ದಕ್ಷಿಣ ಕನ್ನಡ

'ಅಸ್ತ್ರ' ಸಿಬ್ಬಂದಿಗೆ ಹಲ್ಲೆ: ತಾ.ಪಂ. ಸದಸ್ಯೆ ಸೇರಿ ಐವರ ವಿರುದ್ಧ ದೂರು

Published On :

ಪುತ್ತೂರು: ಉದ್ಯೋಗ ಖಾತರಿ ಯೋಜನೆಯಡಿ ಪಂಚಾಯಿತಿಯ ಪಂಚವಾರ್ಷಿಕ ಮುನ್ನೋಟ ಸಮೀಕ್ಷೆ ನಡೆಸಲು ಕೊಂಬಾರು ಗ್ರಾಮಕ್ಕೆ ಬಂದಿದ್ದ 'ಅಸ್ತ್ರ' ಎಂಬ ಸ್ವಯಂ ಸೇವಾ ಸಂಸ್ಥೆಯ ಸಿಬ್ಬಂದಿಯನ್ನು ನಕ್ಸಲರೆಂದು ಅವಮಾನಿಸಿ, ಹಲ್ಲೆ ನಡೆಸಿದ ಆರೋಪದಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಪುಲಸ್ಯ ರೈ ಮತ್ತು ಇತರ ಐವರ ವಿರುದ್ಧ ಸಂಸ್ಥೆ ಕಾರ್ಯನಿರ್ವಾಹಕ ವ್ಯವಸ್ಥಾಪಕ ಚಂದನ್ ಎಂ.ಸಿ ಪುತ್ತೂರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
 ಚಂದನ್ ಎಂ.ಸಿ. ಅವರು ಶನಿವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಖಾತ್ರಿ ಯೋಜನೆಯ ಸಮೀಕ್ಷೆ ನಡೆಸಲು ಸರ್ಕಾರ ಬೆಂಗಳೂರಿನ 'ಅಸ್ತ್ರ' ಸಂಸ್ಥೆಗೆ ಆದೇಶ ನೀಡಿದೆ. ಈ ಸಂಸ್ಥೆಯು ರಾಜ್ಯದಲ್ಲಿ ಒಟ್ಟು ಹತ್ತು ಗ್ರಾಮಗಳನ್ನು ಆಯ್ಕೆ ಮಾಡಿದ್ದು, ಗ್ರಾಮಗಳನ್ನು ಸಮೀಕ್ಷೆ ನಡೆಸಿ ಮುಂದಿನ ಐದು ವರ್ಷಗಳಲ್ಲಿ ಆಯಾ ಗ್ರಾಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಾಗುತ್ತದೆ. ಗ್ರಾಮದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳು ಮತ್ತು ಸಮಸ್ಯೆಗಳ ಪಟ್ಟಿಯನ್ನು ತಯಾರಿಸಿ ಆ ವರದಿಯನ್ನು ಸರ್ಕಾರಕ್ಕೆ ನೀಡುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.
 ಈ ನಿಟ್ಟಿನಲ್ಲಿ ಪುತ್ತೂರು ತಾಲೂಕಿನ ಕೊಂಬಾರು ಗ್ರಾಮವನ್ನು ಸಂಸ್ಥೆಯು ಆಯ್ಕೆ ಮಾಡಿಕೊಂಡಿದ್ದು, ಈ ಗ್ರಾಮದ ಸುಮಾರು 500 ಮನೆಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಮತ್ತು ಬೇಡಿಕೆಗಳ ಪಟ್ಟಿಯನ್ನು ತಯಾರಿಸಿದ್ದೇವೆ. ಸಮೀಕ್ಷೆ ಕಾರ್ಯ ನಡೆಸುವ ವೇಳೆ ಸ್ಥಳೀಯ ಪಂಚಾಯಿತಿ ಸಿಬ್ಬಂದಿ ಪುರುಷೋತ್ತಮ ಆಮಡ್ಕ, ಚಿದಾನಂದ ದೇವುಪಾಲು, ಸ್ಥಳೀಯರಾದ ರಾಮಚಂದ್ರ ಆಮಡ್ಕ ಸೇರಿ ಸಮೀಕ್ಷೆ ಕಾರ್ಯ ನಡೆಸುತ್ತಿದ್ದ ಸಿಬ್ಬಂದಿ ಬಳಿ ಇದ್ದ ಸರ್ಕಾರದ ಆದೇಶ ಪತ್ರವನ್ನು ಹರಿದು ಹಾಕಿದ್ದಲ್ಲದೆ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಗ್ರಾಮದಲ್ಲಿ ಸಮೀಕ್ಷೆ ನಡೆಸದಂತೆ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರೂ ಪೊಲೀಸರು ಕೇಸು ದಾಖಲಿಸದೆ ನಮಗೆ ಉಪದೇಶ ನೀಡಿ ವಾಪಸ್ ಕಳುಹಿಸಿದ್ದಾರೆ ಎಂದರು.
 ಬಳಿಕ ಸ್ಥಳೀಯ ಕೊಂಬಾರು ದಲಿತ ಸಂಘಟನೆಗಳ ನೇತೃತ್ವದಲ್ಲಿ ನಾವು ಗ್ರಾಮ ಸಮೀಕ್ಷೆ ನಡೆಸಿ ಶೇ. 70 ರಷ್ಟು ಕಾರ್ಯ ಮುಗಿಸಿದ್ದೇವೆ. ಪಂಚಾಯಿತಿ ಸಿಬ್ಬಂದಿ ಧೋರಣೆ ಬಗ್ಗೆ ನಾವು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು, ಆ ಬಳಿಕ ಅವರು ಪೊಲೀಸ್ ರಕ್ಷಣೆ ಒದಗಿಸಿದ್ದಾರೆ ಎಂದು ಹೇಳಿದರು.
ಸಂಸ್ಥೆ ಸಿಬ್ಬಂದಿ ಮೇಲಿನ ಹಲ್ಲೆಯ ಬಗ್ಗೆ ಪುತ್ತೂರು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿರುವುದಾಗಿ ತಿಳಿಸಿದರು. ದಲಿತ ಸಂಘಟನೆಯ ಕಡಬ ವಲಯದ ಅಧ್ಯಕ್ಷ ಆನಂದ ಮಿತ್ತಬೈಲು, ಸಂಚಾಲಕ ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಹೊಳ್ಳಾರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.