.
ಟೆಲಿಫೋನ್ ಕೇಬಲ್ ಕಳವಿನಿಂದಾಗಿ ಸ್ಥಳೀಯ ಸೊರ್ನಾಡು, ಅರಳ, ಕೊಯ್ಲ, ಅಣ್ಣಳಿಕೆ ಪರಿಸರದ ಸುಮಾರು 350ಕ್ಕಿಂತಲೂ ಹೆಚ್ಚು ಸ್ಥಿರ ದೂರವಾಣಿಗಳು ಸ್ತಬ್ಧಗೊಂಡಿವೆ ಎಂದು ತಿಳಿದು ಬಂದಿದೆ. ಕೊಯ್ಲ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತರ್ಜಾಲ ಬಳಕೆಗೆ ತೊಂದರೆಯಾಗಿದ್ದು ಪರೀಕ್ಷಾ ಸಮಯವಾಗಿದ್ದುದರಿಂದ ಇಲಾಖೆಗಳಿಂದ ಇಮೇಲ್ ಮೂಲಕ ಬರುವ ಸೂಚನೆಗಳನ್ನು ಪಡೆಯಲು ಪರದಾಡುವಂತಾಗಿದೆ ಎಂದು ಇಲ್ಲಿನ ಶಿಕ್ಷಕರು ದೂರಿಕೊಂಡಿದ್ದಾರೆ. ಈ ಬಗ್ಗೆ ದೂರಾವಾಣಿ ಇಲಾಖೆ ಅಧಿಕಾರಿ ಲಕ್ಷ್ಮೀನಾರಾಯಣ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಗಡಿಯಿಂದ ಕಳವು: ಅದೇ ದಿನ ಅರಳ ಗ್ರಾಮದ ಸೊರ್ನಾಡು ಜಂಕ್ಷನ್ನಲ್ಲಿರುವ ಆನಂದ ಪೂಜಾರಿ ಎಂಬವರ ಅಂಗಡಿಯಿಂದ 2 ಗ್ಯಾಸ್ ಸಿಲಿಂಡರ್ ಕಳವಾಗಿರುವ ಬಗ್ಗೆ ತಿಳಿದು ಬಂದಿದೆ.
ಅಲ್ಲದೆ ಪಕ್ಕದ ಎರಡು ಅಂಗಡಿಗಳಲ್ಲಿ ಕಳವಿಗೆ ವಿಫಲ ಯತ್ನ ನಡೆಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

