ದಕ್ಷಿಣ ಕನ್ನಡ

ಬೈಕ್‌ಗೆ ಲಾರಿ ಡಿಕ್ಕಿ: ಸಹಸವಾರ ಸ್ಥಳದಲ್ಲೇ ಸಾವು

Published On :

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಆಲಂಕಾರಿನ ಮಾಯಿಲ್ಗ ಎಂಬಲ್ಲಿ ಸೋಮವಾರ ಮಧ್ಯಾಹ್ನ ಬೈಕ್‌ಗೆ ಲಾರಿ ಡಿಕ್ಕಿಯಾಗಿ ಬೈಕ್ ಸಹಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಆಲಂಕಾರು ಗ್ರಾಮದ ಕೇಪುಳು ದಿ. ಕೃಷ್ಣಪ್ಪ ಪೂಜಾರಿ ಅವರ ಪುತ್ರ ದಿವಾಕರ (30) ಮೃತರು. ಗಾಯಗೊಂಡ ವ್ಯಕ್ತಿ, ದಿವಾಕರನ ಸಹೋದರ ದಿನೇಶ ಎನ್ನಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ಸೋಮವಾರ ಮಧ್ಯಾಹ್ನ ಆಲಂಕಾರಿನಿಂದ ಕೊಂತೂರು ಕಡೆಗೆ ದಿನೇಶ ಚಲಾಯಿಸುತ್ತಿದ್ದ ಬೈಕ್ ಮಾಯಿಲ್ಗ ಎಂಬಲ್ಲಿಗೆ ತಲುಪುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಲಾರಿ ಬೈಕ್‌ಗೆ  ಡಿಕ್ಕಿಯಾಯಿತು. ಪರಿಣಾಮ ಬೈಕ್‌ನಲ್ಲಿದ್ದ ಸಹಸವಾರ ದಿವಾಕರನ ತಲೆಗೆ ಗಂಭೀರ ಗಾಯಗೊಂಡು  ಸ್ಥಳದಲ್ಲಿಯೇ ಸಾವನ್ನಪ್ಪಿದ.
ಸಂಚಾರ ಅಸ್ತವ್ಯಸ್ತ: ಘಟನೆ ನಡೆದ ಸ್ಥಳದಲ್ಲಿ ಸ್ವಲ್ಪ ಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕಡಬ ಪೊಲೀಸರು ಸ್ಥಳಕ್ಕೆ ಧಾವಿಸಿ ರಸ್ತೆ ಸಂಚಾರ ಸುಗಮಗೊಳಿಸಿದರು. ಕಾಸರಗೋಡಿನಲ್ಲಿ ಕೆಂಪು ಕಲ್ಲು ಕೊರೆಯುವ ಯಂತ್ರ ಆಪರೇಟರಾಗಿ ಕೆಲಸ ಮಾಡುತ್ತಿದ್ದ ದಿವಾಕರ ಕೆಲ ದಿನಗಳ ಹಿಂದೆ ರಜೆಯಲ್ಲಿ  ಊರಿಗೆ  ಬಂದಿದ್ದನೆನ್ನಲಾಗಿದೆ.  ಮೃತರು ಪತ್ನಿ, ಎರಡು ವರ್ಷದ ಮಗು, ತಾಯಿ ಹಾಗೂ ಸಹೋದರ ದಿನೇಶನನ್ನು ಅಗಲಿದ್ದಾರೆ. ಘಟನೆಗೆ ಸಂಬಂಧಿಸಿ ಪೂವಪ್ಪ ಪೂಜಾರಿ ಕಡಬ ಠಾಣೆಯಲ್ಲಿ ದೂರು ನೀಡಿದ್ದು,  ಕಡಬ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರ್ಥಿಕ ಅಡಚಣೆ: ವ್ಯಕ್ತಿ ಆತ್ಮಹತ್ಯೆ
ಉಡುಪಿ: ಆರ್ಥಿಕ ಅಡಚಣೆಯಿಂದ ಮಾನಸಿಕವಾಗಿ ನೊಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕೊರಂಗ್ರಪಾಡಿ ಗ್ರಾಮದ ಮಾರ್ಪಳ್ಳಿಯ ಮಹಾಲಿಂಗೇಶ್ವರ ದೇವಸ್ಥಾನ ಬಳಿ ಭಾನುವಾರ ನಡೆದಿದೆ. ಕೃಷ್ಣಮೂರ್ತಿ (49) ಮೃತರು. ಇವರ ಮನೆಯವರು ಬಬ್ಬುಸ್ವಾಮಿ ದೇವರ ಬ್ರಹ್ಮಕಲಶೋತ್ಸವಕ್ಕೆ ಹೋಗಿದ್ದ ಸಂದರ್ಭ ಕೋಣೆಯ ಸಿಲೀಂಗ್ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಆಡಚಣೆಯಿಂದ ಮಾನಸಿಕವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಮೃತರ ಮಗ ಕಾರ್ತಿಕ್ ನೀಡಿದ ದೂರಿನಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣು ಬಿಗಿದು ಮಹಿಳೆ ಆತ್ಮಹತ್ಯೆ
ಮಣಿಪಾಲ: ಇಲ್ಲಿನ ಶಿವಳ್ಳಿ ಗ್ರಾಮದ ವಿ.ಪಿ. ನಗರದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಮೃತರು ಗಾಯತ್ರಿ (30), ಈಕೆ ಇಲ್ಲಿನ ನಿವಾಸಿ ಜನಾರ್ದನ ಶೆಟ್ಟಿಗಾರ ಎಂಬವರ ತಂಗಿ. ಮದುವೆಯಾಗಿ ದಾಂಪತ್ಯ ವಿರಸದಿಂದ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ತವರು ಮನೆಯಲ್ಲಿದ್ದರು. ಇದೇ ಕಾರಣಕ್ಕೆ ಮನನೊಂದು ಮನೆಯಲ್ಲಿ ಸೋಮವಾರ ಬೆಳಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಹೋದರ ಜನಾರ್ದನ ಶೆಟ್ಟಿಗಾರ್ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮುದ್ರದಲ್ಲಿ ಮುಳುಗಿದ ಬಾಲಕಿ ಸಾವು
ಮಲ್ಪೆ: ಇಲ್ಲಿನ ಮಲ್ಪೆ ಬೀಚ್‌ನಲ್ಲಿ ಸಮುದ್ರ ಪಾಲಾಗುತ್ತಿದ್ದ ಬಾಲಕಿಯನ್ನು ಸ್ಥಳೀಯರು ರಕ್ಷಿಸಿದರಾದರೂ, ಬಾಲಕಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಮೃತ ಬಾಲಕಿ ವಿಜಯಲಕ್ಷ್ಮೀ (15), ಇಲ್ಲಿಗೆ ಸಮೀಪದ ಕಕ್ಕುಂಜೆ ಗ್ರಾಮದ ನಿವಾಸಿ. ಸೋಮವಾರ ಸಂಜೆ 5 ಗಂಟೆಗೆ ಸಂಬಂಧಿಕರೊಂದಿಗೆ ಮಲ್ಪೆ ಸಮುದ್ರ ತೀರಕ್ಕೆ ವಿಹಾರಕ್ಕೆಂದು ಬಂದಿದ್ದಳು. ನೀರಿನ ಅಲೆಗಳ ಜೊತೆ ಆಟ ಆಡುತ್ತಾ ನೀರಲ್ಲಿ ಕೊಚ್ಟಿಕೊಂಡು ಹೋದಳು. ತಕ್ಷಣ ಅಲ್ಲಿದ್ದ ಮೀನುಗಾರರು ಆಕೆಯನ್ನು ರಕ್ಷಿಸಿದರು. ಪ್ರಜ್ಞಾಹೀನಳಾಗಿದ್ದ ಆಕೆಯನ್ನು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮುದ್ರಪಾಲಾದ ಮಗುವಿನ ಮೃತದೇಹ ಪತ್ತೆ
ಮಲ್ಪೆ: ಭಾನುವಾರ ಸಂಜೆ ಇಲ್ಲಿ ವಿಹಾರದ ಬೋಟ್ ಮುಗುಚಿ ಸಮುದ್ರಪಾಲಾದ ದೊಡ್ಡಬಳ್ಳಾಪುರದ ಪ್ರಸನ್ನ ಕುಮಾರ್ ಎಂಬವರ ಮಗು ಹಿತೇಶ್ (2) ಮೃತದೇಹ ಮಲ್ಪೆ ತೀರದಲ್ಲಿ ಪತ್ತೆಯಾಗಿದೆ.
ಲಾರಿ ಡಿಕ್ಕಿ: ಬೈಕ್ ಸವಾರ ಗಾಯ
ಕಾರ್ಕಳ: ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಇಲ್ಲಿನ ಶಿರ್ವ ಗ್ರಾಮದಲ್ಲಿ ನಡೆದಿದೆ. ಪಿಲಾರು ಗ್ರಾಮದ ನಿವಾಸಿ ಕೆನ್ಯೂಟ್ ಮೆಂಡೆನ್ಸೂ ಗಾಯಗೊಂಡವರು. ಶಿರ್ವದಿಂದ ಮೂಡುಬೆಳ್ಳೆಯತ್ತ ಹೋಗುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.
ಬಾಗಲಕೋಟೆ ಕಾರ್ಮಿಕ ಆತ್ಮಹತ್ಯೆ
ಮಂಗಳೂರು: ಕದ್ರಿ ಜೋಗಿಮಠ ಬಳಿ ಬಾಗಲಕೋಟೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತಪಟ್ಟವನ ಅಂಗಿಯಲ್ಲಿ ಬರೆದಿದ್ದ ಮೊಬೈಲ್ ನಂಬರ್ ಸಂಪರ್ಕಿಸಿದಾಗ ಮೃತಪಟ್ಟವರು ಎಲ್ಲಪ್ಪ (30) ಎಂದು ತಿಳಿದು ಬಂದಿದೆ. ಭಾನುವಾರ ಬೆಳಗ್ಗೆ 9 ಗಂಟೆಗೆ ಸ್ಥಳೀಯರು ವ್ಯಕ್ತಿ ಸುಳಿದಾಡುತ್ತಿರುವುದನ್ನು ನೋಡಿ ಅಲ್ಲಿಂದ ಹೋಗುವಂತೆ ಸೂಚಿಸಿದ್ದರು. ಸೋಮವಾರ ಬೆಳಗ್ಗೆ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಜೋಗಿಮಠ ಸಮೀಪ ಬಾಗಲಕೋಟೆಯ 16 ಕುಟುಂಬಗಳು ವಾಸಿಸುತ್ತಿದ್ದು, ಮಂಗಳೂರು ನಗರದಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಎಲ್ಲಪ್ಪರನ್ನು ಹೊರತುಪಡಿಸಿ ಎಲ್ಲರೂ ಬಾಗಲಕೋಟೆಯ ಜಾತ್ರೆಗೆ ತೆರಳಿದ್ದರು.
ಸಾರಾಯಿ ಚಟ: ವ್ಯಕ್ತಿ ಆತ್ಮಹತ್ಯೆ
ಮಂಗಳೂರು: ಬೋಳಿಯಾರು ಪೊಯ್ಯ ನಿವಾಸಿ ಸಂಜೀವ ಬಂಗೇರ (58) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಪರೀತ ಸಾರಾಯಿ ಕುಡಿತ ಚಟವಿತ್ತು. ಮದುವೆ ಕೂಡಾ ಆಗಿರಲಿಲ್ಲ. ಯಾವುದೇ ಕಾರಣಕ್ಕೆ ಮನನೊಂದು ಮದ್ಯ ಜತೆ ಭಾನುವಾರ ರಾತ್ರಿ ವಿಷ ಸೇವಿಸಿದ್ದರು. ಆಸ್ಪತ್ರೆಗೆ ದಾಖಲಿಸಿದ್ದು, ಸೋಮವಾರ ಬೆಳಗ್ಗೆ 7 ಗಂಟೆಗೆ ಮೃತಪಟ್ಟರು.
ರು. 2.26 ಲಕ್ಷದ ಅಡಕ್ಕೆ ಕಳವು
ಮಂಗಳೂರು: ಬಂದರು ಉತ್ತರ ದಕ್ಕೆಯಲ್ಲಿ ಫಿದಾ ಎಂಟರ್ ಪ್ರೈಸಸ್‌ಗೆ ನುಗ್ಗಿದ ಕಳ್ಳರು 2.26 ಲಕ್ಷ ಮೌಲ್ಯದ ಅಡಕೆ ಕಳವು ಮಾಡಿದ್ದಾರೆ. ಅಬ್ದುಲ್ ಅಝೀಝ್ ಎಂಬವರಿಗೆ ಸೇರಿದ ಗೋಡೌನ್ ಶಟರ್ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳರು 21 ಗೋಣಿ ಅಡಕೆ  ಕಳವು ಮಾಡಿದ್ದಾರೆ. ಅಝೀಝ್ ಗೋಡೌನ್‌ಗೆ ಶನಿವಾರ ರಾತ್ರಿ ಶಟರ್ ಹಾಕಿ ಹೋಗಿದ್ದರು. ಸೋಮವಾರ ಬೆಳಗ್ಗೆ ನೋಡುವಾಗ ಕಳವಾಗಿತ್ತು. ಬಂದರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೂಲ್ಕಿ: ಮಹಿಳೆ ಸರ ಸೆಳೆದು ಪರಾರಿ
ಮೂಲ್ಕಿ: 70 ವರ್ಷ ವಯಸ್ಸಿನ ಮಹಿಳೆಯ ಸರ ಸೆಳೆದು ಪರಾರಿಯಾದ ಘಟನೆ ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾನಂಪಾಡಿಯ ಕೋಟೆಕೇರಿ ರಸ್ತೆಯಲ್ಲಿ ಸೋಮವಾರ ನಡೆದಿದೆ. ಕೋಟೆಕೇರಿ ನವರತ್ನ ಮನೆ ಎದುರಿನ ಓಣಿಯಲ್ಲಿ ಸುಶೀಲ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಅಪರಿಚಿತರು, ರಸ್ತೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಸುಶೀಲರ ಕುತ್ತಿಗೆಯಲ್ಲಿದ್ದ 4 ಪವನ್ ಚಿನ್ನದ ಸುಮಾರು ರು. 80 ಸಾವಿರ ಮೌಲ್ಯದ ಚೈನ್ ಎಳೆದು ಪರಾರಿಯಾದರು. ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.