ಕೈಲ ಪ್ರಾಥಮಿಕ ಶಾಲೆ: ನಾಳೆ ಶತಮಾನೋತ್ಸವಕ್ಕೆ ಚಾಲನೆ
ಬಂಟ್ವಾಳ: ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳ ಪೈಕಿ ಅತ್ಯಂತ ಹಳೆಯದಾಗಿದ್ದರೂ ಶಿಸ್ತು ಮತ್ತು ಗುಣಮಟ್ಟದ ಶಿಕ್ಷಣಕ್ಕಾಗಿ ರಾಜ್ಯಮಟ್ಟದ ಪ್ರಶಸ್ತಿ ಮುಡಿಗೆ ಏರಿಸಿಕೊಂಡಿರುವ ಕೈಲ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಶತಮಾನೋತ್ಸವ ಸಂಭ್ರಮಾಚರಣೆಗೆ ಚಾಲನೆ ದೊರೆಯಲಿದೆ.
ಗ್ರಾಮೀಣ ಪ್ರದೇಶವಾಗಿರುವ ಕೈಲದಲ್ಲಿ ಕಳೆದ 1912ರಲ್ಲಿ ಇಲ್ಲಿನ ಶಿಕ್ಷಣ ಪ್ರೇಮಿ ದಿ.ಮಾವಂತೂರು ಕೋಟಿ ಶೆಟ್ಟಿ ನೇತೃತ್ವದಲ್ಲಿ ಸ್ಥಳೀಯ ಮಹಾಗಣಪತಿ ದೇವಳದ ಆವರಣದಲ್ಲಿ ಬಡಮಕ್ಕಳಿಗಾಗಿ ಉಚಿತ ಶಿಕ್ಷಣದೊಂದಿಗೆ ಕಿರಿಯ ಪ್ರಾಥಮಿಕ ಶಾಲೆ ಆರಂಭಗೊಂಡಿತ್ತು.
ಆ ಬಳಿಕ 1958- 59ರಲ್ಲಿ ಹಿರಿಯ ಪ್ರಾಥಮಿಕ ಶಾಲೆ ಮತ್ತು 1968ರಲ್ಲಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಬಡ್ತಿಗೊಂಡಿತ್ತು.
ಸ್ಥಳೀಯ ಕೈಲ ಗ್ರಾಮ ಮಾತ್ರವಲ್ಲದೆ ರಾಯಿ, ಪಂಜಿಕಲ್ಲು, ಅರಳ, ಸೋರ್ನಾಡು ಮತ್ತಿತರ ಗ್ರಾಮೀಣ ಪ್ರದೇಶಗಳಿಂದ ಸುಮಾರು ಐದು ಸಾವಿರಕ್ಕೂ ಮಿಕ್ಕಿ ಮಂದಿ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡಿದ್ದಾರೆ.
ಈ ಹಿಂದೆ ಶೇ.100 ಫಲಿತಾಂಶ ಸಾಧನೆ ಹಾಗೂ ಬಾಲ ಯಕ್ಷಗಾನ ಮೇಳ ಮತ್ತಿತರ ಪಠ್ಯೇತರ ಚಟುವಟಿಕೆಗಾಗಿ ಜಿಲ್ಲಾ ಮಟ್ಟ ಮತ್ತು ರಾಜ್ಯಮಟ್ಟದಲ್ಲಿ ಉತ್ತಮ ಶಾಲೆ, ಉತ್ತಮ ಮುಖ್ಯ ಶಿಕ್ಷಕ ಪ್ರಶಸ್ತಿ ದೊರೆತಿದೆ. ಇದೀಗ ಶತಮಾನೋತ್ಸವ ಹಿನ್ನೆಲೆಯಲ್ಲಿ ಸುಮಾರು ರು. 35 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ಸುಸಜ್ಜಿತ ರಂಗಮಂದಿರ ಮತ್ತು ಅಂಗನವಾಡಿ ಕೇಂದ್ರ ಕಟ್ಟಡ ಸಿದ್ಧಗೊಂಡಿದೆ.
ಈಗಾಗಲೇ ಎಂ. ಪದ್ಮರಾಜ ಬಲ್ಲಾಳ್, ಜೆ.ಕೆ. ಪಾವನಾದೇವಿ, ಡಾ. ಶ್ಯಾಮ್ ಭಟ್, ಎ. ರಾಮಣ್ಣ ರೈ ನೇತೃತ್ವದಲ್ಲಿ ಶತಮಾನೋತ್ಸವ ಸಮಿತಿ, ಜಿ. ದಾಮೋದರ ಬಂಗೇರ ಮತ್ತು ರಾಮಚಂದ್ರ ಶೆಟ್ಟಿಗಾರ್ ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಮಿತಿ, ಮೋಹನ್ ಕೆ. ಶ್ರೀಯಾನ್ ನೇತೃತ್ವದಲ್ಲಿ ಸ್ಮರಣ ಸಂಚಿಕೆ ಸಮಿತಿ ರಚನೆಗೊಂಡಿದೆ.
12ರಿಂದ ಡಿಸೆಂಬರ್ ತನಕ ಒಟ್ಟು ಏಳು ತಿಂಗಳು ವಿವಿಧ ಕ್ರೀಡೆ, ಸಾಂಸ್ಕೃತಿಕ ಮತ್ತಿತರ ಚಟುವಟಿಕೆಗಳ ಮೂಲಕ ಶತಮಾನೋತ್ಸವ ಸಮಾರಂಭ ಆಚರಿಸಲು ಸಮಿತಿ ನಿರ್ಧರಿಸಿದೆ.
ಇದೇ 12ರಂದು ಸಂಜೆ ಜಿ.ಪಂ. ಅಧ್ಯಕ್ಷ ಕೆ. ಕೊರಗಪ್ಪ ನಾಯ್ಕ ಅವರು ನೂತನ ರಂಗಮಂದಿರ ಉದ್ಘಾಟಿಸಲಿದ್ದು, ಶಾಸಕ ಬಿ. ರಮಾನಾಥ ರೈ ಅವರು ಅಂಗನವಾಡಿ ಕೇಂದ್ರ ಉದ್ಘಾಟಿಸುವರು.
ತಾ.ಪಂ. ಅಧ್ಯಕ್ಷೆ ಲಲಿತಾ ಎಸ್. ನಾಯ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸ್ಥಳೀಯ ಜಿ.ಪಂ. ಸದಸ್ಯೆ ನಳಿನಿ ಬಿ. ಶೆಟ್ಟಿ, ತಾ.ಪಂ. ಸದಸ್ಯ ವಸಂತ ಕುಮಾರ್ ಅಣ್ಣಳಿಕೆ, ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಮಧುಕರ ಬಂಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ. ಉಸ್ಮಾನ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಸಮಿತಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

