ಮಾಣಿ ಪೆರಾಜೆ: 22ರಂದು 3.75 ಕೋಟಿ ವೆಚ್ಚದ ಸಭಾಭವನ ಲೋಕಾರ್ಪಣೆ
ವಿಟ್ಲ: ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ವಠಾರದಲ್ಲಿ 3.75 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಸಭಾಭವನವನ್ನು ಮೇ 19ರಿಂದ ಮೇ 22 ರ ತನಕ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಲೋಕಾರ್ಪಣೆಗೊಳಿಸಲಾಗುವುದು ಎಂದು ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಹಾಗೂ ಮಾಣಿ ಮಠದ ಆಡಳಿತ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ತಿಳಿಸಿದ್ದಾರೆ.
ಮಠದ ಐತಿಹ್ಯ: ಬ್ರಹ್ಮೈಕ್ಯರಾದ ಶ್ರೀ ರಾಘವೇಂದ್ರ ಭಾರತಿ ಸ್ವಾಮೀಜಿ 1967ರಲ್ಲಿ ಮಾಣಿಯ ಪೆರಾಜೆಯಲ್ಲಿ ಭೂಮಿ ಖರೀದಿಸಿ, 1973ರಲ್ಲಿ ಮಠ ನಿರ್ಮಿಸಿದರು. 1989ರಲ್ಲಿ ವೇದ ಪಾಠಶಾಲೆ ಆರಂಭವಾಯಿತು. 36ನೇ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಉಪಸ್ಥಿತಿಯಲ್ಲಿ 2003ರಲ್ಲಿ ಆಂಜನೇಯನ ಗುಡಿ ನಿರ್ಮಾಣವಾಗಿದೆ. ಇಲ್ಲಿ ಗೋಶಾಲೆ, ಕೃಷಿ ಭೂಮಿ ಇದ್ದು, ವಾರ್ಷಿಕೋತ್ಸವ, ಧರ್ಮೋಪನಯನ ನಡೆಯುತ್ತದೆ. ಇದೀಗ 2013ರಲ್ಲಿ ನೂತನ ಸಭಾಭವನ ಲೋಕಾರ್ಪಣೆಗೊಳ್ಳುತ್ತಿದೆ ಎಂದು ಅವರು ತಿಳಿಸಿದರು. 19ರಂದು ಬೆಳಗ್ಗೆ ಗಂಟೆ 9 ರಿಂದ ಕರ ಸೇವೆ ನಡೆಯಲಿದೆ. 20ರಂದು ರುದ್ರ ಪಠನ ಕಾರ್ಯಕ್ರಮವಿದೆ ಎಂದು ನಾರಾಯಣ ಭಟ್ ತಿಳಸಿದರು. ಸಭಾಭವನ 28500 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. 60 ಅಡಿ ಅಗಲ, 40 ಅಡಿ ಉದ್ದದ ವೇದಿಕೆ ನಿರ್ಮಾಣಗೊಂಡಿದೆ. ಇದು ಶ್ರೀಗಳು ನಡೆಸುವ ಶ್ರೀರಾಮಕಥಾ ಕಾರ್ಯಕ್ರಮಕ್ಕೆ ಅನುಕೂಲವಾಗಿರಬೇಕು ಎಂದು ಉದ್ದೇಶಿಸಲಾಗಿದೆ. ಸುಸಜ್ಜಿತ ಮತ್ತು ಎಲ್ಲ ಆಧುನಿಕ ವ್ಯವಸ್ಥೆಗಳನ್ನು ಹೊಂದಿರುವ ಈ ಕಟ್ಟಡದಲ್ಲಿ ಪಾಕಶಾಲೆ, 7 ಸುಸಜ್ಜಿತ ವಸತಿ ಕೊಠಡಿಗಳು, ಸ್ನಾನಗೃಹ, ಶೌಚಾಲಯ, ವಿಶ್ರಾಂತಿ ಕೊಠಡಿಗಳನ್ನು ಹೊಂದಿದೆ.
ಕಾರ್ಯಕ್ರಮಗಳ ವಿವರ: 19ರಂದು ಸಂಜೆ 7 ಗಂಟೆಗೆ ವಾಸ್ತು ಪೂಜೆ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ಸುದರ್ಶನ ಹೋಮ, ಮೇ 20ರಂದು ಬೆಳಗ್ಗೆ 6.20ರ ವೃಷಭ ಲಗ್ನದಲ್ಲಿ ಸಭಾಭವನ ಪ್ರವೇಶೋತ್ಸವ, ಶ್ರೀ ಸೀತಾರಾಮಚಂದ್ರ ಚಂದ್ರಮೌಳೀಶ್ವರ ಶ್ರೀ ರಾಜರಾಜೇಶ್ವರೀ ದೇವತಾ ಸಹಿತ ಶ್ರೀಗಳ ದಿವ್ಯ ಸಾನ್ನಿಧ್ಯ, ಸ್ವರ್ಣ ಮಂಟಪದಲ್ಲಿ ಶ್ರೀಕರಾರ್ಚಿತ ಪೂಜೆ, 1000 ಮಂದಿಯ ರುದ್ರಪಠನ, ಅಷ್ಟಾವಧಾನ ಸೇವೆ, ಶ್ರೀ ಗುರು ಪಾದುಕಾ ಪೂಜೆ, ಭಿಕ್ಷಾ ಸೇವೆ, ಉಗ್ರಾಣ ಮುಹೂರ್ತ, ಹೊರೆಕಾಣಿಕೆ ಸಮರ್ಪಣೆ, 1000 ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಲಿದೆ.
21ರಂದು ಶ್ರೀಕರಾರ್ಚಿತ ಪೂಜೆ, ಮೇ 22ರಂದು ಸಾಮೂಹಿಕ ಉಪನಯನ, ಶ್ರೀಕರಾರ್ಚಿತ ಪೂಜೆ, ಶತರುದ್ರ ಪಾರಾಯಣ, 2 ಗಂಟೆಗೆ ಶ್ರೀಗಳ ಸಾನ್ನಿಧ್ಯದಲ್ಲಿ ಸಭಾಭವನ ಲೋಕಾರ್ಪಣೆಯ ಸಭಾ ಕಾರ್ಯಕ್ರಮ ನಡೆಯಲಿದೆ. ಮಠದ ಸರ್ವಾಧ್ಯಕ್ಷ ಟಿ. ಮಡಿಯಾಲ್, ಹೊರನಾಡು ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರೀ ಕ್ಷೇತ್ರದ ಧರ್ಮಕರ್ತ ಭೀಮೇಶ್ವರ ಜೋಷಿ, ಕೋಲ್ಕತ್ತಾ ಇಮಾಮಿ ಗ್ರೂಪ್ಸ್ನ ಆರ್.ಎಸ್. ಗೋಯಂಕಾ, ಎಂ.ಎನ್. ಭಟ್ ಮದ್ಗುಣಿ, ಸಿ.ಎಂ. ದಿವಾಕರ ಶಾಸ್ತ್ರಿ, ಕೆ.ಜಿ. ಭಟ್, ವಿ.ವಿ. ಭಟ್, ಟಿ. ಶ್ಯಾಮ ಭಟ್, 'ಕನ್ನಡಪ್ರಭ ಮತ್ತು ಸುವರ್ಣನ್ಯೂಸ್' ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಆರ್.ಎಸ್. ಹೆಗಡೆ, ಎಸ್.ಜಿ. ಹೆಗಡೆ, ಕೆ. ರಾಮ ಭಟ್ ಉರಿಮಜಲು, ಎಂ.ಕೆ. ಜನಾರ್ದನ, ಯಮುನಾ ಭಾಗ್ವತ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪ್ಪು, ಕೋಶಾಧ್ಯಕ್ಷ ಬಂಗಾರಡ್ಕ ಜನಾರ್ದನ ಭಟ್, ದಿಗ್ದರ್ಶಕ ಮಂಡಳಿ ಸದಸ್ಯ ಎಂ.ಬಿ. ಮುಳಿಯ, ಆಡಳಿತ ಸಮಿತಿ ಕೋಶಾಕಾರಿ ಮೈಕೆ ಗಣೇಶ್ ಭಟ್, ಉಪ್ಪಿನಂಗಡಿ ಮಂಡಲದ ಉಪಾಧ್ಯಕ್ಷ ಹೇರಂಭ ಶಾಸ್ತ್ರಿ, ಮಹಾಮಂಡಲ ಸೇವಾ ವಿಭಾಗ ಪ್ರಧಾನ ಕೆ.ಟಿ. ವೆಂಕಟೇಶ್ವರ ನೂಜಿ, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಕೆ.ಪಿ. ಭಟ್, ಕಾರ್ಯದರ್ಶಿ ಸೇರಾಜೆ ಸುಬ್ರಹ್ಮಣ್ಯ ಭಟ್, ಕೋಶಾಧಿಕಾರಿ ಪಕಳಕುಂಜ ಗೋಪಾಲಕೃಷ್ಣ ಭಟ್, ಸಾವಿತ್ರಿ ಮುಳಿಯ, ಕೋಮಲೆ ಕೃಷ್ಣ ಭಟ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

