ಟೋಲ್ಗೇಟ್ ಸ್ಥಾಪನೆಗೆ ವಿರೋಧ: ಅಂಗಡಿ ಮುಂಗಟ್ಟು ಮುಚ್ಚಿ ಪ್ರತಿಭಟನೆ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಎನ್ಐಟಿಕೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಟೋಲ್ ಸಂಗ್ರಹಣಾ ಬೂತ್ ನಿರ್ಮಾಣ ಖಂಡಿಸಿ ಸುರತ್ಕಲ್ ಪ್ರದೇಶದ ಸಾರ್ವಜನಿಕರು ಅರ್ಧ ದಿನ ಅಂಗಡಿ ಮುಂಗಟ್ಟು ಮುಚ್ಚಿ ಪ್ರತಿಭಟಿಸಿದರು.
ಇರ್ಕಾನ್ ಸಂಸ್ಥೆಯ ವತಿಯಿಂದ 37ಕಿ.ಮೀ. ಸುರತ್ಕಲ್-ಬಿ.ಸಿ.ರೋಡ್ ಚತುಷ್ಪಥ ರಸ್ತೆಯು ಸುಮಾರು 168 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಇದರ ಕಾಮಗಾರಿ ಪೂರ್ಣಗೊಳ್ಳುವ ಮುಂಚೆಯೇ ಇರ್ಕಾನ್ ಅಧಿಕಾರಿಗಳ ದಂಡು ಎನ್ಐಟಿಕೆಯಲ್ಲಿ ಟೋಲ್ ಗೇಟ್ ಸ್ಥಾಪಿಸಲು ಮುಂದಾಗಿರುವುದರ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ.
ಸುರತ್ಕಲ್ ನಾಗರಿಕ ಸಮಿತಿ ಕರೆ ನೀಡಿದ್ದ ಬಂದ್ಗೆ ಸುರತ್ಕಲ್ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅಂಗಡಿ ಮುಚ್ಚಿದ ಮಾಲಿಕರು ಮುಚ್ಚದೆ ಇರುವ ಅಂಗಡಿ ಮಾಲೀಕರಿಗೆ ಸಮಸ್ಯೆಗಳ ಬಗ್ಗೆ ವಿವರಿಸಿ ಪ್ರತಿಭಟನಗೆ ಪಾಲ್ಗೊಳ್ಳುವಂತೆ ಹೇಳುತ್ತಿದ್ದರು. ಬೆಳಗ್ಗೆ 9ಗಂಟೆಗೆ ಪ್ರಾರಂಭವಾಗಬೇಕಿದ್ದ ಪ್ರತಿಭಟನೆ 10.30ಕ್ಕೆ ಆರಂಭವಾಯಿತು. ಎನ್ಟಿಕೆಯಿಂದ ಸುರತ್ಕಲ್ ಪಾವಂಜೆವರೆಗಿನ ಅಂಗಡಿಗಳನ್ನು ಮುಚ್ಚಿ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಸುರತ್ಕಲ್ ಪೇಟೆಯ ದಿನಸಿ ಅಂಗಡಿ, ತರಕಾರಿ ಅಂಗಡಿ, ಹೊಟೇಲ್ ಎಲ್ಲವೂ ಸಂಪೂರ್ಣ ಮುಚ್ಚಿದ್ದವು. ಪ್ರತಿಭಟನಾಕಾರರು ಹೆದ್ದಾರಿ ಮಧ್ಯದಲ್ಲಿ ಪ್ರತಿಭಟನೆ ನಡೆಸಿದ್ದು, ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತು.ರಸ್ತೆಯಲ್ಲಿ ಓಡಾಡುತ್ತಿದ್ದ, ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಜನರು ಏನು ನಡೆಯುತ್ತಿದೆ ಎಂಬುವುದು ತಿಳಿಯದೆ ಕಕ್ಕಾಬಿಕ್ಕಿಯಾಗಿದ್ದರು. ಅಂಗಡಿ ಮುಚ್ಚಿದ ಪರಿಣಾಮ ದಿನಪತ್ರಿಕೆಗಳನ್ನು ಮಾರಾಟಗಾರ ಅಂಗಡಿಗಳ ದಂಡೆಯಲ್ಲಿ ದಿನಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದರು.
ಎನ್ಐಟಿಕೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಟೋಲ್ ಬೂತ್ ರಸ್ತೆ ಪಕ್ಕದಲ್ಲಿ ಹಿರಿಯ ಪ್ರಾಥಮಿಕ ಶಾಲೆಯಿದ್ದು, ದಿನದಲ್ಲಿ ಓಡಾಡುವ ನೂರಾರು ವಾಹನಗಳ ಶಬ್ಧದಿಂದ ಮಕ್ಕಳು ಕಿರಿಕಿರಿ ಅನುಭವಿಸುವಂತಾಗುತ್ತದೆ. ಇದಲ್ಲದೆ ಮೂರು ಎಂಜಿನಿಯರಿಂಗ್ ಕಾಲೇಜ್ಗಳಿದ್ದು, ವಿದ್ಯಾರ್ಥಿಗಳಿಗೂ ತೊಂದರೆಯುಂಟಾಗುವ ಸಂಭವವಿದೆ.
ಟೋಲ್ ಸಂಗ್ರಹಣೆಗೆ ಷಟ್ಪಥ ರಸ್ತೆಯ ಅವಶ್ಯಕತೆಯಿದೆ. ಆದರೆ ಎನ್ಐಟಿಕೆಯಲ್ಲಿ ಗುರುತಿಸಲಾಗಿರುವ ಜಾಗವು ಅಸಮರ್ಪಕವಾಗಿದ್ದು, ಇದರಿಂದ ಸಾರ್ವಜನಿಕರು ತೀರಾ ತೊಂದರೆ ಅನುಭವಿಸುವಂತಾಗುತ್ತದೆ.
ಅಧಿಕಾರಿಗಳ ಉದ್ದಟತನ: ಮಹಾನಗರ ಪಾಲಿಕೆಯ ಆದೇಶದಂತೆ ನಗರ ವ್ಯಾಪ್ತಿಯಲ್ಲಿ ಟೋಲ್ ಸಂಗ್ರಹಣೆ ನಿಷಿದ್ಧ. ಇದರ ಕುರಿತು ಪಾಲಿಕೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅಧಿಕಾರಿಗಳು ಉದ್ದಟತನದಿಂದ ವರ್ತಿಸುತ್ತಿದ್ದಾರೆ. ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಕಾನೂನು ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಹೇಳಿದರು.
ರಾಷ್ಟ್ರೀಯ ಹೆದ್ದಾರಿ ನಿಯಮದ ಪ್ರಕಾರ ಪ್ರತಿ ರಸ್ತೆಯ 60 ಕಿ.ಮೀ. ವ್ಯಾಪ್ತಿಯಲ್ಲಿ ಟೋಲ್ ಸಂಗ್ರಹಣೆ ನಡೆಸಬೇಕಾಗುತ್ತದೆ. ಆದರೆ 3 ಕಿ.ಮೀ. ಅಂತರದಲ್ಲಿ ಹಳೆಯಂಗಡಿಯಲ್ಲಿ ಕುಂದಾಪುರದ ನವಯುಗ ಖಾಸಗಿ ಕಂಪನಿ ಟೋಲ್ ಸಂಗ್ರಹಣೆ ನಡೆಸುತ್ತಿದೆ. ಇದನ್ನು ಗಮನಿಸಿದರೆ ಅಧಿಕಾರಿಗಳು ಜನರಿಂದ ಹಣ ವಸೂಲಿ ಮಾಡುವ ಹುನ್ನಾರವಾಗಿದೆ ಎಂದು ಪಾಲಿಕೆ ಸದಸ್ಯೆ ರೇವತಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

