ಎಸ್ಸೆಸ್ಸೆಲ್ಸಿ ಪರೀಕ್ಷೆ: ಜೆರಾಕ್ಸ್ ಅಂಗಡಿಗಳಿಗೆ ಸತ್ವ ಪರೀಕ್ಷೆ
ಜಿತೇಂದ್ರ ಕುಂದೇಶ್ವರ
ಮಂಗಳೂರು: ನೆಗಡಿ ಬರುತ್ತದೆ ಎಂದು ಮೂಗನ್ನೇ ಕೊಯ್ದರೆ ? ಹಾಗಾಯ್ತು ಜೆರಾಕ್ಸ್ ಅಂಗಡಿಗಳ ಮಾಲೀಕರು ಗತಿ. ವಿದ್ಯಾರ್ಥಿಗಳು ನಕಲು ಮಾಡಲು ಜೆರಾಕ್ಸ್ ಅಂಗಡಿಗಳನ್ನು ಬಳಸುತ್ತಾರೆ ಎಂಬ ಕಾರಣಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ಶಾಲೆಯ 200 ಮೀ.ವ್ಯಾಪ್ತಿ ಪ್ರದೇಶದಲ್ಲಿ ಜೆರಾಕ್ಸ್ ಅಂಗಡಿಗಳ ಮುಚ್ಚುಗಡೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಇಂಟರ್ನೆಟ್, ಮೊಬೈಲ್ ಬಳಕೆ ಹೆಚ್ಚಾದಂತೆ ಜೆರಾಕ್ಸ್ ಬೇಡಿಕೆ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಈ ಆದೇಶ ಜೆರಾಕ್ಸ್ ಅಂಗಡಿ ಮಾಲೀಕರ ಗಾಯಕ್ಕೆ ಬರೆ ಎಳೆದಂತಾಗಿದೆ. ಪರೀಕ್ಷೆ ಟೈಮ್ಟೇಬಲ್ ಅಂಗಡಿ ಮಾಲೀಕರಿಗೆ ನೀಡಿಲ್ಲ. ಎಷ್ಟು ಹೊತ್ತು ಬಂದ್ ಮಾಡಬೇಕು ಎಂಬ ಮಾಹಿತಿ ಇಲ್ಲ. ಹೆಚ್ಚಿನ ಅಂಗಡಿಯವರು ಪರೀಕ್ಷೆ ನಡೆಯುವ ದಿನಗಳಲ್ಲಿ ಪೂರ್ತಿ ಬಂದ್ ಮಾಡಬೇಕು ಎಂಬು ಚಿಂತೆಯಲ್ಲಿದ್ದಾರೆ. ಅಂಗಡಿ ಮುಚ್ಚಿದರೆ ಪರೀಕ್ಷೆ ನಡೆಯವಷ್ಟು ದಿನಗಳ ಕಾಲ ಅಂಗಡಿ ಮಾಲೀಕರು ಏನು ಮಾಡಬೇಕು, ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಗತಿ ಏನು ಎಂಬ ಪ್ರಶ್ನೆ ಉದ್ಭವ ವಾಗಿದೆ.
'ಏ.2ರಿಂದ ಪರೀಕ್ಷೆ ಆರಂಭವಾಗುತ್ತಿದೆ. ಪರೀಕ್ಷೆಯಲ್ಲಿ ಅಕ್ರಮಗಳಿಲ್ಲದೆ ಸುಗಮವಾಗಿ ನಡೆಯಲು ಮಾರ್ಗದರ್ಶಿ ಸೂತ್ರಗಳಿವೆ. ಈ ಮಾಗದರ್ಶಿ ಸೂತ್ರ ಕೇವಲ ಜಿಲ್ಲೆಗೆ ಸೀಮಿತವಾಗಿಲ್ಲ. ರಾಜ್ಯದ ಎಲ್ಲೆಡೆ ಇದು ಅನ್ವಯವಾಗುತ್ತದೆ. ಜಿಲ್ಲಾಧಿಕಾರಿಗಳು ಸುರಕ್ಷತೆ ದೃಷ್ಟಿಯಿಂದ ಮಾಗದರ್ಶಿ ಸೂತ್ರ ಪಾಲಿಸಿ, ಆದೇಶ ಹೊರಡಿಸಬೇಕು. ಪರೀಕ್ಷೆ ನಡೆಯವ ದಿನಗಳಷ್ಟು ಕಾಲ ಅಂಗಡಿ ಮುಚ್ಚಬೇಕು ಎಂದೇನು ಇಲ್ಲ. ಪರೀಕ್ಷೆ ನಡೆಯುವ 3 ಗಂಟೆ ಅವಧಿಯಲ್ಲಿ ಅಂಗಡಿ ಬಂದ್ ಮಾಡಿದರೆ ಸಾಕು' ಎನ್ನುತ್ತಾರೆ ಜಿಲ್ಲಾಧಿಕಾರಿ ಹರ್ಷಗುಪ್ತ.
ಆದರೆ ಜೆರಾಕ್ಸ್ ಅಂಗಡಿ ಮಾಲೀಕರು ಒಪ್ಪುತ್ತಿಲ್ಲ. 'ನಾವು ಕ್ರಿಮಿನಲ್ಗಳಾ ? ಇದುವರೆಗೆ ಇಂಥ ಕಾನೂನು ಜಿಲ್ಲೆಯಲ್ಲಿ ಇರಲಿಲ್ಲ. ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡಾ ಈ ರೀತಿ ಆದೇಶ ನಾವು ಹೊರಡಿಸಿಲ್ಲ ಎನ್ನುತ್ತಾರೆ. ಜಿಲ್ಲಾಧಿಕಾರಿ ಹೊರಡಿಸಿದ್ದಾರೆ ಎನ್ನಲಾದ ಆದೇಶ ನಮ್ಮ ಕೈ ತಲುಪಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾಗಿರುವುದಷ್ಟೇ ಗಮನಕ್ಕೆ ಬಂದಿದೆ. ಅದೂ ಅಲ್ಲದೆ ಪರೀಕ್ಷೆ ನಡೆಯುವ ದಿನಗಳು ಎಷ್ಟು ? ಎಷ್ಟು ಹೊತ್ತಿಗೆ ಪರೀಕ್ಷೆ ನಡೆಯುತ್ತಿದೆ ಎನ್ನುವ ಮಾಹಿತಿ ನೀಡಿಲ್ಲ. ನಾವು ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದ್ದೇವೆ ಎನ್ನುತ್ತಾರೆ ಜಿಲ್ಲಾ ಜೆರಾಕ್ಸ್, ಸೈಬರ್ ಮಾಲೀಕರ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ.
'ಜೆರಾಕ್ಸ್ ಅಂಗಡಿ ಹತ್ತಿರವಿದ್ದರೆ ಪರೀಕ್ಷೆ ಹಾಲ್ನಿಂದ ಉತ್ತರ ಪತ್ರಿಕೆಗಳನ್ನು ತಂದು ನಕಲು ಮಾಡುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಆದೇಶ ಹೊರಡಿಸಲಾಗಿದೆ' ಎನ್ನುತ್ತಾರೆ ಜಿಲ್ಲಾಧಿಕಾರಿ ಹರ್ಷ ಗುಪ್ತ.
'ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನಕಲು ಮಾಡಲು ಎಂದಿಗೂ ಜೆರಾಕ್ಸ್ ಅಂಗಡಿ ಮಾಲೀಕರು ಬಿಡುವುದಿಲ್ಲ. ಈಗಿನ ಕಾಲದಲ್ಲಿ ವಿದ್ಯಾರ್ಥಿಗಳು ಮೊಬೈಲ್, ಇಂಟರ್ನೆಟ್ ಮೂಲಕ ಸುಲಭವಾಗಿ ನಕಲು ಮಾಡಲು ಅವಕಾಶವಿದೆ' ಎನ್ನುತ್ತಾರೆ ಸಂಘದ ಕಾರ್ಯದರ್ಶಿ ತುಲಾರ್ ರೈ.
ಈಗೆಲ್ಲ ಕಾಪಿ ಮಾಡಲು ಜೆರಾಕ್ಸ್ಗೆ ಬರಬೇಕೆಂದಿಲ್ಲ, ತಮ್ಮ ಕೈಯಲ್ಲಿಯೇ ಇರುವ ಮೊಬೈಲ್ನಿಂದ ತಕ್ಷಣ ಕಾಪಿ ಮಾಡಬಹುದು.
ಆದ್ದರಿಂದ 200 ಮೀ, ವ್ಯಾಪ್ತಿಯಲ್ಲಿ ಯಾರೂ ಮೊಬೈಲ್ ಕೊಂಡು ಹೋಗಬಾರದು. ಮೊಬೈಲ್ ಅಂಗಡಿ ಇರಬಾರದು, ಪುಸ್ತಕ ಅಂಗಡಿ ಇರಬಾರದು, ಸೈಬರ್ ಸೆಂಟರ್ಗಳು ಇರಬಾರದು ಎಂಬಿತ್ಯಾದಿ ಆದೇಶ ಹೊರಡಿಸಬೇಕಾಗುತ್ತದೆ ಎನ್ನುತ್ತಾರೆ ಅಧ್ಯಕ್ಷ ಸುಧಾಕರ ಶೆಟ್ಟಿ.
ಮಂಗಳೂರಲ್ಲಿ 200ಕ್ಕೂ ಮಿಕ್ಕಿ ಜೆರಾಕ್ಸ್ ಅಗಡಿಗಳಿವೆ. ಅದರಲ್ಲೆ ಶೇ.30 ಜೆರಾಕ್ಸ್ ಅಂಗಡಿಗಳು ಶಾಲೆ ಬಳಿಯೇ ಇದೆ. ಆದ್ದರಿಂದ ಮೊದಲೇ ಸಂಕಷ್ಟದಲ್ಲಿರುವ ಜೆರಾಕ್ಸ್ ಉದ್ಯಮಿಗಳಿಗೆ ಆದೇಶದಿಂದ ಗರಬಡಿದಂತಾಗಿದೆ ಎನ್ನುತ್ತಾರೆ ಅಧ್ಯಕ್ಷರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

