ಚರಂಡಿಗೆ ಬಿದ್ದು, ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ
ಬಂಟ್ವಾಳ: ಚುನಾವಣಾ ಕರ್ತವ್ಯಕ್ಕೆಂದು ಮತಗಟ್ಟೆಗೆ ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ಸರ್ಕಾರಿ ಬಸ್ಸೊಂದು ಬ್ರೇಕ್ ವೈಫಲ್ಯದಿಂದ ಚರಂಡಿಗೆ ಬಿದ್ದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಶನಿವಾರ ವಿಟ್ಲ ಸಮೀಪದ ಮುಚ್ಚಿರಪದವು ಎಂಬಲ್ಲಿ ನಡೆದಿದೆ.
ಪುತ್ತೂರು ವಿಧಾನ ಸಭಾ ಕ್ಷೇತ್ರದ 6 ಮತಗಟ್ಟೆಗೆ ಅಧಿಕಾರಿಗಳನ್ನು ಕರೆದುಕೊಂಡು ಬರುತ್ತಿದ್ದ ವೇಳೆ ಮುಚ್ಚಿರಪದವು ಎಂಬಲ್ಲಿ ಈ ಘಟನೆ ನಡೆದಿದೆ,
ಪುತ್ತೂರು ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 76 ಮುಚ್ಚಿರಪದವು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಕೇಂದ್ರ, 77- 78 ಕೊಲ್ಲತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಪುರ್ವ ಮತ್ತು ಪಶ್ಚಿಮ ಭಾಗದ ಎರಡು ಕೇಂದ್ರ, 79 ಮುರುವ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಕೇಂದ್ರ, 80 ಮುರುವ ಸರ್ಕಾರಿ ಪ್ರೌಢಶಾಲೆಯ ಕೇಂದ್ರ, 81 ಪಕಳಕುಂಜ ಶ್ರೀ ವೇಣುಗೋಪಾಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಕೇಂದ್ರದ ಅಧಿಕಾರಿಗಳನ್ನು ಹೊತ್ತ ಬಸ್ ಯಾರೊಬ್ಬರಿಗೂ ಊಟವಾಗಿಲ್ಲದ ಹಿನ್ನೆಲೆಯಲ್ಲಿ ಎಲ್ಲರೂ ನೇರವಾಗಿ ಮಾಣಿಲ ಶ್ರೀಧಾಮ ಕ್ಷೇತ್ರಕ್ಕೆ ಊಟಕ್ಕೆ ತೆರಳಿದ್ದರು. ಬಳಿಕ ಪಕಳಕುಂಜದಿಂದ ಅಧಿಕಾರಿಗಳನ್ನು ಕೇಂದ್ರದಲ್ಲಿ ಬಿಡುತ್ತಾ ಮುಚ್ಚಿರಪದವಿಗೆ ತಲುಪಿದ ಬಸ್ ಅಧಿಕಾರಿಗಳನ್ನು ಇಳಿಸಿ ಮತ್ತೆ ಪಕಳಕುಂಜ ಕೇಂದ್ರಕ್ಕೆ ತೆರಳಲೆಂದು ತಿರುಗುತ್ತಿದ್ದ ಸಂದರ್ಭ ರಸ್ತೆಯಿಂದ ಹಿಂದೆ ಸರಿದು ರಸ್ತೆ ಬದಿಯ ಚರಂಡಿಗೆ ವಾಲಿತು. ಈ ಸಮಯ ಬ್ರೇಕ್ ವ್ಯಾಕ್ಯೂಮ್ ಖಾಲಿಯಾಗಿ ಬ್ರೇಕ್ ಹಿಡಿಯದೆ ಅರ್ಧ ಬಸ್ ಹಿಂದೆ ಸರಿದು ವಿದ್ಯುತ್ ಕಂಬಕ್ಕೆ ತಾಗಿ ನಿಂತಿತು.
ಸ್ಥಳೀಯರು ಹಲವಾರು ರೀತಿಯಲ್ಲಿ ಪ್ರಯತ್ನಿಸಿದರೂ ಬಸ್ಸನ್ನು ತೆಗೆಯಲಾಗಲಿಲ್ಲ. ಬಳಿಕ ಜೆಸಿಬಿ ತಂದು ಸತತ 1.45 ಗಂಟೆ ಕಾರ್ಯಾಚರಣೆ ಮಾಡಿ ವಿದ್ಯುತ್ ಕಂಬಕ್ಕೆ ಯಾವುದೇ ಹಾನಿಯಾಗದಂತೆ ಬಸ್ಸನ್ನು ತೆರವು ಮಾಡಲಾಯಿತು. ಸ್ಥಳಕ್ಕೆ ಚುನಾವಣಾ ವಿಶೇಷ ಅಧಿಕಾರಿಗಳು, ಮೆಸ್ಕಾಂ ಉಕ್ಕುಡ ವಿಭಾಗಾಧಿಕಾರಿ ಆನಂದ, ಪೆರುವಾಯಿ ಲೈನ್ಮ್ಯಾನ್ ಮಹೇಶ್ ಸ್ಥಳಕ್ಕೆ ಭೇಟಿ ನೀಡಿದರು. ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

