ಶಕ್ತಿ ಕೇಂದ್ರದಲ್ಲಿ ಬಿಜೆಪಿ ನಿಶ್ಯಕ್ತಿ ಸೋಲು, ಕಾರಣ ನೂರು!
ಮಂಗಳೂರು: ಆಡಳಿತ ವಿರೋಧಿ ಅಲೆಗೆ ಪೂರ್ತಿ ಕೊಚ್ಚಿ ಹೋಗುತ್ತಿದ್ದ ಬಿಜೆಪಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ಕ್ಷೇತ್ರ ಹುಲ್ಲುಕಡ್ಡಿ ಆಸರೆಯಾಗಿ ಗುಟುಕು ಜೀವ ಉಳಿಸಿದೆ. ಮಂಗಳೂರು ತಾಲೂಕಲ್ಲಿ ಎಲ್ಲ 4 ಸ್ಥಾನ ಕಾಂಗ್ರೆಸ್ ಪಾಲಾಗಿದೆ.
ಬಿಜೆಪಿ ಭದ್ರ ಕೋಟೆ, ಹಿಂದುತ್ವ ಪ್ರತಿಪಾದಕರ, ಆರೆಸ್ಸೆಸ್ ಸುಪ್ತ ಪ್ರವಾಹವೇ ಹರಿಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೀಗಾಗಲೂ ಅನೇಕ ಕಾರಣಗಳಿವೆ.
ರಾಜ್ಯದಲ್ಲಿ ಬೀಸಿದ ಪ್ರಬಲ ಆಡಳಿತ ವಿರೋಧಿ ಅಲೆಯೇ ಇದಕ್ಕೆ ಪ್ರಮುಖ ಕಾರಣ. ಹಿಂದುತ್ವ ನೆಲೆಯಲ್ಲಿ ಕಳೆದ ಬಾರಿ ಬಿಜೆಪಿ ಗೆದ್ದಿದ್ದರೂ ಬಿಜೆಪಿ ನಾಯಕರ ಭ್ರಷ್ಟಾಚಾರ, ಅನಾಚಾರ, ಅತ್ಯಾಚಾರ ಪ್ರಕರಣಗಳು ಒಂದೊಂದಾಗಿ ಹೊರ ಬೀಳುತ್ತಿದ್ದಂತೆಯೇ ಸಂಘಪರಿವಾರದ ಸಂಘಟನೆಗಳು ನೇಪತ್ಯಕ್ಕೆ ಸರಿದವು. ಹಿಂದುತ್ವ ಸವಕಲು ನಾಣ್ಯವಾಯಿತು. ಚರ್ಚ್ ದಾಳಿಯಿಂದ ಅಳಿದುಳಿದ ಅಲ್ಪಸಂಖ್ಯಾತರು ಬಿಜೆಪಿಯಿಂದ ಹಿಂದೆ ಸರಿದರು. ಪಬ್ ದಾಳಿ, ಹೋಮ್ ಸ್ಟೇ ದಾಳಿಯಿಂದ ಮಾಡರ್ನ್ ಯುವ ಜನತೆಗೆ ಬಿಜೆಪಿ ಅಪಥ್ಯವಾಯಿತು. ಇದರ ನಡುವೆ ಅಭ್ಯರ್ಥಿ ಮೇಲಿದ್ದ ನೀಲಿ ಚಿತ್ರ ಹಗರಣ, ಭ್ರಷ್ಟಾಚಾರ ಆರೋಪವೂ ಬಿಜೆಪಿ ಸೋಲಿಗೆ ಕಾರಣವಾಯಿತು.
ಹೋಮ್ ಸ್ಟೇ ದಾಳಿ ಬಳಿಕ ಹಿಂದು ಜಾಗರಣೆ ವೇದಿಕೆ ಕಾರ್ಯಕರ್ತರು ಜೈಲಲ್ಲಿದ್ದು, ಹತ್ತಿರ ಒಂದು ವರ್ಷವಾದರೂ ಬಿಜೆಪಿ ಸರ್ಕಾರ ಅವರನ್ನು ಬಿಡಿಸಲು ಪ್ರಯತ್ನ ಪಟ್ಟಿಲ್ಲ ಎಂಬ ಸಿಟ್ಟು ಕೆಲ ಹಿಂದು ಕಾರ್ಯಕರ್ತರಿಗಿದೆ. ಇದೂ ಕೂಡಾ ಬಿಜೆಪಿಗೆ ಹಿನ್ನಡೆಯಾಗಿದೆ.
ಆರ್ಎಸ್ಎಸ್ ಶಕ್ತಿ ಕೇಂದ್ರ ರಾಜಕೀಯದಲ್ಲಿ ಕೈಯಾಡಿಸಿ ಕಿರಿಕಿರಿ ಮಾಡುವ ಬಗ್ಗೆ ಆರೋಪಗಳು ಕೇಳಿಬಂದಿದ್ದವು. ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ 1.25 ಲಕ್ಷ ಮಂದಿ ಆರ್ಎಸ್ಎಸ್ ಕಾರ್ಯಕರ್ತರನ್ನು ಸೇರಿಸಿ ಸಮಾವೇಶ ಮಾಡಿದರೂ, ನರೇಂದ್ರ ಮೋದಿ ಪ್ರಚಾರಕ್ಕೆ ಬಂದರೂ ಕಳೆಗುಂದಿದ ಬಿಜೆಪಿಯನ್ನು ಮೇಲೆತ್ತಲಾಗಲಿಲ್ಲ.
ಪಾಠ ಕಲಿಸಿದರು: 'ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲಿ ಬಿಜೆಪಿ ಸೋತಿದೆ. ನಾವು ಅವಕಾಶ ಕೊಟ್ಟದ್ದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂಬ ಸಿಟ್ಟು ಮತದಾರರಿಗಿತ್ತು. ಜನಪರ ಅಡಳಿತ ಮಾಡಿದರೂ ನಾಯಕರ ಕಚ್ಚಾಟದಿಂದ ಜನ ಬೇಸತ್ತು ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಬಯಸಿದ್ದರು. ಮತದಾರ ಬೆಂಬಲಿಸಿದ್ದು, ಕಾಂಗ್ರೆಸ್ ಮೇಲೆ ಪ್ರೀತಿಯಿಂದಲ್ಲ. ಮತದಾರ ಕೊಟ್ಟ ಶಿಕ್ಷೆಯನ್ನು ಸ್ವೀಕರಿಸುತ್ತೇವೆ' ಎನ್ನುತ್ತಾರೆ ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ.
ಸ್ವಾತಂತ್ರ್ಯಕ್ಕೆ ಧಕ್ಕೆ: ಜಿಲ್ಲೆಯಲ್ಲಿಯೂ ಬಿಜೆಪಿ ವಿರೋಧಿ ಅಲೆ ಬೀಸಿದೆ. ವಿದ್ಯಾರ್ಥಿಗಳು ಪರಸ್ಪರ ಮಾತನಾಡಿದರೆ ಹಲ್ಲೆ ಮಾಡುವ ಪ್ರಕರಣಗಳು, ಪಬ್ ದಾಳಿ, ನೈತಿಕ ಪೊಲೀಸ್ ಗಿರಿಗೆ ಬೆಂಬಲ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಬಿಜೆಪಿ ಸೋಲಿಗೆ ಕಾರಣ. ಕಾಂಗ್ರೆಸ್ ಇದುವರಿಗೆ ಸೋತಿದ್ದರೆ ಅದು ಬಿಕ್ಕಟ್ಟಿನಿಂದ. ಈ ಬಾರಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ. ಪತ್ರಿಕಾ ಸ್ವಾತಂತ್ರ್ಯಕ್ಕೆ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡಿದರು. ಈ ಎಲ್ಲ ಕಾರಣದಿಂದ ಕಾಂಗ್ರೆಸ್ ಜಯಭೇರಿ ಬಾರಿಸಿತು ಎನ್ನುತ್ತಾರೆ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್.
-ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

