ಮಂಗಳೂರಿನ 4 ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ವಿಜಯ
ಮಂಗಳೂರು: ಮಂಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ನ ನಾಲ್ವರು ಅಲ್ಪಸಂಖ್ಯಾತ ಸಮುದಾಯದವರೇ ಗೆದ್ದಿರುವುದು ವಿಶೇಷ. ಜೆ.ಆರ್. ಲೋಬೊ, ಮೊಯಿದ್ದೀನ್ ಬಾವಾ, ಯು.ಟಿ. ಖಾದರ್ ಹಾಗೂ ಜೈನ ಸಮುದಾಯಕ್ಕೆ ಸೇರಿದ ಅಭಯಚಂದ್ರ ಜೈನ್ ಅವರ ಗೆಲವು ಮತ್ತು ಬಿಜೆಪಿ ಸೋಲಿನ ವಿಶ್ಲೇಷಣೆ ಹೀಗೆ ಮಾಡಬಹುದು.
ಕಾಂಗ್ರೆಸ್ 40 ವರ್ಷಗಳಿಂದ ದಕ್ಷಿಣದಲ್ಲಿ ಕ್ರೈಸ್ತ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸುತ್ತಿವೆ. 20 ವರ್ಷಗಳಿಂದ ಸೋಲುತ್ತಲೇ ಇದ್ದಾರೆ. ಈ ಬಾರಿ ಗೆಲ್ಲದಿದ್ದರೆ ಮುಂದೆಂದೂ ಇಲ್ಲ ಎಂಬ ಭಾವನೆ ಕ್ರೈಸ್ತ ಸಮುದಾಯದಲ್ಲಿಯೇ ಭಾವನೆ ಬಂದಿತ್ತು. ಈ ಬಾರಿ ಕಾಂಗ್ರೆಸ್ ಅನಿವಾಸಿ ಉದ್ಯಮಿ ನೆರವಿನಿಂದ ಹಣ ನೀರಿನಂತೆ ಖರ್ಚು ಮಾಡಿದ್ದು, ಬಹುಸಂಖ್ಯಾತರ ಜತೆಗೆ ಅಲ್ಪಸಂಖ್ಯಾತರೆಲ್ಲ ಒಗ್ಗೂಡಿ ಹೊಸ ಹುಮ್ಮಸ್ಸಿನಿಂದ ಪ್ರಚಾರ ನಡೆಸಿದ್ದರು.
ಕರಾವಳಿಯಲ್ಲಿ ಜೆಡಿಎಸ್ ಅಸ್ತಿತ್ವ ಇಲ್ಲದ ಕಾರಣ ಶೇ.90ಕ್ಕೂ ಹೆಚ್ಚು ಮಂದಿ ಕ್ರೈಸ್ತರು ಕಾಂಗ್ರೆಸ್ ಬೆಂಬಲಿಸುತ್ತಿರುವುದನ್ನು ಸಮೀಕ್ಷೆಯೊಂದು ತಿಳಿಸಿತ್ತು. ಸಾಧು ಸ್ವಭಾವದ ಎನ್.ಯೋಗೀಶ್ ಭಟ್ಟರಿಗೆ ಮಾತ್ರ ಕ್ರೈಸ್ತ ಮತಗಳು ಬೀಳುತ್ತವೆ ಎನ್ನುವ ಮಾತು ಕ್ಷೇತ್ರಾದ್ಯಂತ ಚಾಲ್ತಿಯಲ್ಲಿತ್ತು. ಆದರೆ ಚರ್ಚ್ ದಾಳಿ ಬಳಿಕ ಕ್ರೈಸ್ತರು ಒಗ್ಗಟ್ಟಾಗಿದ್ದರು. ಬಹುಸಂಖ್ಯೆಯಲ್ಲಿ ವಿದೇಶದಿಂದ ಬಂದು ಮತ ಚಲಾಯಿಸಿರುವುದು ವಿಶೇಷ.
ಅಲ್ಪಸಂಖ್ಯಾತ ಮೋರ್ಚಾ ಫ್ರಾಂಕ್ಲಿನ್ ಮೊಂತೆರೊ ಪ್ರಚಾರದಲ್ಲಿ ಕಾಣದೆ ಇರುವುದು. ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ನಗರಾಧ್ಯಕ್ಷ ಶ್ರೀಕರ ಪ್ರಭು ಬಳಿ ಇದ್ದ ಕಾರ್ಯಕರ್ತರು ಉಮೇದು ತೋರಿಸದೆ ಇರುವುದು. ಯೋಗೀಶ್ ಭಟ್ ನಯಾ ಪೈಸೆ ಹಣ ಮಾಡುವವರಲ್ಲ, ನಾನು ಭ್ರಷ್ಟನಲ್ಲ ಎಂದು ಅಧಿವೇಶನದಲ್ಲಿ ಎದೆ ತಟ್ಟಿ ಹೇಳಿದವರು. ಆದರೆ ಹಣ ಮಾಡಿಕೊಂಡ ಬಿಜೆಪಿ ಕುಳಗಳು ಈ ಬಾರಿ ಹಣ ಚೆಲ್ಲಲಿಲ್ಲ. ಅದೇ ರೀತಿ ಭಟ್ ನೆರವಿನ ಬದಲು ಸಲಹೆಗಳನ್ನೇ ನೀಡುತ್ತಾರೆ ಎಂಬ ಆರೋಪ ಇತ್ತು. ಹೀಗಾಗ ಹಣ ಮತ್ತು ಬೆಂಬಲ ಇಲ್ಲದ ಕಾರಣ ಕಾರ್ಯಕರ್ತರು ಫೀಲ್ಡ್ನಲ್ಲಿ ಕಡಿಮೆಯಾದರು.
ಉತ್ತರದಲ್ಲಿ ಪಾಲೇಮಾರ್ ತತ್ತರ: ಉತ್ತರದಲ್ಲಿ ಕೃಷ್ಣ ಜೆ.ಪಾಲೆಮಾರ್ಗೆ ಆಡಳಿತ ವಿರೋಧಿ ಅಲೆ ಜತೆಗೆ ಅವರ ಜನಪ್ರಿಯತೆ ನೀಲಿ ಚಿತ್ರ ಹಗರಣದಿಂದ ಕಳೆಗುಂದಿತ್ತು. ಎಷ್ಟೇ ಅಭಿವೃದ್ಧಿ ಕಾಮಗಾರಿಗಳು ನಡೆದರೂ ನಿರೀಕ್ಷೆ ಸದಾ ಹೆಚ್ಚಿರುವುದರಿಂದ ಅತೃಪ್ತ ಮತದಾರರ ಸಂಖ್ಯೆಯೂ ಹೆಚ್ಚಿತು. ಆದರೆ ಕಾಂಗ್ರೆಸ್ನ ಟಿಕೆಟ್ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಕೈಯಿಂದ ಉದ್ಯಮಿ ಮೊಯ್ದಿನ್ ಬಾವ ಕೈಗೆ ಬಂದ ಬಳಿಕ ಪಾಲೆಮಾರ್ಗೆ ಗೆಲ್ಲುವ ಆಸೆ ಕಾರ್ಯಕರ್ತರಲ್ಲಿ ಹುಟ್ಟಿಸಿದ್ದರು. ವಿಜಯಕುಮಾರ್ ಶೆಟ್ಟಿ ಬೆಂಬಲಿಗರೇ ತುಂಬಿದ್ದ ಉತ್ತರ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಜನಪ್ರತಿನಿಧಿಗಳು ಬಾವ ವಿರುದ್ಧ ಎದ್ದು ನಿಂತರು. ಕ್ಷೇತ್ರ ಗೆಲ್ಲಿಸಿಕೊಟ್ಟರೆ ಮಾತ್ರ ಸ್ಥಾನಮಾನ ನೀಡುವ ಆಸೆಯನ್ನು ವಿಜಯಕುಮಾರ್ ಶೆಟ್ಟಿಗೆ ವರಿಷ್ಠರು ಹುಟ್ಟಿಸಿದರು. ಹೀಗಾಗಿ ಭಿನ್ನಮತ ಶಮನವಾಯಿತು.
ಜೆಡಿಎಸ್ನ ಗುಲಾಂ ಆರಂಭದಲ್ಲಿ ಪ್ರಚಾರ ನಡೆಸಿದರೂ ಕೊನೆಗೆ ಬಾವ ಮನವಿಗೆ ಮಣಿದು ಸುಮ್ಮನಾದರು. ಎಸ್ಡಿಪಿಐ ಅಭ್ಯರ್ಥಿಯನ್ನು ಸುಮ್ಮನಿರಿಸಲು ಅಜ್ಮೇರ್ ದರ್ಗಾದ ಧರ್ಮಗುರುಗಳನ್ನು ಕರೆಸುವ ಪ್ರಯತ್ನ ನಡೆಯಿತು. ಬಹಳ ಸದ್ದುಮಾಡಿದ್ದ ಎಸ್ಡಿಪಿಐ ಕೇವಲ 3,323 ಮತಗಳಿಸಲಷ್ಟೇ ಶಕ್ತವಾಯಿತು. ಕೆಜೆಪಿಯೂ 2,104 ಮತ ಪಡೆದು ಬಿಜೆಪಿಗೆ ಮುಳುವಾಯಿತು. ಹೀಗಾಗಿ ಕಳೆದಬಾರಿ 14526 ಮತಗಳ ಅಂತರದಿಂದ ಸೋತ ಮೊಯ್ದಿನ್ ಬಾವ ಈ ಬಾರಿ 3860 ಮತಗಳಿಂದ ಗೆದ್ದರು. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಕಡಿಮೆ ಅಂತರದಿಂದ ಗೆದ್ದ ಕ್ಷೇತ್ರ!
ಅಪಪ್ರಚಾರದಿಂದ ಖದರ್ ಹೆಚ್ಚಿತು: ಉಳ್ಳಾಲ ಮಂಗಳೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಕಮ್ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಗೆಲವಿನ ಅಂತರ ಈ ಬಾರಿ ಹೆಚ್ಚಾಗಿದೆ. ಕಣದಲ್ಲಿ 8 ಮುಸ್ಲಿಂ ಅಭ್ಯರ್ಥಿಗಳಿದ್ದರೂ ಯಾರೂ ಕೂಡಾ ಪ್ರಭಾವ ಬೀರಿಲ್ಲ. ಪಕ್ಷೇತರ ಮುಸ್ಲಿ ಅಭ್ಯರ್ಥಿಗಳು ನೂರು ಇನ್ನೂರು ಮತ ಪಡೆಯಲಷ್ಟೇ ಶಕ್ತವಾದರು. ಎಸ್ಡಿಪಿಐ, ಕಾಂಗ್ರೆಸ್ ಕಾರ್ಯಕರ್ತರು ಹೊಡೆದಾಟ ನಡೆಸಿದರೂ ಮತಗಳಿಕೆಯಲ್ಲಿ ಎಸ್ಡಿಪಿಐ ಭಾರಿ ಹಿಂದೆ ಉಳಿಯಿತು.
ಖಾದರ್ ನಾಗಮಂಡಲ, ದೇವಸ್ಥಾನ, ಮದುವೆ, ಗೃಹಪ್ರವೇಶ ಮೊದಲಾದ ಕಾರ್ಯಕ್ರಮಗಳಿಗೆ ಸದಾ ಹೋಗುತ್ತಿರುವುದು ಬಹುಸಂಖ್ಯಾತ ಮತ ಗಳಿಕೆ ಹೆಚ್ಚಳಕ್ಕೆ ಕಾರಣವಾಗಿದೆ. ಆದರೆ ಇದೇ ಕಾರಣ ಮುಂದಿಟ್ಟುಕೊಂಡು ಖಾದರ್ ವಿರುದ್ಧ ಅಪಪ್ರಚಾರ ನಡೆಯಿತು. ಮೂರ್ತಿ ಪೂಜೆ ಮಾಡುವ ಮೂಲಕ ಧರ್ಮ ಪಾಲನೆ ಮಾಡುತ್ತಿಲ್ಲ ಎಂಬ ಆರೋಪ ಮಾಡಿದರು. ಆದರೆ ಇದಕ್ಕೆ ಕ್ಯಾರೆ ಎನ್ನದ ಮತದಾರ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಂತರದಿಂದ ಖಾದರ್ನನ್ನು ಗೆಲ್ಲಿಸಿದರು.
ಅಭಯರಿಗೆ ಮತ್ತೆ ಅಭಯ: ಜಿಲ್ಲೆಯಲ್ಲಿ ತ್ರಿಕೋನ ಸ್ಪರ್ಧೆ ಇರುವ ಏಕೈಕ ಕ್ಷೇತ್ರ ಮೂಡುಬಿದಿರೆ. ಜೆಡಿಎಸ್ ಅಮರನಾಥ ಶೆಟ್ಟಿ ತಮ್ಮ ಕೊನೆ ಚುನಾವಣೆ ಹೇಳಿಕೊಂಡಿದ್ದು ಠೇವಣಿ ಉಳಿಸಿಕೊಳ್ಳಲು ನೆರವಾಗಿದೆ. ಬಿಜೆಪಿಯಿಂದ ಉಮಾನಾಥ ಕೋಟ್ಯಾನ್ ಸ್ಪರ್ಧಿಸಿ ಕಾಂಗ್ರೆಸ್ ಸೋಲಿನ ಅಂತರ ಕಡಿಮೆ ಮಾಡಿದ್ದಾರೆ ಎನ್ನುವುದಷ್ಟೇ ಲಾಭ. ಮೂಲ್ಕಿ ಭಾಗದಲ್ಲಿ ಕಾಂಗ್ರೆಸ್ನ ಅಭಯಚಂದ್ರ ಜೈನ್ ಮೇಲೆ ಒಲವು ಕಡಿಮೆ ಇದ್ದರೂ ಕಿನ್ನಿಗೋಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತರು ಕೈ ಬಲಪಡಿಸಿದ್ದಾರೆ. ಬಿಲ್ಲವರು ಈ ಬಾರಿ ತಮ್ಮ ಸಮುದಾಯದ ಅಭ್ಯರ್ಥಿ ಕೋಟ್ಯಾನ್ ಅವರನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸಿಲ್ಲ.
- ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

