ದಲಿತ ಕುಟುಂಬದ ಮನೆ ದುರಸ್ತಿ
ಉಪ್ಪಿನಂಗಡಿ: ಮನೆಗೆ ಮರ ಬಿದ್ದು ದಿನ ಇಪ್ಪತ್ತು ಕಳೆದರೂ ಮನೆ ದುರಸ್ತಿಯಾಗದೇ ಸಂಕಷ್ಟದಲ್ಲಿದ್ದ ಉಪ್ಪಿನಂಗಡಿಯ ನಟ್ಟಿಬೈಲು ಎಂಬಲ್ಲಿನ ದಲಿತ ಕುಟುಂಬದ ಬವಣೆಯನ್ನು ಪತ್ರಿಕೆ ವರದಿ ಮಾಡಿದ ಬೆನ್ನಲ್ಲೇ ಕಂದಾಯ ಇಲಾಖೆ ಕಾರ್ಯತತ್ಪರವಾಗಿ ಮನೆಯನ್ನು ಸರ್ಕಾರಿ ವೆಚ್ಚದಲ್ಲಿ ದುರಸ್ತಿ ಪಡಿಸಿದೆ.
ಪೂರ್ಣಿಮಾ ಮತ್ತು ಆಕೆಯ ಗಂಡ ರಮೇಶ ದಂಪತಿಯ ಈ ಮನೆಯಲ್ಲಿ ರಮೇಶನ ತಾಯಿ, ತಂಗಿ ಸಹಿತ ಪುಟ್ಟ ಪುಟ್ಟ ಮಕ್ಕಳಿರುವ ಕುಟುಂಬವದು. ಅತ್ಯಂತ ಕಡು ಬಡತನದಲ್ಲಿರುವ ಈ ಕುಟುಂಬದ ಏಕೈಕ ಆಸರೆಯಾಗಿರುವ ಮನೆಗೆ ಕಳೆದ 20 ದಿನಗಳ ಹಿಂದೆ ಸುರಿದ ಭಾರಿ ಗಾಳಿ ಮಳೆಗೆ ಮರವೊಂದು ಬಿದ್ದು ಭಾಗಶಃ ಹಾನಿಯಾಗಿತ್ತು. ಬಿದಿರಿನಿಂದ ಮಾಡಿದ ಛಾವಣಿಯು ಯಾವುದೇ ಸಂದರ್ಭದಲ್ಲಿ ಬೀಳುವ ಸ್ಥಿತಿಯಲ್ಲಿತ್ತಾದರೂ ಛಾವಣಿಯನ್ನು ದುರಸ್ತಿಗೊಳಪಡಿಸುವ ಕಾರ್ಯ ಮನೆ ಮಂದಿಯಿಂದಲೂ, ಸರ್ಕಾರದಿಂದಲೂ ನಡೆಯದೇ ಕುಟುಂಬ ನಿತ್ಯ ಸಂಕಷ್ಟಕ್ಕೆ ಒಳಗಾಗಿತ್ತು.
ದಲಿತೋದ್ಧಾರದ ಹತ್ತು ಹಲವು ಯೋಜನೆಗಳು ಸರ್ಕಾರದಿಂದ ಜಾರಿಯಲ್ಲಿದ್ದರೂ ಈ ಬಡಪಾಯಿ ದಲಿತ ಕುಟುಂಬವೊಂದು ಮನೆ ಇದ್ದೂ ಇಲ್ಲದಂತೆ ಇರುವ ಸ್ಥಿತಿಯನ್ನು ಉಲ್ಲೇಖಿಸಿ 'ಕನ್ನಡಪ್ರಭ' ಇತ್ತೀಚೆಗೆ (ಮೇ 20ರಂದು) ವರದಿಯನ್ನು ಪ್ರಕಟಿಸಿತ್ತು. ಈ ವರದಿಯ ಫಲಶ್ರುತಿಯಾಗಿ ಶುಕ್ರವಾರ ಮನೆಯ ಛಾವಣಿಯನ್ನು ದುರಸ್ತಿಗೊಳಿಸಲಾಯಿತು.
ಪತ್ರಿಕಾ ವರದಿ ಪ್ರಕಟಗೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡ ಕಂದಾಯ ಇಲಾಖೆ, ಈ ಮನೆಯ ದುರಸ್ತಿಗೆ 6,300 ನ್ನು ನಿಗದಿಗೊಳಿಸಿ ಮಂಜೂರುಗೊಳಿಸಿತ್ತು. ಹಣ ಮಂಜೂರುಗೊಂಡರೂ ದುರಸ್ತಿ ಕಾರ್ಯವನ್ನು ನಿರ್ವಹಿಸುವ ಜನರು ಲಭ್ಯರಾಗದೆ ಹೋದಾಗ, ಸ್ಥಳೀಯ ದಲಿತ ನಾಯಕ, ಕಾರ್ಮಿಕ ಸಂಘಟನೆಯ ಕಾರ್ಯದರ್ಶಿ ಮಹಾಲಿಂಗ ಮತ್ತು ಪಂಚಾಯಿತಿ ಸದಸ್ಯ ಅಬ್ಬಾಸ್ ಬಸ್ತಿಕಾರ್ ಅವರು ಮುಂದೆ ನಿಂತು ಕಾರ್ಮಿಕರನ್ನು ಒಟ್ಟುಗೂಡಿಸಿ ಮನೆ ದುರಸ್ತಿ ಕಾರ್ಯ ಪೂರ್ಣಗೊಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

