ಗೋಹತ್ಯೆ ನಿಷೇಧ ವಿಧೇಯಕ ರದ್ದು: ಸಿದ್ದು ಹೇಳಿಕೆಗೆ ವ್ಯಾಪಕ ಖಂಡನೆ
ವಿಟ್ಲ/ಉಪ್ಪಿನಂಗಡಿ: ಈಗಾಗಲೇ ಗೋ ಹತ್ಯೆ ನಿಷೇಧದ ಕುರಿತು ಸರ್ಕಾರ ಸಿದ್ಧಪಡಿಸಿದ ಕಾಯ್ದೆಯನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ರದ್ದುಪಡಿಸಲಾಗುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಯನ್ನು ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಉಗ್ರವಾಗಿ ಖಂಡಿಸಿದೆ.
ಸಿದ್ದರಾಮಯ್ಯ ಅಲ್ಪಸಂಖ್ಯಾತ ಮತಗಳನ್ನು ಓಲೈಸುವ ಸಲುವಾಗಿ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆ, ನಂಬಿಕೆ, ಆಚರಣೆಯ ಮತ್ತು ಸಾಮಾಜಿಕ ಸಾಮರಸ್ಯದ ಮೇಲೆ ಸವಾರಿ ಮಾಡಿದ್ದಾರೆ. ಅವರ ಈ ತುಷ್ಟೀಕರಣ ನೀತಿಯನ್ನು ಖಂಡಿಸುವುದಾಗಿ ಹೇಳಿಕೆಯಲ್ಲಿ ಸಂಘಟನೆಗಳು ತಿಳಿಸಿವೆ.
ಅಮೃತಧಾರಾ ಗೋಶಾಲೆ ಆಕ್ಷೇಪ:
ಸಿದ್ದರಾಮಯ್ಯ ಹೇಳಿಕೆಗೆ ಕೈರಂಗಳ ಪುಣ್ಯಕೋಟಿ ನಗರ ಅಮೃತಧಾರಾ ಗೋಶಾಲೆಯ ಅಧ್ಯಕ್ಷ ಮತ್ತು ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚುನಾವಣೆ ಸಂದರ್ಭ ಇಂಥ ಅನಪೇಕ್ಷಿತ ಹೇಳಿಕೆ ನೀಡಿರುವುದು ಸರಿಯಲ್ಲ. ಈ ಹೇಳಿಕೆಯಿಂದ ಗೋವನ್ನು ಆರಾಧಿಸುವ ನಮ್ಮ ಸಮಾಜಕ್ಕೆ ಆಘಾತವಾಗಿದೆ. ಆದ್ದರಿಂದ ಯಾವ ಬೆಲೆ ತೆತ್ತಾದರೂ ಗೋಸಂರಕ್ಷಣೆ ದಿಶೆಯಲ್ಲಿ ಹೋರಾಟಕ್ಕೆ ಸಿದ್ಧ ಎಂದು ಅಧ್ಯಕ್ಷ ಟಿ.ಜಿ.ರಾಜಾರಾಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹವ್ಯಕ ಮಂಡಲ ಖಂಡನೆ: ಸಿದ್ದರಾಮಯ್ಯ ಹೇಳಿಕೆಯನ್ನು ಮಂಗಳೂರು ಹವ್ಯಕ ಮಂಡಲ ಖಂಡಿಸಿದೆ.
ಇತ್ತೀಚೆಗೆ ನಡೆದ ಮಂಡಲದ ವಿಶೇಷ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದು, ಇಂತಹ ರಾಜಕಾರಣಿಗಳಿಂದ ಮುಂದೆ ಒದಗಬಹುದಾದ ಘೋರ ಪರಿಣಾಮಗಳ ಬಗ್ಗೆ ಎಚ್ಚರ ವಹಿಸುವಂತೆ ಮನವಿ ಮಾಡಿದೆ. ಸಭೆಯಲ್ಲಿ ಮಂಗಳೂರು ಮಂಡಲದ ಅಧ್ಯಕ್ಷ ಕೆ.ಪಿ ಭಟ್, ಉಪಾಧ್ಯಕ್ಷ ಉದಯ ಕುಮಾರ ಭಟ್, ಕೋಶಾಧಿಕಾರಿ ಪಕಳಕುಂಜ ಗೋಪಾಲಕೃಷ್ಣ ಭಟ್, ಕಾರ್ಯದರ್ಶಿ ಸೇರಾಜೆ ಸುಬ್ರಹ್ಮಣ್ಯ ಭಟ್, ಪೆದಮಲೆ ನಾಗರಾಜ ಭಟ್, ಬಿ.ಜಿ ರಾಮ ಭಟ್ ಗೋಳಿತ್ತಡ್ಕ, ಹಾರಕರೆ ನಾರಾಯಣ ಭಟ್, ಹೆಗಡೆ ನಾರಾಯಣ ಮತ್ತು ಮಂಡಲ ವ್ಯಾಪ್ತಿಯ 11 ವಲಯಗಳ ಪತಿನಿಧಿಗಳೂ ಭಾಗವಹಿಸಿದ್ದರು.
ವಿಹಿಂಪ ಖಂಡನೆ: ಸಿದ್ದರಾಮಯ್ಯ ಮಾತೃ ಸ್ವರೂಪಿ ಗೋಹತ್ಯಾ ನಿಷೇಧ ಕಾನೂನು ರದ್ದು ಮಾಡುವುದಾಗಿ ಹೇಳಿ ಬಹುಸಂಖ್ಯಾತ ಹಿಂದೂಗಳ ಭಾವನೆ ಘಾಸಿಗೊಳಿಸಿದ್ದಾರೆ. ಈ ಮೂಲಕ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದು ಕಡಬ ವಿಶ್ವ ಹಿಂದೂ ಪರಿಷತ್ ಬಾಗೂ ಬಜರಂಗದಳ ಅಭಿಪ್ರಾಯಪಟ್ಟಿವೆ.
ಬಜರಂಗದಳ ಸಂಚಾಲಕ ಮಹೇಶ್ ಕೋಡಿಬೈಲ್ ಹಾಗೂ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ವಾಸುದೇವ ಗೌಡ ಕೊಲ್ಲೆಸಾಗು ಹೇಳಿಕೆ ನೀಡಿ, ಕಾಂಗ್ರೆಸ್‌ಗೆ ಅಲ್ಪ ಸಂಖ್ಯಾತರ ಮತಗಳು ಮಾತ್ರ ಸಾಕು ಎಂದಾದರೆ ಅವರು ಅವರ ಹೇಳಿಕೆ ಬದ್ಧರಾಗಿರಲಿ, ಇಲ್ಲವಾದಲ್ಲಿ ತಕ್ಷಣ ರಾಜ್ಯದ ಹಿಂದೂಗಳ ಕ್ಷಮೆ ಯಾಚಿಸಿ ಹೇಳಿಕೆ ಹಿಂದಕ್ಕೆ ಪಡೆಯಬೇಕು ಎಂದು ಅವರು ಅಗ್ರಹಿಸಿದ್ದಾರೆ.
ಶಕುಂತಳಾ ನಿಲುವಿಗೆ ಆಗ್ರಹ: ಗೋಹತ್ಯಾ ನಿಷೇಧದ ಬಗ್ಗೆ ನಮಗೆ ಪಾಠ ಹೇಳುತ್ತಿದ್ದ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಶಕುಂತಾಳ ಶೆಟ್ಟಿ ಇದೀಗ ಅವರ ಪಕ್ಷದ ಮುಖಂಡನ ಧ್ವನಿಯ ಹಿನ್ನೆಲೆಯಲ್ಲಿ ಗೋಹತ್ಯಾ ನಿಷೇಧದ ಬಗ್ಗೆ ಸ್ಪಷ್ಟ ನಿಲುವು ತಿಳಿಸಬೇಕು ಎಂದು ಅಗ್ರಹಿಸಿದ್ದಾರೆ.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

