ದಕ್ಷಿಣ ಕನ್ನಡ

ರೈತರಿಂದ ಬ್ಯಾಂಕ್ ಸೇವಾ ಶುಲ್ಕ, ಸೇವಾ ತೆರಿಗೆ ವಸೂಲಿ ಸಲ್ಲದು: ಕಿಸಾನ್ ಸಂಘ ಆಗ್ರಹ

Published On :

ಪುತ್ತೂರು: ರಾಜ್ಯ ಸರ್ಕಾರ ಸಾಲ ಮನ್ನಾ ಮತ್ತು ಬಡ್ಡಿ ಮನ್ನಾ ಮಾಡಿರುವ ಫಲಾನುಭವಿಗಳಿಂದ ಇದೀಗ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 'ಸಾಲ ಮನ್ನಾ ಬಿಲ್' ಮತ್ತು 'ಬಡ್ಡಿ ಮನ್ನಾ ಬಿಲ್' ತಯಾರಿಸಲೆಂದು ಸೇವಾ ಶುಲ್ಕ ಮತ್ತು ಸೇವಾ ತೆರಿಗೆ ವಸೂಲು ಮಾಡುತ್ತಿದೆ. ಸಹಕಾರಿ ತತ್ವಕ್ಕೆ ವಿರೋಧವಾಗಿ ರೈತರಿಂದ ಈ ವಸೂಲಿ ನಡೆಯುತ್ತಿದ್ದು ಇದನ್ನು ತಕ್ಷಣವೇ ರದ್ದುಪಡಿಸದಿದ್ದಲ್ಲಿ ಭಾರತೀಯ ಕಿಸಾನ್ ಸಂಘ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ಶೆಟ್ಟಿ ಎಚ್ಚರಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ರೈತರಿಗೆ ರು. 1 ಲಕ್ಷದ ಬೆಳೆ ಸಾಲ ಬಡ್ಡಿ ಮನ್ನಾ, ರು. 3 ಲಕ್ಷಕ್ಕೆ ಶೇ.1ರ ಬಡ್ಡಿ ವಸೂಲಿ ಮತ್ತು ಬೆಳೆ ಸಾಲಗಳಲ್ಲಿ ರು. 25 ಸಾವಿರ ಸಾಲ ಮನ್ನಾ ಮಾಡಿದೆ.
ಆದರೆ ದ.ಕ. ಜಿಲ್ಲಾ ಕೆಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಸಭೆಯಲ್ಲಿ ತೀರ್ಮಾನಿಸಿದಂತೆ ಸಾಲ ಮನ್ನಾ ಬಿಲ್ ಮತ್ತು ಬಡ್ಡಿ ಮನ್ನಾ ಬಿಲ್ಲು ತಯಾರಿಸಲು ತುಂಬಾ ಖರ್ಚಾಗುವುದರಿಂದ ಶೇ.1ರಂತೆ ಸೇವಾ ಶುಲ್ಕ ಮತ್ತು ಸೇವಾ ತೆರಿಗೆ ವಸೂಲು ಮಾಡುತ್ತಿದೆ. ಕಳೆದ ಏ.1ರಿಂದ ಸಾಲಗಾರ ಸದಸ್ಯರಿಂದ ಈ ವಸೂಲು ಬಾಜಿ ನಡೆಯುತ್ತಿದೆ. ಇದು ಸಹಕಾರಿ ತತ್ವಕ್ಕೆ ವಿರೋಧವಾಗಿದ್ದು ಇದನ್ನು ತಕ್ಷಣ ರದ್ದು ಪಡಿಸಬೇಕು ಮತ್ತು ಈಗಾಗಲೇ ವಸೂಲಾತಿ ಮಾಡಿರುವ ಹಣ ರೈತರಿಗೆ ಹಿಂತಿರುಗಿಸಬೇಕು ಎಂದು ಅವರು ಆಗ್ರಹಿಸಿದರು.
ಹೋರಾಟ ಎಚ್ಚರಿಕೆ: ಈ ಬಗ್ಗೆ ರಾಜ್ಯಪಾಲರಿಗೂ ಸಂಘಟನೆ ವತಿಯಿಂದ ಮನವಿ ಮಾಡಲಾಗಿದೆ ಎಂದ ಅವರು, ರಾಜ್ಯದ ಸಹಕಾರಿ ಮಂತ್ರಿಗಳಿಗೂ ಮನವರಿಕೆ ಮಾಡಲಾಗುವುದು. ಅದಾಗ್ಯೂ ರದ್ದು ಪಡಿಸದಿದ್ದಲ್ಲಿ ಸಂಘಟನೆ ವತಿಯಿಂದ ರೈತರ ಪರವಾಗಿ ಹೋರಾಟ ನಡೆಸಲಾಗುವುದು ಎಂದರು.
ಭಾರತೀಯ ಕಿಸಾನ್ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರಮೇಶ್ ಬಿ.ಕೆ., ಜಿಲ್ಲಾ ಕೋಶಾಧಿಕಾರಿ ಗೋಪಾಲ ರೈ ಮತ್ತು ಹಿರಿಯ ಸಹಕಾರಿ ಬಿ.ಟಿ.ನಾರಾಯಣ ಭಟ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.