ಕುದುರೆ ಬಂಡಿಯಲ್ಲಿ ಮಕ್ಕಳು, ಮೆರವಣಿಗೆಯಲ್ಲಿ ಗಣ್ಯರು
-ಜಿತೇಂದ್ರ ಕುಂದೇಶ್ವರ
ಮಂಗಳೂರು: ಕುದುರೆ ಸಾರೋಟ್ಗಳಲ್ಲಿ ಪುಟ್ಟ, ಪುಟ್ಟ ಮಕ್ಕಳು, ಕುದುರೆ ಮೇಲೆ ಏರಿದ ಚಿಣ್ಣರು, ಮದುವಣಗಿತ್ತಿಯಂತೆ ಕುದುರೆ ಗಾಡಿಗಳಿಗೆ ಶೃಂಗಾರ, ಪುಟ್ಟ ಮಕ್ಕಳೇ ಪ್ರಧಾನ ಆಕರ್ಷಣೆ...
ಇದು, ಸುರತ್ಕಲ್ ಕುಳಾಯಿಶ್ರೀವೆಂಕಟರಮಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಶಾಲೆ ಪ್ರಾರಂಭೋತ್ಸವ ವೈಶಿಷ್ಟ್ಯ.
'ಕುದುರೆ ಬಂಡಿ ಏರೋಣ, ಶಾಲೆ ಕಡೆಗೆ ಸಾಗೋಣ, ಅ ಆ ಇ ಈ ಕಲಿಯೋಣ' ಎಂಬ ಘೋಷ ವಾಕ್ಯದಡಿ ಶುಕ್ರವಾರ ಒಂದನೇ ತರಗತಿ ಮಕ್ಕಳಿಗೆ ಶಾಲೆ ಪ್ರಾರಂಭೋತ್ಸವವನ್ನು ರಥೋತ್ಸವ ಮೂಲಕ ನಡೆಸಿದ್ದಾರೆ. ಕುದುರೆ ಬಂಡಿಯನ್ನು ಬಾಡಿಗೆ ಪಡೆದ ಶಾಲೆ ಶಿಕ್ಷಕರು, ಪುಟ್ಟ ಮಕ್ಕಳನ್ನು ಕುದುರೆ ಬಂಡಿ, ಕುದುರೆಯಲ್ಲಿ ಕುಳ್ಳಿರಿಸಿದರು. ಹೆತ್ತವರು ಬಂಡಿ ಜತೆಯಲ್ಲಿ ಸಾಗಿ ಬಂದರು.
ಪನ್ನೀರ ಸಿಂಚನ: ಪುಟ್ಟ ಮಕ್ಕಳು ಶಾಲೆ ಒಳಗೆ ಪ್ರವೇಶಿಸುವಾಗ ಶಾಲೆಯ ಎಲ್ಲ 15 ಶಿಕ್ಷಕರೂ ಕೂಡ ಎರಡು ಬದಿಯಲ್ಲಿ ಸಾಲಾಗಿ ನಿಂತು ಮದುಮಕ್ಕಳನ್ನು ಎದುರುಗೊಳ್ಳುವಂತೆ ಪನ್ನೀರ ಸಿಂಚನ ಮಾಡಿದರು. ಮಕ್ಕಳ ಮುಖದಲ್ಲಿ ಪುಳಕ, ಸಂಭ್ರಮ.
ವಿಶೇಷ ಎಂದರೆ, ಇಲ್ಲಿ ವೇದಿಕೆ ನಿರ್ಮಿಸಿ ಕಾರ್ಯಕ್ರಮ ಮಾಡುವುದಿಲ್ಲ. ಶುಕ್ರವಾರ ಶಾಲೆಗೆ ಯಾರೆಲ್ಲ ಬರುತ್ತಾರೊ ಅವರೆಲ್ಲ ಅತಿಥಿಗಳೇ. ಆದರೆ ಮಾತನಾಡಲು ಅವರಿಗೆ ವೇದಿಕೆ ಇಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಬರಲಿ ಜನಪ್ರತಿನಿಧಿಗಳೇ ಬರಲಿ ಅವರು ಮಕ್ಕಳ ರಥದ ಮೆರವಣಿಗೆಯಲ್ಲಿಯೇ ಬರಬೇಕು.
ರಥೋತ್ಸವ ಬೆರಗು: ಬೆಳಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ಮಕ್ಕಳ ರಥೋತ್ಸವ ನೋಡಲು ರಸ್ತೆಯಲ್ಲಿ ತೆರಳುವ ಕಾರು, ಬೈಕ್ ಸವಾರು ಒಂದು ಕ್ಷಣ ನಿಲ್ಲಿಸಿ ಖುಷಿಯಿಂದ ಕಣ್ತುಂಬಿದ್ದಾರೆ.
ಕಳೆದ ವರ್ಷ 'ಶಿಕ್ಷಣದ ತೇರಾ ಎಳೆಯೋಣ ಬಾರಾ' ಎಂಬ ಘೋಷ ವಾಕ್ಯದಡಿ ಮೊದಲನೇ ತರಗತಿ ಸೇರುವ ವಿದ್ಯಾರ್ಥಿಗಳನ್ನು ರಥದಲ್ಲಿ ಕೂರಿಸಿ ಏಳನೇ ತರಗತಿ ವಿದ್ಯಾರ್ಥಿಗಳು ರಥ ಎಳೆಯುವ ವ್ಯವಸ್ಥೆ ಮಾಡಲಾಗಿತ್ತು.
1ನೇ ತರಗತಿಗೆ 82 ಮಂದಿ!: ಎಲ್ಲ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿತ ಕಾಣುತ್ತಿದ್ದರೆ ಈ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 487 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕಳೆದವರ್ಷ ಒಂದನೇ ತರಗತಿಗೆ 82 ಮಕ್ಕಳು ಸೇರ್ಪಡೆಯಾಗಿದ್ದರು. ಈ ಬಾರಿ ಮೊದಲ ದಿನವೇ 40 ಮಕ್ಕಳು ಸೇರಿದ್ದು, ವಾರದಲ್ಲಿ 80 ಸಂಖ್ಯೆ ದಾಟಲಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಕೆ.ಕೆ. ಪೇಜಾವರ. 'ಮೂರು ವರ್ಷದ ಹಿಂದೆ ಮೊದಲ ಬಾರಿಗೆ ಶಾಲೆಯಲ್ಲಿ ಪ್ರಾರಂಭೋತ್ಸವ ಮಾಡಿದ್ದು, ರಾಜ್ಯದಲ್ಲಿಯೇ ಮೊದಲ ಬಾರಿ ಆರಂಭಿಸಿದ ಕೀರ್ತಿ ಈ ಶಾಲೆಗೆ ಇದೆ. ಕಳೆದ ವರ್ಷದಿಂದ ಎಲ್ಲ ಶಾಲೆಗಳಲ್ಲಿ ಪ್ರಾರಂಭೋತ್ಸವ ಮಾಡಬೇಕು ಎಂದು ಕಡ್ಡಾಯ ಮಾಡಿತ್ತು. ವಿಶಿಷ್ಟ ಪ್ರಾರಂಭೋತ್ಸವ ಬಳಿಕ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಸ್ಥಳೀಯ ವಿದ್ಯಾಭಿಮಾನಿಗಳು, ಶಿಕ್ಷಕ, ರಕ್ಷಕ ಸಂಘದವರು, ಜನಪ್ರತಿನಿಧಿಗಳು ಖರ್ಚುವೆಚ್ಚ ಭರಿಸುತ್ತಾರೆ' ಸ್ಥಳೀಯ ಶಿಕ್ಷಣ ತಜ್ಞ ಶ್ರೀನಾಥ್ ಕೃಷ್ಣಾಪುರ.
ಪರಿಸರದಲ್ಲಿ 5 ವರ್ಷ10 ತಿಂಗಳು ದಾಟಿದ ಮಕ್ಕಳು ಎಷ್ಟು ಇದ್ದಾರೆ ಎಂಬುದನ್ನು ಸಮೀಕ್ಷೆ ಮಾಡಿದ್ದೇವೆ. ಆದ್ದರಿಂದ ಈ ಬಾರಿಯೂ ಒಂದನೇ ತರಗತಿಗೆ 80ಕ್ಕಿಂತಲೂ ಹೆಚ್ಚು ಮಕ್ಕಳು ಬರುತ್ತಾರೆ ಎನ್ನುತ್ತಾರೆ ಪೇಜಾವರ. ಕಾರ್ಯಕ್ರಮದ ರೂವಾರಿ, ಮುಖ್ಯ ಶಿಕ್ಷಕ ಕೆ.ಕೆ. ಪೇಜಾವರ, ವಿಜ್ಞಾನ ಸರಳ ಮಾದರಿಯಲ್ಲಿ ಮೂರು ಬಾರಿ ರಾಜ್ಯ ಮಟ್ಟದ ವಿಜ್ಞಾನ ಶಿಕ್ಷಕ ಪ್ರಶಶ್ತಿ ಗಳಿಸಿದವರು. ರಾಜ್ಯಾದ್ಯಂತ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿದ್ದಾರೆ.
ರಥೋತ್ಸವದಲ್ಲಿ ಗಣ್ಯರು: ಕಾರ್ಪೊರೇಟರ್ಗಳಾದ ಗಣೇಶ್ ಹೊಸಬೆಟ್ಟು, ಪ್ರತಿಭಾ ಕುಳಾಯಿ, ಆಡಳಿತ ಮಂಡಳಿ ಕಾರ್ಯದರ್ಶಿ ಗಿರಿಧರ್ ಹತ್ವಾರ್, ಶಿಕ್ಷಣ ತಜ್ಞ ಶ್ರೀನಾಥ್ ಕುಳಾಯಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜಯರಾಮ್ ಆಚಾರ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್, ಕ್ಷೇತ್ರ ಸಮನ್ವಯಾಧಿಕಾರಿ ಪೀತಾಂಬರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

