ಪಿಡಿಒ ತಪ್ಪು ಹೇಳಿಕೆ ಅವಾಂತರ, ರಾಜಕೀಯ ಸಂಘರ್ಷ; ಸ್ಪಷ್ಟೀಕರಣ ಬಳಿಕ ಪ್ರಕರಣ ಸುಖಾಂತ್ಯ
ಸುಬ್ರಹ್ಮಣ್ಯ: ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೊಲ್ಲಮೊಗ್ರುನಲ್ಲಿ ರಸ್ತೆ ಕಾಮಗಾರಿ ನಿಲ್ಲಿಸುವ ವಿಚಾರದಲ್ಲಿ ಪಿ.ಡಿ.ಒ. ಆಡಿದ ಒಂದು ಮಾತು ಒಂದು ಪಕ್ಷದ ಮುಖಂಡರ ಮೇಲೆ ಆರೋಪಕ್ಕೆ ಕಾರಣವಾಗಿ ಅದು ರಾಜಕೀಯ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದ್ದು, ಇದೀಗ ಪಿಡಿಒ ಸ್ಪಷ್ಟೀಕರಣದೊಂದಿಗೆ ಪ್ರಕರಣ ಅಂತ್ಯ ಕಂಡಿದೆ.
ರು. 1 ಕೋಟಿ ವೆಚ್ಚದಲ್ಲಿ ನಡುಗಲ್ಲು-ಕೊಲ್ಲಮೊಗ್ರು ರಸ್ತೆ ಕಾಮಗಾರಿಗೆ ಇತ್ತೀಚೆಗೆ ಗುದ್ದಲಿಪೂಜೆ ನಡೆದು ಕೆಲಸ ಕೊಲ್ಲಮೊಗ್ರಿನಲ್ಲಿ ಆರಂಭಗೊಂಡಿತು. ನೀತಿ ಸಂಹಿತೆ ಜಾರಿ ಆದುದರಿಂದ ಮೇಲಾಧಿಕಾರಿಗಳ ಆದೇಶದಂತೆ ಗುತ್ತಿಗೆದಾರರಿಗೆ ಕೆಲಸ ನಿಲ್ಲಿಸಲು ಕೊಲ್ಲಮೊಗ್ರು ಗ್ರಾ.ಪಂ ಪಿ.ಡಿ.ಒ ಸೂಚಿಸಿದ್ದರು.
ಈ ಸಂದರ್ಭ ಗ್ರಾ.ಪಂ ಸದಸ್ಯರೊಬ್ಬರು ಮಧ್ಯ ಪ್ರವೇಶಿಸಿ ಕೆಲಸ ನಿಲ್ಲಿಸುವುದು ಬೇಡ, ತೊಂದರೆ ಆಗದು ಎಂದು ಪಿ.ಡಿ.ಒ.ರಲ್ಲಿ ಕೇಳಿಕೊಂಡಿದ್ದರು. ಪಿ.ಡಿ.ಒ., ಮೇಲಾಧಿಕಾರಿಗಳ ಸ್ಪಷ್ಟ ಆದೇಶವಾಗಿದೆ. ಅಲ್ಲದೆ ಸ್ಥಳೀಯರು ದೂರು ನೀಡಿದಲ್ಲಿ ನನಗೆ ತೊಂದರೆ ಆಗುತ್ತದೆ ಎಂದ್ದಿದ್ದರು. ಹೀಗೆ ಹೇಳುತ್ತಾ ಪಕ್ಷವೊಂದರ ಮುಖಂಡರಿಬ್ಬರ ಹೆಸರು ಉಲ್ಲೇಖಿಸಿದ್ದರು.
ಇದನ್ನು ಇನ್ನೊಂದು ಪಕ್ಷದಲ್ಲಿ ಗುರುತಿಕೊಂಡವರ ಬಳಿ ಹೇಳಿಕೊಂಡಿದ್ದರು. ಈ ವಿಷಯ ಸಾರ್ವಜನಿಕವಾಗಿ ಬಹಿರಂಗಗೊಂಡು ಇದು ಊರಲೆಲ್ಲಾ ಹಬ್ಬಿ ಸತೀಶ್ ಕೂಜುಗೋಡು ಮತ್ತು ಬಿ.ಸಿ. ವಸಂತ ಎಂಬವರು ಊರಿನ ಅಭಿವೃದ್ಧಿಗೆ ಅಡ್ಡಿ ಮಾಡುತ್ತಿದ್ದಾರೆ ಎಂಬ ಅಪಪ್ರಚಾರ ಊರಲೆಲ್ಲಾ ಹರಡಿತ್ತು.
ಈ ವಿಷಯ ಎರಡು ಪಕ್ಷದ ಮಧ್ಯೆ ಸಂಘರ್ಷ ನಡೆಯುವ ಹಂತ ತಲುಪಿತ್ತು. ಬೇಸರಗೊಂಡ ಆರೋಪಕ್ಕೊಳಗಾದ ಸತೀಶ್, ವಸಂತ ಆಕ್ಷೇಪ ವ್ಯಕ್ತಪಡಿಸಿ ಸತ್ಯ ಸಂಗತಿ ಹೊರಬರುವಂತೆ ಸಾರ್ವಜನಿಕವಾಗಿ ಇತ್ಯರ್ಥಕ್ಕೆ ಒತ್ತಾಯಿಸಿದ್ದರು.
ಸಾರ್ವಜನಿಕ ಸಭೆ: ಸೋಮವಾರ ಕೊಲ್ಲಮೊಗ್ರುನಲ್ಲಿ ಸಾರ್ವಜನಿಕ ಸಭೆ ನಡೆಯಿತು. ಆರೋಪಕ್ಕೆ ಗುರಿಯಾದವರು, ಆರೋಪ ಹೊರಿಸಿದವರು ಮತ್ತು ಪಿ.ಡಿ.ಒ. ಮುಖಾಮುಖಿ ಮಾತನಾಡಿ, ಪಿಡಿಒ, ತಾನು ಬಾಯಿ ತಪ್ಪಿನಿಂದ ಇಬ್ಬರ ಹೆಸರು ಹೇಳಿರುವುದಾಗಿ, ತನ್ನಿಂದಲೇ ಗೊಂದಲ ಉಂಟಾಗಿದೆ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡರು.
ಸ್ಪಷ್ಟೀಕರಣ: ರಸ್ತೆ ಕಾಮಗಾರಿ ನಿಲ್ಲಿಸಲು ತಾನೇ ಸೂಚಿಸಿರುತ್ತೇನೆ. ವಸಂತ ಮತ್ತು ಸತೀಶ್ ಕೂಜುಗೋಡು ಅಥವಾ ಬೇರೆ ಯಾವುದೇ ಗ್ರಾಮಸ್ಥರು ಸ್ಥಗಿತಗೊಳಿಸಲು ತನಗೆ ಒತ್ತಡ ಹೇರಿಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟರು. ಸ್ಥಳೀಯರಿಬ್ಬರ ಮೇಲಿನ ಆರೋಪ ಸುಳ್ಳು ಎಂಬುದು ಸಾಬೀತಾಯಿತು. ನಂತರ ಕಾಮಗಾರಿ ಮುಂದುವರಿಸಲು ಜಿ.ಪಂ.ನ ಸಹಾಯಕ ಅಭಿಯಂತರರಿಗೆ ಮನವಿ ನೀಡುವ ತೀರ್ಮಾನ ಕೈಗೊಳ್ಳುವ ಮೂಲಕ ಇಡಿ ರಾಜಕೀಯ ಪ್ರಕರಣಕ್ಕೆ ತೆರೆ ಎಳೆಯಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

